ADVERTISEMENT

ಹಿಮಾಂಶುಗೆ ‘ಮಧುರ ಕಲಾಸೇವಕ’ ಗರಿ

7 ದಶಕದ ‘ಸಂಗೀತ’ ಸಂಘಟನೆ: ಚೆನ್ನೈನ ‘ಲಯ ಮಧುರ ಸಂಗೀತ ಶಾಲೆ’ ಗೌರವ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 2:50 IST
Last Updated 4 ಫೆಬ್ರುವರಿ 2026, 2:50 IST
‘ಎಸ್‌ಪಿವಿಜಿಎಂಸಿ ಟ್ರಸ್ಟ್’ನ ಪಾರಂಪರಿಕ ಸಂಗೀತೋತ್ಸವದಲ್ಲಿ ಸಂಗೀತ ಕಲಾನಿಧಿ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಸಂಗೀತ ಗಾಯಕ ವಿದ್ವಾನ್‌ ಟಿ.ಎಂ.ಕೃಷ್ಣ ಅವರನ್ನು ಸನ್ಮಾನಿದ ಸಿ.ಆರ್.ಹಿಮಾಂಶು 
‘ಎಸ್‌ಪಿವಿಜಿಎಂಸಿ ಟ್ರಸ್ಟ್’ನ ಪಾರಂಪರಿಕ ಸಂಗೀತೋತ್ಸವದಲ್ಲಿ ಸಂಗೀತ ಕಲಾನಿಧಿ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಸಂಗೀತ ಗಾಯಕ ವಿದ್ವಾನ್‌ ಟಿ.ಎಂ.ಕೃಷ್ಣ ಅವರನ್ನು ಸನ್ಮಾನಿದ ಸಿ.ಆರ್.ಹಿಮಾಂಶು    

ಮೈಸೂರು: ‘ಒಂದು ವಿಶ್ವವಿದ್ಯಾಲಯ ಮಾಡಬೇಕಾದ ಕೆಲಸವನ್ನು ಮೈಸೂರಿನ ಒಂದು ಬೀದಿ ಮಾಡುತ್ತದೆ.. ಹಿಮಾಂಶು ಅವ್ರು ಎಲ್ಲಿ. ಬನ್ನಿ ಇಲ್ಲಿ. ಅವರಿಗೆ ಹಾರ ಹಾಕಿ’ 

–ಹೀಗೆ, ಸರೋದ್‌ ವಾದಕ ಪಂಡಿತ್‌ ರಾಜೀವ ತಾರಾನಾಥ ಹೇಳುತ್ತಲೇ ಚಪ್ಪಾಳೆಗಳು ಹೊಮ್ಮಿದ್ದವು. 2014ರಲ್ಲಿ ಸಂಗೀತ ವಿಶ್ವವಿದ್ಯಾಲಯದ ಸಮಾರಂಭವೊಂದರಲ್ಲಿ ರಾಜೀವ ಅವರು ವಾಣಿವಿಲಾಸ ಮೊಹಲ್ಲಾದ 8ನೇ ಕ್ರಾಸ್‌ನ ಪಾರಂಪರಿಕ ಸಂಗೀತೋತ್ಸವ ಮತ್ತು ಅದರ ಸಂಘಟಕ ಸಿ.ಆರ್.ಹಿಮಾಂಶು ಅವರ ಬಗ್ಗೆ ನುಡಿದ ಅಕ್ಕರೆಯ ನುಡಿಹಾರವಿದು. 

2025ರ ಆಗಸ್ಟ್‌ನಲ್ಲಿ ನಡೆದ ‘64ನೇ ಸಂಗೀತೋತ್ಸವ’ದಲ್ಲೂ ಕಛೇರಿ ನೀಡಲು ಬಂದಿದ್ದ ‘ಸಂಗೀತ ಕಲಾನಿಧಿ’ ವಿದ್ವಾನ್ ಟಿ.ಎಂ.ಕೃಷ್ಣ ಅವರೂ, ‘ಹಿಮಾಂಶು ಅವರೆಂದರೆ ಭಯ. ಒಂದು ಫೋನ್ ಮಾಡಿ ಬರ್ತೀರಾ ಅಂದಕೂಡಲೇ ಇಲ್ಲ ಎನ್ನಲಾಗದು. ಭಯಂ. ಅಂದ್ರೆ ಪ್ರೀತಿ’ ಎಂದು ಎಲ್ಲರ ನಗೆಯುಕ್ಕಿಸಿದ್ದರು.

