ಹುಣಸೂರು: ನಗರದಲ್ಲಿ ಬುಧವಾರ ಮಧ್ಯಾಹ್ನ ಸತತ ಒಂದು ಗಂಟೆ ಮೂವತ್ತು ನಿಮಿಷ ಸುರಿದ ಭಾರಿ ಮಳೆಯು ಬಿಸಿಲ ವಾತಾವರಣಕ್ಕೆ ತಂಪೆರೆಯಿತು.
ತಾಲ್ಲೂಕಿನ ಬಿಳಿಕೆರೆ, ಹನಗೋಡು, ಹುಣಸೂರು ಮತ್ತು ಗಾವಡಗೆರೆ, ಬನ್ನಿಕುಪ್ಪೆ ಭಾಗದಲ್ಲಿಯೂ ಗುಡುಗು, ಸಿಡಿಲಿನಿಂದ ಕೂಡಿದ ಭಾರಿ ಮಳೆಯಾಗಿದೆ. ಕಳೆದ 20 ದಿನಗಳಿಂದ ಮಳೆ ಕೊರತೆಯಿಂದ ಜನರು ಬಸವಳಿದಿದ್ದರು. ರೈತರು ಎಪ್ರಿಲ್ ಮೊದಲ ವಾರ ಬಿದ್ದ ಮಳೆಗೆ ತಂಬಾಕು ಬೆಳೆಯನ್ನು ನಾಟಿ ಮಾಡಿದ್ದು, ಬಳಿಕ ಮಳೆಯಿಲ್ಲದೆ ಆಕಾಶದತ್ತ ನೋಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗ ಆತಂಕ ನಿವಾರಣೆಯಾಗಿದೆ.
ಚುರುಕು: ತಂಬಾಕು ಸಸಿ ನಾಟಿ ಮಾಡಿರುವ ರೈತರು ಬುಧವಾರ ಬಿದ್ದ ಮಳೆಗೆ ರಸಗೊಬ್ಬರ ನೀಡಲು ಮುಂದಾಗುವ ಸಾಧ್ಯತೆ ಇದ್ದು, ಭೂಮಿ ಹದಗೊಳಿಸಿ ತಂಬಾಕು ಸಸಿ ನಾಟಿ ಮಾಡಲು ಸಜ್ಜಾಗಿರುವ ರೈತರಿಗೂ ಮಳೆ ವರವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.