ಮೈಸೂರು: ಇಲ್ಲಿ ಕೆಆರ್‌ಎಸ್ ರಸ್ತೆಯಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ನಾಯಿ ಕಡಿತದ ಚಿಕಿತ್ಸೆಗೆ ಅಗತ್ಯವಾದ ಔಷಧಿ ದೊರೆಯದಿರುವುದು, ನಾಯಿಕಡಿತಕ್ಕೆ ಒಳಗಾದವರನ್ನು ಮತ್ತಷ್ಟು ತೊಂದರೆಗೆ ಮತ್ತು ಆತಂಕಕ್ಕೆ ದೂಡುತ್ತಿದೆ!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲೇ ಈ ದುಃಸ್ಥಿತಿ ಇದೆ. ಈ ಕಾರಣದಿಂದಾಗಿ ಆಸ್ಪತ್ರೆಯ ಸಿಬ್ಬಂದಿಯೂ ಸಾರ್ವಜನಿಕರ ಹಿಡಿಶಾಪಕ್ಕೆ ಗುರಿ ಆಗುವಂತಾಗಿದೆ. ಔಷಧಿಯನ್ನು ಕಾಲಕಾಲಕ್ಕೆ ಖರೀದಿಸಿ ಸಮರ್ಪಕವಾಗಿ ಪೂರೈಸುವಲ್ಲಿ ಸಂಬಂಧಿಸಿದ ಅಧಿಕಾರಿಗಳು ತೋರಿಸುತ್ತಿದ್ದ ನಿರ್ಲಕ್ಷ್ಯದ ಪರಿಣಾಮ, ಜನರು ತೊಂದರೆ ಅನುಭವಿಸುವಂತಾಗಿದೆ.
ನಾಯಿ ಕಡಿತಕ್ಕೆ ಒಳಗಾಗಿ ಆಸ್ಪತ್ರೆಗೆ ಹೋಗುವವರು ಸಾವಿರಾರು ರೂಪಾಯಿ ತೆಗೆದುಕೊಂಡೇ ಹೋಗಬೇಕಾದ ಸ್ಥಿತಿ ಇದೆ. ಏಕೆಂದರೆ, ಔಷಧಿಯನ್ನು ಹೊರಗಿನಿಂದ ತರುವಂತೆ ಚೀಟಿ ಬರೆದುಕೊಡುತ್ತಿರುವುದೇ ಇದಕ್ಕೆ ಕಾರಣ. ಪರಿಣಾಮ, ಬಡವರು ಹಾಗೂ ಮಧ್ಯಮ ವರ್ಗದವರಿಗೆ ಚಿಕಿತ್ಸೆಯು ದುಬಾರಿಯಾಗಿ ಪರಿಣಮಿಸಿದೆ.
ಹಲವು ಕಡೆಗಳಿಂದ: ಈ ಆಸ್ಪತ್ರೆಗೆ ನಗರವೂ ಸೇರಿದಂತೆ ಜಿಲ್ಲೆಯ ವಿವಿಧಡೆಯಿಂದ ರೋಗಿಗಳು ಬರುತ್ತಾರೆ. ಜೊತೆಗೆ, ನೆರೆಯ ಮಂಡ್ಯ ಜಿಲ್ಲೆಯ ಕೆಆರ್‌ಎಸ್, ಪಾಲಹಳ್ಳಿ, ಶ್ರೀರಂಗಪಟ್ಟಣ ಮೊದಲಾದ ಕಡೆಗಳಿಂದಲೂ ನಾಯಿ ಕಡಿತಕ್ಕೆ ಒಳಗಾದವರು ಚಿಕಿತ್ಸೆಗೆಂದು ಬರುತ್ತಾರೆ. ಹೀಗೆ ಬಂದವರಿಗೆ ಔಷಧಿ ಅಲಭ್ಯತೆಯ ಮಾಹಿತಿಯು ಆತಂಕವನ್ನು ಇಮ್ಮಡಿಗೊಳಿಸುತ್ತಿದೆ. ಹೊರಗಿನಿಂದ ಔಷಧಿ ತಂದುಕೊಡಬೇಕು ಅಥವಾ ಖಾಸಗಿ ಆಸ್ಪತ್ರೆಗೆ ಹೋಗಬೇಕಾದ ಅನಿವಾರ್ಯತೆಗೆ ಅವರು ಸಿಲುಕುತ್ತಿದ್ದಾರೆ. ಚಿಕಿತ್ಸೆ ಪಡೆಯುವುದು ವಿಳಂಬವಾದರೆ, ಇತರ ತೊಂದರೆಗಳನ್ನೂ ಅವರು ಎದುರಿಸಬೇಕಾಗುತ್ತದೆ. ಸಮಸ್ಯೆ ಉಲ್ಬಣಿಸಿದರೆ ಪ್ರಾಣಕ್ಕೆ ಸಂಚಕಾರ ಎದುರಾಗುವ ಸಾಧ್ಯತೆಯೂ ಇರುತ್ತದೆ. ಪರಿಸ್ಥಿತಿ ಹೀಗಿದ್ದರೂ ಗಂಭೀರತೆಯನ್ನು ಅರಿಯುವಲ್ಲಿ ಅಧಿಕಾರಿಗಳು ಕಾಳಜಿ ವಹಿಸದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ನಾಯಿ ಕಡಿತದ ಚಿಕಿತ್ಸೆಗೆಂದೇ ನಿತ್ಯವೂ ಸರಾಸರಿ ನೂರು ಮಂದಿ ಇಲ್ಲಿಗೆ ಬರುತ್ತಾರೆ.
