ADVERTISEMENT

ಮೈಸೂರು | ಹೊಸಮಠ ಸಿದ್ಧಬಸವ ಶ್ರೀ ಪಟ್ಟಾಧಿಕಾರ ಸಂಪನ್ನ

ಚಿದಾನಂದ ಸ್ವಾಮೀಜಿ ಅಮೃತ ಮಹೋತ್ಸವ ಗುರುವಂದನೆ l ಕೇಂದ್ರ ಸಚಿವ ವಿ.ಸೋಮಣ್ಣ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 2:23 IST
Last Updated 5 ಸೆಪ್ಟೆಂಬರ್ 2025, 2:23 IST
ಮೈಸೂರಿನ ಹೊಸಮಠದಲ್ಲಿ ಪಟ್ಟಾಧಿಕಾರ ಮಹೋತ್ಸವ ಹಾಗೂ ಚಿದಾನಂದ ಸ್ವಾಮೀಜಿ ಅವರ ಜನ್ಮದಿನದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಉದ್ಘಾಟಿಸಿದರು           ಪ್ರಜಾವಾಣಿ ಚಿತ್ರ 
ಮೈಸೂರಿನ ಹೊಸಮಠದಲ್ಲಿ ಪಟ್ಟಾಧಿಕಾರ ಮಹೋತ್ಸವ ಹಾಗೂ ಚಿದಾನಂದ ಸ್ವಾಮೀಜಿ ಅವರ ಜನ್ಮದಿನದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಉದ್ಘಾಟಿಸಿದರು           ಪ್ರಜಾವಾಣಿ ಚಿತ್ರ    

ಮೈಸೂರು: ನಗರದ ಶ್ರೀಹೊಸಮಠದಲ್ಲಿ ಸಿದ್ಧಬಸವ ಸ್ವಾಮೀಜಿ ಅವರ ಪಟ್ಟಾಧಿಕಾರ ಮಹೋತ್ಸವವು ಭಕ್ತರು ಹಾಗೂ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಗುರುವಾರ ಸಂಭ್ರಮದಿಂದ ನಡೆಯಿತು.

ಮಠದಲ್ಲಿ ಮುಂಜಾನೆ 4 ಗಂಟೆಗೆ ಪೀಠಾಧಿಪತಿ ಚಿದಾನಂದ ಸ್ವಾಮೀಜಿ ಅವರು ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ಮುಡುಕನಪುರದ ವಟು ಎಂ.ಬಿ.ರಾಕೇಶ್‌ ಅವರನ್ನು, ಅವರ ಪೋಷಕರಾದ ಬಸವಲಿಂಗಪ್ಪ ಮತ್ತು ಸೌಮ್ಯಾ ಅವರಿಂದ ಶಿಷ್ಯರನ್ನಾಗಿ ಸ್ವೀಕರಿಸಿದರು. ಮಾದಹಳ್ಳಿ ಉಕ್ಕಿನಕಂತೆ ಮಠದ ಸಾಂಬಸದಾಶಿವ ಸ್ವಾಮೀಜಿ ಶಿವದೀಕ್ಷೆ ನೀಡಿದರು.

ಪಟ್ಟಕ್ಕೇರಿದ ನೂತನ ಸ್ವಾಮೀಜಿ ಅವರಿಗೆ ಸಿದ್ಧಬಸವ ಸ್ವಾಮೀಜಿ ಎಂದು ನಾಮಕರಣ ಮಾಡಲಾಯಿತು. ಅವರಿಗೆ ಭಕ್ತರ ಸಮ್ಮುಖದಲ್ಲಿ ದಿವ್ಯಸ್ನಾನ, ಭಸ್ಮರುದ್ರಾಕ್ಷ ಧಾರಣೆ, ಲಿಂಗಾಂಗಾನುಸಂಧಾನ, ಮಂತ್ರೋಪದೇಶ, ಪಂಚಮುದ್ರಾದಾನ, ವಿರಕ್ತಾಶ್ರಮಾಧಿಕಾರ, ಷಟ್ಸ್ಥಲ ಬ್ರಹ್ಮೋಪದೇಶ ಸೇರಿದಂತೆ‌ ವಿಧಿವಿಧಾನಗಳು ನಡೆದವು.

