ADVERTISEMENT

ವಿದ್ಯುತ್‌ ದರ ಹೆಚ್ಚಳ–ಕಾಂಗ್ರೆಸ್‌ ಪ್ರತಿಭಟನೆ

ಹಿಂಪಡೆಯದಿದ್ದರೆ ಸರ್ಕಾರದ ವಿರುದ್ಧ ರಾಜ್ಯದಾದ್ಯಂತ ಹೋರಾಟದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2020, 1:58 IST
Last Updated 20 ನವೆಂಬರ್ 2020, 1:58 IST
ವಿದ್ಯುತ್ ದರ ಹೆಚ್ಚಳ ಖಂಡಿಸಿ ಮೈಸೂರಿನಲ್ಲಿ ಕಾಂಗ್ರೆಸ್ ಕಚೇರಿ ಮುಂಭಾಗ ಗುರುವಾರ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು (ಎಡಚಿತ್ರ). ಜಿಲ್ಲಾ ಕಾಂಗ್ರೆಸ್ ವತಿಯಿಂದ ಮೈಸೂರಿನಲ್ಲಿ ಇಂದಿರಾ ಗಾಂಧಿ ಅವರ 103ನೇ ಜಯಂತಿ ಆಚರಿಸಲಾಯಿತು
ವಿದ್ಯುತ್ ದರ ಹೆಚ್ಚಳ ಖಂಡಿಸಿ ಮೈಸೂರಿನಲ್ಲಿ ಕಾಂಗ್ರೆಸ್ ಕಚೇರಿ ಮುಂಭಾಗ ಗುರುವಾರ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು (ಎಡಚಿತ್ರ). ಜಿಲ್ಲಾ ಕಾಂಗ್ರೆಸ್ ವತಿಯಿಂದ ಮೈಸೂರಿನಲ್ಲಿ ಇಂದಿರಾ ಗಾಂಧಿ ಅವರ 103ನೇ ಜಯಂತಿ ಆಚರಿಸಲಾಯಿತು   

ಮೈಸೂರು: ವಿದ್ಯುತ್‌ ದರಹೆಚ್ಚಳಖಂಡಿಸಿ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಗುರುವಾರ ಪಕ್ಷದ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ರಾಜ್ಯ ಸರ್ಕಾರದ ಕ್ರಮ ಖಂಡಿಸಿ, ಘೋಷಣೆ ಕೂಗಿದರು. ‘ಜನರ ಅಭಿಪ್ರಾಯ ಪಡೆಯದೆ ದರ ಹೆಚ್ಚಳಮಾಡಲಾಗಿದೆ, ಇದು ಜನ ವಿರೋಧಿ ಸರ್ಕಾರ’ ಎಂದು ದೂರಿದರು.

ಕಾಂಗ್ರೆಸ್‌ ಮುಖಂಡ ಎಂ.ಕೆ.ಸೋಮಶೇಖರ್‌ ಮಾತನಾಡಿ, ‘ರಾಜ್ಯದ ಜನರು ಹಿಂದೆಂದೂ ಕಾಣದಂಥ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬದುಕು ಅಭದ್ರವಾಗಿದೆ. ಇಂಥ ಸಂದರ್ಭದಲ್ಲಿ ದಿನನಿತ್ಯದ ಬದುಕಿಗೆ ಅನಿವಾರ್ಯವಾಗಿರುವ ವಿದ್ಯುತ್ ದರವನ್ನು ಏಕಾಏಕಿ ಹೆಚ್ಚಿಸಿರುವುದು ಅಮಾನವೀಯ ನಡೆ. ಕೆಲಸವಿಲ್ಲದೇ, ಆದಾಯವಿಲ್ಲದೆ ಮತ್ತಷ್ಟು ಮನೆಗಳು ಕತ್ತಲಲ್ಲಿ ಮುಳುಗುತ್ತವೆ. ದರ ಏರಿಕೆ ನಿರ್ಧಾರ ಹಿಂಪಡೆಯದಿದ್ದರೆ ರಾಜ್ಯದಾದ್ಯಂತ ಹೋರಾಟ ನಡೆಸಲಾಗು ವುದು’ ಎಂದು ಎಚ್ಚರಿಸಿದರು.