‘ನಮ್ಮ ಪರಿಚಯದವರೊಬ್ಬರಿಗೆ ನಾಯಿ ಕಚ್ಚಿತ್ತು. ಸರ್ಕಾರಿ ಆಸ್ಪತ್ರೆ ಎಂಬ ಕಾರಣಕ್ಕೆ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆಂದು ಕರೆದುಕೊಂಡು ಹೋದರೆ, ಅಲ್ಲಿ ಔಷಧಿಯೇ ಇಲ್ಲ ಎಂದು ಹೇಳಿದರು. ನೀವೇ ತನ್ನಿ ಎಂದರು. ಹೊರಗಡೆ ವಿಚಾರಿಸಿದರೆ ಒಂದು ಇಂಜೆಕ್ಷನ್‌ಗೆ ಒಂದು ಸಾವಿರ ರೂಪಾಯಿ ಕೇಳಿದರು. ಆ ರೀತಿಯ ನಾಲ್ಕು ಇಂಜೆಕ್ಷನ್ ಕೊಡಿಸಬೇಕಾಗುತ್ತದೆ. ಅಂದರೆ ಒಟ್ಟು ₹ 4ಸಾವಿರ ಬೇಕಾಗುತ್ತದೆ. ಇದು ಬಡವರು–ಮಧ್ಯಮ ವರ್ಗದವರಿಗೆ ಹೊರೆಯಲ್ಲವೇ?’ ಎಂದು ಬೋಗಾದಿಯ ನಿವಾಸಿ ಶಿವಕುಮಾರ್ ಕೇಳಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಮೈಸೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆ (ಎಂಎಂಸಿಆರ್‌ಐ) ನಿರ್ದೇಶಕಿ ಡಾ.ಕೆ.ಆರ್. ದಾಕ್ಷಾಯಿಣಿ, ‘ಆ ಔಷಧಿ ಖರೀದಿಗೆ ಟೆಂಡರ್ ಕರೆಯಲಾಗಿತ್ತು. ಒಂದು ಕಂಪನಿಯವರು ತಲಾ ವೈಯಲ್ ಔಷಧಿಗೆ ₹ 6ಸಾವಿರ ಕೋಟ್ ಮಾಡಿದ್ದಾರೆ. ಇಷ್ಟನ್ನು ನಾವು ಭರಿಸಲು ನಿಯಮಾವಳಿಯಲ್ಲಿ ಅವಕಾಶವಿಲ್ಲ. ಇದರಿಂದಾಗಿ, ಆಡಿಟ್ ಸಂದರ್ಭದಲ್ಲಿ ಆಕ್ಷೇಪಣೆ ವ್ಯಕ್ತವಾಗುತ್ತಿದೆ. ಆದ್ದರಿಂದ ತೊಂದರೆ ಆಗುತ್ತಿದೆ’ ಎಂದು ತಿಳಿಸಿದರು.
‘ನಾಯಿ ಕಡಿತಕ್ಕೆ ಒಳಗಾದವರು ಕನಿಷ್ಠ 4 ವಯಲ್ ಔಷಧಿ (ಇಂಜೆಕ್ಷನ್) ಪಡೆಯಬೇಕಾಗುತ್ತದೆ. ಅವರಿಗೂ ದುಬಾರಿ ಆಗುತ್ತಿದೆ. ಹೊರಗಡೆ ಖರೀದಿಸಿದರೂ ದುಬಾರಿಯೇ. ಆದ್ದರಿಂದ ಕಡಿಮೆ ದರಕ್ಕೆ ಔಷಧಿ ತರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಈ ಸಂಬಂಧ ಶುಕ್ರವಾರ (ಮೇ 16) ಸಭೆ ಕರೆದಿದ್ದೇನೆ. ಸಮಸ್ಯೆ ಪರಿಹಾರಕ್ಕೆ ಕ್ರಮ ವಹಿಸಲಾಗುವುದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.