ADVERTISEMENT

ಜೇನು ನೊಣ ಪರಿಸರಕ್ಕೆ ಪೂರಕ: ಎನ್‌. ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 24 ಮೇ 2025, 13:29 IST
Last Updated 24 ಮೇ 2025, 13:29 IST
ನಾಗನಹಳ್ಳಿಯ ವಿಸ್ತರಣಾ ಶಿಕ್ಷಣ ಘಟಕದಲ್ಲಿ ಈಚೆಗೆ ಆಯೋಜಿಸಿದ್ದ ವಿಶ್ವ ಜೇನು ನೋಣ ದಿನಾಚರಣೆಯನ್ನು ಎನ್‌. ಶಿವಕುಮಾರ್‌ ಉದ್ಘಾಟಿಸಿದರು
ನಾಗನಹಳ್ಳಿಯ ವಿಸ್ತರಣಾ ಶಿಕ್ಷಣ ಘಟಕದಲ್ಲಿ ಈಚೆಗೆ ಆಯೋಜಿಸಿದ್ದ ವಿಶ್ವ ಜೇನು ನೋಣ ದಿನಾಚರಣೆಯನ್ನು ಎನ್‌. ಶಿವಕುಮಾರ್‌ ಉದ್ಘಾಟಿಸಿದರು   

ಮೈಸೂರು: ‘ಜೇನು ನೋಣಗಳು ಪರಿಸರಕ್ಕೆ ಪೂರಕ ಹಾಗೂ ರೈತರಿಗೆ ಲಾಭದಾಯಕ’ ಎಂದು ಮಂಡ್ಯ ವಿ.ಸಿ. ಫಾರಂನ ವಲಯ ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಎನ್‌. ಶಿವಕುಮಾರ್‌ ತಿಳಿಸಿದರು.

ತಾಲ್ಲೂಕಿನ ನಾಗನಹಳ್ಳಿಯಲ್ಲಿರುವ ಕೃಷಿ ವಿಶ್ವವಿದ್ಯಾಲಯ ವಿಸ್ತರಣಾ ಶಿಕ್ಷಣ ಘಟಕದಿಂದ ಈಚೆಗೆ ಆಯೋಜಿಸಿದ್ದ ವಿಶ್ವ ಜೇನು ನೋಣ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಎಲ್ಲಿ ಜೇನು ನೋಣಗಳು ಇವೆಯೋ ಅಲ್ಲಿ ಗಾಳಿ ಶುದ್ಧವಾಗಿ, ನೀರು ಸ್ವಚ್ಛವಾಗಿದೆ ಎಂದರ್ಥ’ ಎಂದರು.

‘ಜೇನು ನೋಣಗಳು ಪರಾಗಸ್ಪರ್ಶ ಮಾಡುವುದರಿಂದ ಬೆಳೆಗಳ ಇಳುವರಿ ಚೆನ್ನಾಗಿ ಬರುತ್ತದೆ. ಹೀಗಾಗಿ ರೈತರು ಮಿತ್ರ ಕೀಟಗಳು ಯಾವುವು, ಶತ್ರು ಕೀಟಗಳು ಯಾವುವು ಎಂಬುದನ್ನು ಅರಿಯಬೇಕು. ಶತ್ರು ಕೀಟಗಳನ್ನು ನಾಶಪಡಿಸಲು ಕೀಟನಾಶಕ ಸಿಂಪಡಿಸಿ ಮಿತ್ರ ಕೀಟಗಳನ್ನು ಹಾಳು ಮಾಡಬಾರದು. ರಸಗೊಬ್ಬರ, ಕೀಟನಾಶಕವನ್ನು ಹೆಚ್ಚಾಗಿ ಬಳಸಬಾರದು’ ಎಂದು ಸಲಹೆ ನೀಡಿದರು.

ADVERTISEMENT

‘ಕೃಷಿ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಯನ್ನು ರೈತರು ಅರಿಯಬೇಕು. ಹೆಚ್ಚು ಔಷಧಿ ಸಿಂಪಡಿಸಿದರೆ ನಾವು ತಿನ್ನುವ ಆಹಾರದ ಮೇಲೆ ಪರಿಣಾಮವಾಗುತ್ತದೆ ಎಂಬುದನ್ನು ಮರೆಯಬಾರದು. ಉಪ ಕಸುಬುಗಳಾದ ಜೇನು, ಕುರಿ, ಕೋಳಿ, ಮೀನು ಸಾಕಾಣಿಕೆ ರೈತರನ್ನು ಆರ್ಥಿಕವಾಗಿ ಕೈಹಿಡಿಯುತ್ತವೆ’ ಎಂದು ತಿಳಿಸಿದರು.

ಪ್ರಧಾನ ಭಾಷಣ ಮಾಡಿದ ವಿ.ಸಿ. ಫಾರಂ ಕೃಷಿ ಕಾಲೇಜಿನ ಪ್ರಾಧ್ಯಾಪಕ ವಿಜಯಕುಮಾರ್‌, ‘ಬಿಳಿಗಿರಿರಂಗನಬೆಟ್ಟದ ದೊಡ್ಡಸಂಪಿಗೆ ಸುತ್ತಮುತ್ತ ಜೇನು ನೊಣಗಳು ಹೆಚ್ಚಾಗಿವೆ. ಏಕೆಂದರೆ ಅಲ್ಲಿ ಜೀವವೈವಿಧ್ಯ ಉತ್ತಮವಾಗಿದೆ’ ಎಂದು ಹೇಳಿದರು.

ನಂಜನಗೂಡು ತಾಲ್ಲೂಕು ಮುದ್ದಹಳ್ಳಿಯ ಪ್ರಗತಿಪರ ರೈತ ಚಿಕ್ಕಸ್ವಾಮಿ, ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕಿ ಎಸ್‌.ಬಿ. ಮಮತಾ, ಕೃಷಿ ತಂತ್ರಜ್ಞರ ಸಂಸ್ಥೆಯ ಕಾರ್ಯದರ್ಶಿ ರವೀಂದ್ರ, ಅಧ್ಯಕ್ಷತೆ ವಹಿಸಿದ್ದ ಬೇಸಾಯವಿಜ್ಞಾನ ಪ್ರಾಧ್ಯಾಪಕ ಸಿ. ರಾಮಚಂದ್ರ ಮಾತನಾಡಿದರು.

ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಮುಖ್ಯ ಅತಿಥಿಯಾಗಿದ್ದರು. ಸಹ ಪ್ರಾಧ್ಯಾಪಕ ಉಮಾಶಂಕರ್‌, ಸಹಾಯಕ ಪ್ರಾಧ್ಯಾಪಕರಾದ ಶಿವಕುಮಾರ್‌, ಆರ್‌.ಎನ್‌. ಪುಷ್ಪಾ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.