ADVERTISEMENT

ಪಟ್ಟಾಧಿಕಾರ ಮಹೋತ್ಸವದಲ್ಲಿ ಮಠದ ಕತೃ ಗದ್ದುಗೆಗಳಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಅಷ್ಟೋತ್ತರ ಸಹಿತ ಮಹಾಮಂಗಳಾರತಿ ನಡೆಯಿತು. ನೀಲಕಂಠೇಶ್ವರ ಮಠದ ಸಿದ್ಧಮಲ್ಲ ಸ್ವಾಮೀಜಿ ಷಟ್ಸ್ಥಲ ಧ್ವಜಾರೋಹಣ ನೆರವೇರಿಸಿದರು.

ಮಠದ ಆವರಣದಲ್ಲಿ ನಿರಂಜನ ಪಟ್ಟಾಧಿಕಾರ ಮಹೋತ್ಸವ ಹಾಗೂ ಚಿದಾನಂದ ಸ್ವಾಮೀಜಿ ಅವರ ಜನ್ಮದಿನದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಉದ್ಘಾಟಿಸಿದರು.

ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಉತ್ತರಾಧಿಕಾರಿಯಾಗಿ ದೀಕ್ಷೆ ಸ್ವೀಕರಿಸಿದ ಸಿದ್ಧಬಸವ ಸ್ವಾಮೀಜಿ, ‘ಮಠದ ಗುರು ಪರಂಪರೆಯನ್ನು ನೆನೆಯುತ್ತಾ, ಹರಗುರುಚರಮೂರ್ತಿಗಳ ಆಶೀರ್ವಾದವನ್ನು ಪಡೆದು ಎಲ್ಲ ಜವಾಬ್ದಾರಿ ನಿರ್ವಹಿಸುವೆ’ ಎಂದರು.

ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ‘ರಾಜ್ಯದ ಜನರ ಬದುಕು ಹಸನಾಗಲು ಮಠಗಳ ಸೇವಾ ಪರಂಪರೆಯೇ ಕಾರಣ. ಹೊಸಮಠಕ್ಕೆ 500 ವರ್ಷದ ಇತಿಹಾಸವಿದ್ದು, ಅನೇಕ ಪೂಜ್ಯರು ತೇದ ಗಂಧದಂತೆ, ಉರಿಯುವ ದೀಪದಂತೆ ಅರ್ಪಿಸಿಕೊಂಡಿದ್ದಾರೆ. ಚಿದಾನಂದ ಶ್ರೀ ಅವರು ನಟರಾಜ ಪ್ರತಿಷ್ಠಾನದ ಮೂಲಕ ಸುತ್ತೂರಿನ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಮಾರ್ಗದರ್ಶನದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದರು’ ಎಂದು ಹೇಳಿದರು.

‘ಪೋಷಕರಿಗೆ ನಿಮ್ಮ ಇಬ್ಬರು ಮಕ್ಕಳಲ್ಲಿ ಒಬ್ಬರನ್ನು ಮಠಕ್ಕೆ ಸ್ವಾಮಿಗಳಾಗಿ ಕೊಡಿ ಎಂದರೆ ಮಠದ ಕಡೆ ಅವರು ನೋಡುವುದೇ ಇಲ್ಲ. ಅಂಥ ವೇಳೆಯಲ್ಲಿ ಸಿದ್ಧಬಸವ ಸ್ವಾಮೀಜಿ ಅವರನ್ನು ಅವರ ಪೋಷಕರು ಮಠಕ್ಕೆ ನೀಡಿದ್ದಾರೆ. ಶ್ರೀಗಳಿಗೆ ಸಮಾಜವೇ ತಾಯಿ, ತಂದೆ, ಬಂಧುಗಳು. ಸ್ವಹಿತ ಕಡೆಗಣಿಸಿ ಸಮಾಜದ ಕಲ್ಯಾಣಕ್ಕಾಗಿ ಪರಿಶ್ರಮಿಸುತ್ತಾರೆ. ಭಕ್ತರು ಅವರನ್ನು ಭಕ್ತಿ–ಶ್ರದ್ಧೆಯಿಂದ ನೋಡಿಕೊಳ್ಳಬೇಕು’ ಎಂದರು.