ADVERTISEMENT

ಪಕ್ಷದ ಗ್ರಾಮಾಂತರ ಅಧ್ಯಕ್ಷ ಬಿ.ಜೆ.ವಿಜಯಕುಮಾರ್‌, ‘ಕೋವಿಡ್‍ನಿಂದ ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿರುದ್ಯೋಗ ಸಮಸ್ಯೆ ತಲೆದೋರಿದೆ. ದುಡಿಮೆ ಇಲ್ಲದಾಗಿದೆ. ಈ ಹಂತದಲ್ಲಿ ವಿದ್ಯುತ್‌ ದರ ಏರಿಕೆ ಮಾಡಿರುವ ರಾಜ್ಯ ಸರ್ಕಾರವು ಜನರನ್ನು ಮತ್ತಷ್ಟು ಸಮಸ್ಯೆಗೆ ಸಿಲುಕಿಸುತ್ತಿದೆ. ಇದು ಜನವಿರೋಧಿ ಕ್ರಮ. ರಾಜ್ಯದ ಜನರ ಮೇಲೆ ನಡೆಸಿದ ಪ್ರಹಾರ’ ಎಂದು ಟೀಕಿಸಿದರು.

‘ವಿದ್ಯುತ್ ದರ ಹೆಚ್ಚಿಸುವ ಮುನ್ನ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕೆಇಆರ್‌ಸಿ ವತಿಯಿಂದ ಜನರ ಅಭಿಪ್ರಾಯ ಸಂಗ್ರಹಿಸಿ ಹೊರೆಯಾಗದ ರೀತಿಯಲ್ಲಿ 10ಪೈಸೆಯಿಂದ 15ಪೈಸೆಯವರೆಗೆ ಹೆಚ್ಚಳ ಮಾಡಲಾಗುತಿತ್ತು. ಈ ಬಾರಿ ಕೋವಿಡ್ ಇದ್ದ ಕಾರಣ ಏಳು ತಿಂಗಳಿನಿಂದ ಜನರ ಅಭಿಪ್ರಾಯ ಪಡೆದಿಲ್ಲ. ರಿಯಾಯಿತಿ ನೀಡಬೇಕಾದ ಸರ್ಕಾರವೇ ಈಗ ವಿದ್ಯುತ್ ದರವನ್ನು ದುಬಾರಿಯನ್ನಾಗಿ ಮಾಡಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಡಾ.ಯತೀಂದ್ರ, ಕೆಪಿಸಿಸಿ ವಕ್ತಾರ ಲಕ್ಷ್ಮಣ್‌, ನಗರ ಅಧ್ಯಕ್ಷ ಆರ್‌.ಮೂರ್ತಿ, ಮರೀಗೌಡ ಇದ್ದರು.

ಇಂದಿರಾ ಗಾಂಧಿ ಸ್ಮರಣೆ

ಜಿಲ್ಲಾ ಕಾಂಗ್ರೆಸ್ ವತಿಯಿಂದ ಗುರುವಾರ ಮಾಜಿ ಪ್ರಧಾನಿ ಇಂದಿರಾ ಗಾಂಧಿಅವರ 103ನೇ ಜಯಂತಿ ಆಚರಿಸಲಾಯಿತು. ಪಕ್ಷದ ಕಚೇರಿ ಮುಂದೆ ಇಂದಿರಾ ಭಾವಚಿತ್ರಇರಿಸಿ, ಹೂವುಗಳಿಂದ ಸಿಂಗರಿಸಿ ಪುಷ್ಪನಮನ ಸಲ್ಲಿಸಿದರು. ಬಳಿಕ ಮುಖಂಡರು ಇಂದಿರಾ ಅವರ ಗುಣಗಾನ ಮಾಡಿದರು.

ಡಾ.ಎಚ್‌.ಸಿ.ಮಹದೇವಪ್ಪ, ಆರ್‌.ಧ್ರುವನಾರಾಯಣ, ಎಂ.ಕೆ.ಸೋಮಶೇಖರ್‌, ಶಾಸಕರಾದ ಎಚ್‌.ಪಿ.ಮಂಜುನಾಥ್‌, ಡಾ.ಯತೀಂದ್ರ, ಕೆಪಿಸಿಸಿ ವಕ್ತಾರ ಲಕ್ಷ್ಮಣ್‌, ಗ್ರಾಮಾಂತರ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ನಗರ ಅಧ್ಯಕ್ಷ ಆರ್‌.ಮೂರ್ತಿ, ಮರೀಗೌಡ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.