ADVERTISEMENT

– ಇವೆರಡು ಘಟನೆಗಳನ್ನು ನೋಡಿದ್ದವರಿಗೆ ಆಶ್ಚರ್ಯವೇನೂ ಅನಿಸದು. ಹಿಮಾಂಶು ಅವರ ಪ್ರೀತಿಯನ್ನು ನೋಡಿದವರಿಗೆ, ಸಂಗೀತ ಮತ್ತು ಕಲಾವಿದರ ಕುರಿತ ಅವರ ಆಳವಾದ ಅನುಭವದ ಮಾತುಗಳ ಕೇಳಿದವರಿಗೆ ಹಿಮದ ಹಾದಿಯಲ್ಲಿ ನಡೆದಷ್ಟೇ ಪುಳಕವಾಗುತ್ತದೆ.  

ಮಧುರ ಕಲಾಸೇವಕ: ಸ್ವಾತಂತ್ರ್ಯ ನಂತರ ಮೈಸೂರಿನ ಸಂಗೀತಾಸಕ್ತರ ಕಿವಿಗಳ ತಣಿಸಿದವರು, ಕರ್ನಾಟಕ ಶಾಸ್ತ್ರೀಯ ಸಂಗೀತದ ವೈಭವದ ತೇರನ್ನು ಎಳೆಯಲು ಬೆವರು ಹರಿಸಿದವರು ಸಿ.ಆರ್.ಹಿಮಾಂಶು. ಅವರಿಗೀಗ ‘ಸಂಗೀತ ಕಲಾನಿಧಿ’, ಮೃದಂಗ ವಿದ್ವಾನ್ ತಿರುವರೂರ್‌ ಭಕ್ತವತ್ಸಲಂ ಅವರ ‘ಲಯ ಮಧುರ ಸಂಗೀತ ಸಂಸ್ಥೆ’ಯು ‘ಮಧುರ ಕಲಾಸೇವಕ’ ಪುರಸ್ಕಾರಕ್ಕೆ ಆಯ್ಕೆ ಮಾಡಿದೆ.

ಇದೇ 6ರಂದು ಸಂಜೆ 4.30ಕ್ಕೆ ಚೆನ್ನೈನ ನಾರದ ಗಾನಸಭಾದಲ್ಲಿ ಪ್ರಶಸ್ತಿ ಪ್ರದಾನ ಮಾಡುತ್ತಿದೆ. ಸಂಸ್ಥೆಯ 60ನೇ ವರ್ಷಾಚರಣೆ ಸಂದರ್ಭದಲ್ಲಿ ಟಿ.ಕೆ.ಮೂರ್ತಿ, ಟಿ.ವಿ.ಗೋಪಾಲಕೃಷ್ಣನ್, ಉಮಯಾಳಪುರಂ ಶಿವರಾಮನ್‌, ಎ.ವಿ.ಆನಂದ್ ಅವರೊಂದಿಗೆ ಪ್ರಶಸ್ತಿ ನೀಡಲಾಗುತ್ತಿದೆ. 

ಸಂಗೀತ ಸಸಿ ನೆಟ್ಟರು: 60ರ ದಶಕದಲ್ಲಿ ಸುಗಮ ಸಂಗೀತ ಪ್ರಕಾರ ಜನಪ್ರಿಯವಾಗುತ್ತಿದ್ದ ವೇಳೆ ಸಾಂಪ್ರದಾಯಿಕ ‘ಕರ್ನಾಟಕ ಸಂಗೀತ’ ಪರಂಪರೆ ಮುಂದುವರಿಸಲು ವಾಣಿವಿಲಾಸ ಮೊಹಲ್ಲಾದ ಟಿ.ಆರ್.ಮಹಾಲಿಂಗಂ, ರಾಜಮ್ಮ ಸಿ.ಆರ್‌.ಗೌಡ, ರಘೋತ್ತಮ ದಾಸ, ಜಿ.ಟಿ.ಸುಬ್ಬರಾವು, ಶ್ರೀರಾಮ ಅಯ್ಯಂಗಾರ್‌, ನಂಜಪ್ಪ, ಸೌಂದರ್ಯಮ್ಮ ವೆಂಕಟೇಶ್‌, ನಾಗಮ್ಮ ನಿರ್ಧರಿಸಿದ್ದಾಗ ಹಿಮಾಂಶು ಅವರು 10 ವರ್ಷದ ಬಾಲಕ. ಅಂದಿನಿಂದಲೂ ಕಲಾ ಸಂಘಟಕರಾಗಿ ದುಡಿದಿದ್ದಾರೆ.  