‘ಚಿದ್ಬೆಳಕು’ ಕೃತಿ ಮತ್ತು ‘ಚಿದಾಮೃತ’ ಚಿತ್ರ ಸಂಪುಟವನ್ನು ಗಣ್ಯರು ಬಿಡುಗಡೆ ಮಾಡಿದರು. ‘ಬಸವ ಸಂವಿಧಾನ– ಭಾರತ ಸಂವಿಧಾನ’ ಕುರಿತು ಇಳಕಲ್‌ನ ವಿಜಯ ಮಹಾಂತೇಶ್ವರ ಮಠದ ಗುರುಶಾಂತಸ್ವಾಮೀಜಿ ಮಾತನಾಡಿದರು. 

ದೇಗುಲ ಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿ, ಶಾಸಕರಾದ ಜಿ.ಟಿ.ದೇವೇಗೌಡ, ಎಚ್‌.ಎಂ.ಗಣೇಶ್‌ ಪ್ರಸಾದ್, ಟಿ.ಎಸ್‌.ಶ್ರೀವತ್ಸ, ವಾಟಾಳು ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ದೇವನೂರು ದಾಸೋಹ ಮಠದ ಗುರುಮಹಾಂತ ಸ್ವಾಮೀಜಿ, ಜೆಎಸ್‌ಎಸ್‌ ವಿದ್ಯಾಪೀಠದ ಕಾರ್ಯದರ್ಶಿ ಎಸ್‌.‍ಪಿ.ಮಂಜುನಾಥ್‌, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಹಿನಕಲ್‌ ಬಸವರಾಜು, ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ, ಮುಖಂಡರಾದ ಪ್ರತಾಪ್‌ ಸಿಂಹ, ಪ್ರದೀಪ್‌ ಕುಮಾರ್ ಪಾಲ್ಗೊಂಡಿದ್ದರು.

