ಬೆಂಗಳೂರು: ಮೈಸೂರು ನಗರ ಪಾಲಿಕೆ ಮೇಯರ್ ಸ್ಥಾನಕ್ಕೆ ಶುಕ್ರವಾರ ನಡೆಯಬೇಕಿದ್ದ ಚುನಾವಣೆಗೆ ಹೈಕೋರ್ಟ್ ಗುರುವಾರ ಮಧ್ಯಂತರ ತಡೆ ನೀಡಿದೆ.
ಚುನಾವಣೆ ಸಂಬಂಧ ಪಾಲಿಕೆ ಆಯುಕ್ತರು ದಿನಾಂಕ ನಿಗದಿಪಡಿಸಿ ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ಸದಸ್ಯ ಪ್ರದೀಪ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮೊಗದಂ ಅವರು, ಈ ಆದೇಶ ಹೊರಡಿಸಿದರು.
‘ಮೈಸೂರಿನಲ್ಲಿ ಲಾಕ್‌ಡೌನ್ ಜಾರಿಯಲ್ಲಿ ಇರುವ ಕಾರಣ ಜೂ.21ರವರೆಗೆ ಮೇಯರ್ ಚುನಾವಣೆ ನಡೆಸಬಾರದು. 21ರ ನಂತರ ಚುನಾವಣೆ ನಡೆಸುವ ಈ ನಿರ್ಧಾರವನ್ನೂ ಮರುಪರಿಶೀಲಿಸಬೇಕು’ ಎಂದು ಪೀಠ ತಿಳಿಸಿತು.
‘ಮೈಸೂರಿನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಹೀಗಾಗಿಯೇ ಲಾಕ್‌ಡೌನ್ ಅನ್ನು ಜೂನ್ 21ರ ತನಕ ವಿಸ್ತರಿಸಲಾಗಿದೆ. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರನ್ನು ಒಟ್ಟಿಗೆ ಸೇರಿಸಿ ಚುನಾವಣೆ ನಡೆಸುವುದು ಸೂಕ್ತವಲ್ಲ. ಇದರಿಂದ ಕೋವಿಡ್ ಹರಡಬಹುದು. ಇದು ವಿಪತ್ತು ನಿರ್ವಹಣಾ ಕಾಯ್ದೆಯ ಸೆಕ್ಷನ್ 26ರ ಉಲ್ಲಂಘನೆ ಆಗಿದೆ’ ಎಂದು ಅರ್ಜಿದಾರರ ಪರ ವಕೀಲ ಎಲ್.ಎಂ. ಚಿದಾನಂದ ವಾದಿಸಿದರು.
ಅದನ್ನು ಪರಿಗಣಿಸಿದ ಪೀಠ, ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ಚುನಾವಣೆ ನಡೆಸುವುದು ಸೂಕ್ತ ಅಲ್ಲ ಎಂದು ಅಭಿಪ್ರಾಯಪಟ್ಟಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.