ಅವರು ಪೋಷಿಸಿದ ಸಂಗೀತ ಸೇವೆಯ ಸಸಿಯು ಇಂದು ಹೆಮ್ಮರವಾಗಿ ಬೆಳೆದು, ಸಾವಿರಾರು ಕಲಾವಿದರಿಗೆ ಪ್ರೋತ್ಸಾಹ ನೀಡಿದೆ. 1985ರಲ್ಲಿ ‘ಶ್ರೀಪ್ರಸನ್ನ ವಿದ್ಯಾಗಣಪತಿ ಮಹೋತ್ಸವ ಚಾರಿಟಬಲ್‌ ಟ್ರಸ್ಟ್‌’ (ಎಸ್‌ಪಿವಿಜಿಎಂಸಿ) ಸ್ಥಾಪಿಸಿದ ಅವರು, ನಂತರ ಕಛೇರಿಗಳ ಜೊತೆಗೆ ಕಾರ್ಯಾಗಾರಗಳನ್ನು ಆಯೋಜಿಸಿ ಸಾಮಾನ್ಯರಿಗೂ ಸಂಗೀತ ಕಲಿಕೆ ಆಗು ಮಾಡಿದ್ದಾರೆ. ಪ್ರತಿ ಗೌರಿ– ಗಣೇಶ ಹಬ್ಬದಲ್ಲಿ ನಡೆಯುವ ಕಛೇರಿಗಳಿಗೆ ದೇಶದ ವಿವಿಧ ಮೂಲೆಯಷ್ಟೇ ಅಲ್ಲದೇ ವಿದೇಶಗಳಿಂದಲೂ ಬರುತ್ತಾರೆ.       

‘ಸೇವೆ ಸಾರ್ಥಕ; ಭರ್ತಿ ಸಂತಸ’ 

‘ಪುರಸ್ಕಾರ ಬಂದಿರುವುದಕ್ಕೆ ಸಂತಸವಾಗಿದೆ. 7 ದಶಕದ ಸಂಗೀತ ಸೇವೆಯನ್ನು ಪರಿಗಣಿಸಿ ಭಕ್ತವತ್ಸಲಂ ಅವರು ದೊಡ್ಡ ಕಲಾಸಾಧಕರೊಂದಿಗೆ ನೀಡುತ್ತಿರುವುದು ಸಾರ್ಥಕ ಅನಿಸುತ್ತದೆ’ ಎಂದು ಸಿ.ಆರ್.ಹಿಮಾಂಶು ಅವರು ‘ಪ್ರಜಾವಾಣಿ’ ಜೊತೆ ಸಂತಸ ಹಂಚಿಕೊಂಡರು. 

‘ಮೊದಲ ಗಣ‍ಪತಿ ಪ್ರತಿಷ್ಠಾಪಿಸಿ ಸಂಗೀತ ಕಛೇರಿ ನಡೆಸಲು ತಾಯಿ ರಾಜಮ್ಮ ಸಿ.ಆರ್‌.ಗೌಡ ಮತ್ತವರ ಗೆಳೆಯರು ನಿರ್ಧರಿಸಿದಾಗ ನನಗೆ 10 ವರ್ಷ. ಕಛೇರಿ ವೇದಿಕೆಗೆ ಚಪ್ಪರ ಹಾಕಲು ಮೊಹಲ್ಲಾದ ಪ್ರತಿ ಮನೆಗೂ ಹೋಗಿ ತೆಂಗಿನ ಮರಗಳ ಗರಿ ಸಂಗ್ರಹಿಸುತ್ತಿದ್ದೆ. ಬೆಟ್ಟಯ್ಯ ಎಂಬುವವರು ಚಿಕ್ಕಾಸು ಮುಟ್ಟದೆ ಜಾಗರಣೆಯಲ್ಲಿ ಚಪ್ಪರ ಹಾಕುತ್ತಿದ್ದರು’ ಎಂದು ಸ್ಮರಿಸಿದರು. 

‘1985ರಲ್ಲಿ ಟ್ರಸ್ಟ್‌ ರಚನೆಯಾಯಿತು. ಸರೋಜಾ ತುಳಸಿದಾಸಪ್ಪ ಕೆ.ವಿ.ಮೂರ್ತಿ ರ್‌.ವಾಸುದೇವಮೂರ್ತಿ ಸೀತಾರಾಮ ರಾವ್ ಸೇರಿದಂತೆ ನೂರಾರು ದಾನಿಗಳು ನಿರಂತರ ಪ್ರೋತ್ಸಾಹ ನೀಡಿದ್ದರಿಂದ ಉತ್ಸವ ನಿರಂತರವಾಗಿ ಸಾಗಿದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.