ಧಾರ್ಮಿಕ ಸಭೆಯಲ್ಲಿ ‍ಪಾಲ್ಗೊಂಡಿದ್ದ ಭಕ್ತರು 

ನೂರಾರು ಭಕ್ತರು ಭಾಗಿ ಮಠದಲ್ಲಿ ಅನ್ನದಾಸೋಹ ವಿವಿಧ ಮಠಾಧೀಶರು ಭಾಗಿ

ಲಿಂಗಾಯತ ಮಠಗಳು ಎಲ್ಲ ಸಮುದಾಯಗಳ ಮಕ್ಕಳಿಗೆ ಜಾತ್ಯತೀತವಾಗಿ ಅನ್ನ ಅಕ್ಷರ ದಾಸೋಹ ಕಲ್ಪಿಸಿ ಬದುಕು ಕಟ್ಟಿಕೊಟ್ಟಿವೆ 
ಎಚ್‌.ಎಂ.ಗಣೇಶ್‌ ಪ್ರಸಾದ್‌ ಶಾಸಕ
ಚಿದಾನಂದ ಸ್ವಾಮೀಜಿ ಅವರು ಯಾವುದೇ ಆದಾಯ ಮೂಲ ಇಲ್ಲದೇ ಶಿಕ್ಷಣ ಕೊಡುತ್ತಿರುವ ಕಾಯಕಯೋಗಿ. ಕಡಿಮೆ ಪ್ರವೇಶ ಶುಲ್ಕದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡುತ್ತಿದ್ದಾರೆ
ಜಿ.ಟಿ.ದೇವೇಗೌಡ ಶಾಸಕ
 ‘ಶಿಕ್ಷಣ ಕ್ರಾಂತಿ ನಡೆಸಿದ ಮಠ’
ಕೇಂದ್ರ ಸಚಿವ ವಿ.ಸೋಮಣ್ಣ ಮಾತನಾಡಿ ‘ಮಠವನ್ನು ಮುನ್ನಡೆಸುವುದು ಸುಲಭವಲ್ಲ. ಅದೊಂದು ತಪಸ್ಸು.  ಚಿದಾನಂದ ಶ್ರೀ ಅವರು ತಮ್ಮ ದೂರದೃಷ್ಟಿ ಚಿಂತನೆ ತೀರ್ಮಾನಗಳಿಂದ ಶ್ರೀ ಸಾಮಾನ್ಯರಿಗೆ ಬೆಳಕಾಗಿದ್ದಾರೆ. 16ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆ ಸ್ಥಾಪಿಸಿ ಶಿಕ್ಷಣ ಕ್ರಾಂತಿ ನಡೆಸಿದ್ದಾರೆ. 5 ಸಾವಿರಕ್ಕೂ ಹೆಚ್ಚು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ’ ಎಂದು ಶ್ಲಾಘಿಸಿದರು. ‘ಕನಕಪುರದ ದೇಗುಲ ಮಠದಲ್ಲಿ ನಾನು ಓದಿದ್ದೆ. ಇಮ್ಮಡಿ ನಿರ್ವಾಣ ಸ್ವಾಮೀಜಿ ಇಮ್ಮಡಿ ಮಹಾಲಿಂಗ ಸ್ವಾಮೀಜಿ ನನಗೆ ಶಿಕ್ಷಣ ಕೊಟ್ಟರು. ಅವರನ್ನು ಮರೆಯಲಾಗದು. ಹೊಸಮಠವು ನನ್ನಂತೆಯೇ ಇದ್ದ ಬಡಮಕ್ಕಳಿಗೆ ಅನ್ನ ಅಕ್ಷರ ದಾಸೋಹವನ್ನು ನೀಡಿದೆ. ಅದರ ಸೇವೆ ವಿಸ್ತರಿಸುವ ಶಕ್ತಿ ಸಿಗಲಿ’ ಎಂದರು. ‘ಧ್ವನಿ ಇಲ್ಲದ ಎಲ್ಲ ವರ್ಗದದವರಿಗೆ ವಿದ್ಯೆ ಕೊಡುವುದರಿಂದ ಸಮಾಜ ಮತ್ತು ನಾಡು ಅಭಿವೃದ್ಧಿ ಆಗುತ್ತದೆ. ಚಿದಾನಂದಶ್ರೀ ಮಠಕ್ಕೆ ಉತ್ತಮ ಅಡಿಪಾಯ ಹಾಕಿದ್ದಾರೆ. ಬಡವರು ಹೆಣ್ಣು ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಿದ್ದಾರೆ’ ಎಂದು ಹೇಳಿದರು. 
‘ಅನಕ್ಷರಸ್ಥರ ಸಂಖ್ಯೆ ಕಡಿಮೆ ಮಾಡಿದ ಮಠಗಳು’ 
ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ‘ಉತ್ತರ ಭಾರತದ ರಾಜ್ಯಗಳಲ್ಲಿ ಅನಕ್ಷರಸ್ಥರ ಸಂಖ್ಯೆ ಹೆಚ್ಚಿದೆ. ಆದರೆ ರಾಜ್ಯದಲ್ಲಿ ಅನಕ್ಷರಸ್ಥರ ಸಂಖ್ಯೆ ವಿರಳವಾಗಿಸುವಲ್ಲಿ ವೀರಶೈವ ಲಿಂಗಾಯತ ಮಠಗಳ ಕೊಡುಗೆ ದೊಡ್ಡದು’ ಎಂದರು.  ‘ಹುಬ್ಬಳ್ಳಿ ಮೂಲದಿಂದ ಬಂದ ಸಂಗನಬಸವ ಸ್ವಾಮೀಜಿ ಅವರಿಂದ ಮಠವು ಸ್ಥಾಪನೆಯಾಯಿತು. ಮೊದಲು ನೂರಾರು ಮಠಗಳಿದ್ದವು. ಈಗ ಬೆರಳೆಣಿಕೆಯಷ್ಟಿವೆ. ಚಿದಾನಂದ ಸ್ವಾಮೀಜಿ ಅವರು ಮಾತಿಗಿಂತ ಕೃತಿ ಲೇಸು ಎಂಬಂತೆ ಕಾಯಕಜೀವಿಗಳಾಗಿ ದುಡಿದಿದ್ದಾರೆ. ಯಾವುದೇ ಕಾರ್ಯಕ್ರಮದಲ್ಲೂ ಮಾತನಾಡುವುದಿಲ್ಲ. ಪ್ರಸಾದ ಸರಿಯಾದ ಸಮಯಕ್ಕೆ ಆಗಬೇಕೆಂದು ಎಲ್ಲಿಯೂ ಸ್ವೀಕರಿಸದಿರುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.