ಹಂಪಾಪುರ: ಅವಿಭಜಿತ ಎಚ್.ಡಿ. ಕೋಟೆ ತಾಲ್ಲೂಕಿನ ನಾಲ್ಕು ಪ್ರಮುಖ ಜಲಾಶಯಗಳಲ್ಲಿ ಒಂದಾದ ಹೆಬ್ಬಳ್ಳ ಜಲಾಶಯ ಸಂಪೂರ್ಣ ತುಂಬಿ ನಾಲೆಗೆ ನೀರು ಬಿಟ್ಟಿದ್ದು ರೈತರ ಕೃಷಿ ಚಟುವಟಿಕೆ ಬಿರುಸುಗೊಂಡಿದೆ.
ನೀರಿಗಾಗಿ ಕಾಯುತ್ತಿದ್ದ ಅಚ್ಚುಕಟ್ಟು ಪ್ರದೇಶಗಳಾದ ಹಂಪಾಪುರ ಹಾಗೂ ಕಸಬಾ ಹೋಬಳಿಯ ರೈತರಲ್ಲಿ ಸಂಭ್ರಮ ಮನೆ ಮಾಡಿದೆ. ನಿಗದಿತ ಸಮಯಕ್ಕೆ ನೀರು ಬಿಟ್ಟಿರುವುದರಿಂದ ರೈತರು ಬೇರೆ ಬೆಳೆಯತ್ತ ಗಮನಹರಿಸದೆ ಭತ್ತ ಬಿತ್ತನೆಯತ್ತ ಮುಖ ಮಾಡಿದ್ದು ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದಾರೆ.
‘ನಾಲೆಯೂ ಸುಮಾರು 3,050 ಎಕರೆ ಅಚ್ಚುಕಟ್ಟು ಪ್ರದೇಶವನ್ನು ಹೊಂದಿದೆ. ಹೆಬ್ಬಳ್ಳ ಜಲಾಶಯವು 2,311 ಅಡಿ ಗರಿಷ್ಠ ಮಟ್ಟವಿದ್ದು ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಈ ಬಾರಿ ಭತ್ತಕ್ಕೆ ಸಂಪೂರ್ಣ ನೀರನ್ನು ನೀಡಲಾಗುವುದು’ ಎಂದು ಜಲಾಶಯ ಸಿಬ್ಬಂದಿ ತಿಳಿಸಿದ್ದಾರೆ.
‘ರೈತರು ಈಗಾಗಲೇ ಬಿತ್ತನೆ ಕಾರ್ಯ ಆರಂಭಿಸಿದ್ದಾರೆ, ಜಲಾಶಯದ ಸಿಬ್ಬಂದಿಯು ನಿಯಮದಂತೆ 15 ದಿನ ನೀರು ಹರಿಸುವುದು ಮತ್ತು 10 ದಿನ ನೀರು ನಿಲ್ಲಿಸುವ ಕ್ರಿಯೆಯನ್ನು ಅನುಸರಿಸಲಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಅವಶ್ಯವಿದ್ದಲ್ಲಿ ಹೆಚ್ಚಿನ ದಿನಗಳ ಕಾಲ ನೀರನ್ನು ಹರಿಸಲಾಗುವುದು’ ಎಂದು ಹೆಬ್ಬಳ್ಳ ಜಲಾಶಯದ ಎಂಜಿನಿಯರ್ ನಟಶೇಖರಮೂರ್ತಿ ತಿಳಿಸಿದರು.
ವಿವಿಧ ತಳಿ ಭತ್ತ ಲಭ್ಯ: ‘ರೈತರಿಗೆ ಮೂರು ವಿವಿಧ ತಳಿಯ ಭತ್ತವನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. 25 ಕೆ.ಜಿ. ತೂಗುವ ಜ್ಯೋತಿ ಭತ್ತದ ಮೂಟೆಗೆ ಸಾಮಾನ್ಯ ವರ್ಗಕ್ಕೆ ₹1,025 ಮತ್ತು ಪರಿಶಿಷ್ಟ ಪಂಗಡ, ಪರಿಶಿಷ್ಟ ವರ್ಗದ ರೈತರಿಗೆ ₹929, IR64 ಭತ್ತಕ್ಕೆ ಸಾಮಾನ್ಯ ವರ್ಗಕ್ಕೆ ₹875 ಹಾಗೂ ಪರಿಶಿಷ್ಟ ಪಂಗಡ, ಪರಿಶಿಷ್ಟ ವರ್ಗದ ರೈತರಿಗೆ ₹775, NR15048 ತಳಿಯ ಬಿತ್ತನೆ ಭತ್ತಕ್ಕೆ ಸಾಮಾನ್ಯ– ₹1050 ಮತ್ತು ಪರಿಶಿಷ್ಟ ರೈತರಿಗೆ ₹950 ದರದಲ್ಲಿ ಬಿತ್ತನೆ ಬೀಜಗಳನ್ನು ಮಾರಾಟ ಮಾಡಲಾಗುತ್ತಿದೆ. ಇದರಿಂದಾಗಿ ರೈತರಿಗೆ ₹300 ರಿಯಾಯಿತಿ ದೊರೆಯಲಿದೆ’ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದರು.
‘16 ಸಾವಿರ ಎಕರೆಯಲ್ಲಿ ಭತ್ತ ನಾಟಿ ಗುರಿ’:
ಹೆಬ್ಬಳ್ಳ ಜಲಾಶಯ ಸೇರಿದಂತೆ ಎಚ್.ಡಿ.ಕೋಟೆ ತಾಲ್ಲೂಕಿನ ತಾರಕ ನುಗು ಮತ್ತು ಕಬಿನಿ ಜಲಾಶಯ ವ್ಯಾಪ್ತಿಯ 16061.5 ಎಕರೆ ಪ್ರದೇಶದಲ್ಲಿ ಭತ್ತ ನಾಟಿಗೆ ಈ ಬಾರಿ ಗುರಿ ಹೊಂದಲಾಗಿದೆ. ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ನೀಡಲು ಕೃಷಿ ಇಲಾಖೆ 2045 ಕ್ವಿಂಟಾಲ್ ಬಿತ್ತನೆ ಭತ್ತವನ್ನು ದಾಸ್ತಾನು ಇರಿಸಲಾಗಿದೆ. ಇದುವರೆಗೂ 1500 ಕ್ವಿಂಟಾಲ್ ಬಿತ್ತನೆ ಭತ್ತವನ್ನು ರೈತರು ಖರೀದಿಸಿದ್ದು ಇನ್ನೂ 400 ಕ್ವಿಂಟಾಲ್ ಖರೀದಿಯ ನಿರೀಕ್ಷೆ ಇದೆ ಕೆಲ ರೈತರು ಖಾಸಗಿಯವರಿಂದ ಬಿತ್ತನೆ ಬೀಜ ಖರೀದಿಸುತ್ತಿದ್ದಾರೆ’ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ವೈ.ಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.