ADVERTISEMENT

ಮನೆ, ಮನವೆಲ್ಲ ‘ಅನುವಾದ’

ಕನ್ನಡ – ಹಿಂದಿ ಸಾಹಿತ್ಯದ ಸೇತುಬಂಧವಾಗಿದ್ದ ಪ್ರೊ.ತಿಪ್ಪೇಸ್ವಾಮಿ

​ಪ್ರಜಾವಾಣಿ ವಾರ್ತೆ
ಕೆ.ನರಸಿಂಹ ಮೂರ್ತಿ
Published 28 ಜನವರಿ 2026, 4:12 IST
Last Updated 28 ಜನವರಿ 2026, 4:12 IST
<div class="paragraphs"><p>ಪ್ರೊ.ತಿಪ್ಪೇಸ್ವಾಮಿ</p></div>

ಪ್ರೊ.ತಿಪ್ಪೇಸ್ವಾಮಿ

   

ಮೈಸೂರು: ನಗರದ ಕುವೆಂಪು ನಗರದ ಎ.ಬಿ.ಬ್ಲಾಕ್‌ಗೆ ಬಂದು, 369ನೇ ಮನೆ ಮುಂದೆ ನಿಂತರೆ ಸಾಮಾನ್ಯ ಮನೆಯಂತೆಯೇ ಕಾಣುತ್ತದೆ. ತಲೆ ಎತ್ತಿ ನೋಡಿ, ‘ಅನುವಾದ’ ಎಂಬ ಕಪ್ಪು ಫಲಕ ಗಮನ ಸೆಳೆಯುತ್ತದೆ.

ಹಿಂದಿ–ಕನ್ನಡ ಅನುವಾದ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ ಪ್ರೊ.ತಿಪ್ಪೇಸ್ವಾಮಿ ಅವರು ತಮ್ಮ ಮನೆಗೆ ಇಟ್ಟಿದ್ದ ಹೆಸರಿದು. ಅವರು ತಮ್ಮ ಮನ ಮತ್ತು ಮನೆಯನ್ನು ಇಡಿಯಾಗಿ ಅನುವಾದಕ್ಕೇ ಮೀಸಲಿಟ್ಟಿದ್ದರೆಂಬುದಕ್ಕೆ ಸಾಕ್ಷಿಯಾಗಿ ಆ ಫಲಕ ಕಾಣುತ್ತದೆ.

ADVERTISEMENT

ತಮ್ಮ ಜೀವನವಿಡೀ ಅವರು ಅನುವಾದವನ್ನೇ ಉಸಿರಾಡಿದವರು. ಕನ್ನಡದಿಂದ ಹಿಂದಿಗೆ ಮತ್ತು ಹಿಂದಿಯಿಂದ ಕನ್ನಡಕ್ಕೆ ಅವರು ಅನುವಾದಿಸಿದ ಲೇಖಕರು ಮತ್ತು ಅವರ ಕೃತಿಗಳನ್ನು ಗಮನಿಸಿದರೆ, ಎರಡು ಭಾಷಿಕ ಸಂಸ್ಕೃತಿಗಳ ಕುರಿತು ಅವರ ಕಾಳಜಿ, ಬದ್ಧತೆ, ಪರಿಶ್ರಮ ಹೊಳೆಯುತ್ತದೆ.

ಕತೆ, ಕಾದಂಬರಿ, ಕಾವ್ಯ, ವಿಮರ್ಶೆ, ನಾಟಕ, ವಿಡಂಬನೆ, ಜೀವನ ಚರಿತ್ರೆ, ವ್ಯಕ್ತಿ ಚಿತ್ರ, ತೌಲನಿಕ ಸಾಹಿತ್ಯ.. ಹೀಗೆ ಸಾಹಿತ್ಯದ ಬಹುತೇಕ ಪ್ರಕಾರಗಳಲ್ಲಿ ಅವರ ಅನುವಾದ ಪ್ರತಿಭೆ ಹರಡಿಕೊಂಡಿದೆ. ಮೈಸೂರು ವಿಶ್ವವಿದ್ಯಾಲಯದ ಹಿಂದಿ ಅಧ್ಯಯನ ವಿಭಾಗದ ಅಧ್ಯಾಪನದ ಹೊಣೆಗಾರಿಕೆಯ ಜೊತೆಗೇ ಅವರು ಮಿಕ್ಕೆಲ್ಲ ಸಮಯವನ್ನೂ ಮೂರು ದಶಕಕ್ಕೂ ಹೆಚ್ಚು ಕಾಲ ಅನುವಾದಕ್ಕೇ ಮೀಸಲಿಟ್ಟಿದ್ದರು. ತುಮಕೂರು ಜಿಲ್ಲೆಯ ಕೊರಟಗೆರೆ ಜನ್ಮಭೂಮಿಯಾದರೆ, ಮೈಸೂರು ಕರ್ಮಭೂಮಿಯಾಗಿತ್ತು.

‘ನಾನು ಇವರನ್ನುಭೇಟಿಯಾಗಿದ್ದೆ’: ಅನುವಾದ
ದೊಂದಿಗೆ, ಕನ್ನಡ ಸಂದರ್ಶನ ಸಾಹಿತ್ಯಕ್ಕೂ ಅವರ ಕೊಡುಗೆ ದೊಡ್ಡದು. ಎರಡೂವರೆ ದಶಕಗಳ ಹಿಂದೆ ಅವರು ಪ್ರಕಟಿಸಿದ್ದ ‘ನಾನು ಇವರನ್ನು ಭೇಟಿಯಾಗಿದ್ದೆ’ ಕೃತಿಯು ಕನ್ನಡ ಮತ್ತು ಹಿಂದಿಯ ಮಹತ್ವದ ಲೇಖಕರ ಸಂದರ್ಶನಗಳನ್ನು ಒಳಗೊಂಡ ಮಹತ್ವದ ಕೃತಿ.

ಹಿಂದಿಯ ಪ್ರಖ್ಯಾತ ಲೇಖಕರಾದ ನಿರ್ಮಲ್‌ ವರ್ಮಾ, ಸುಮಿತ್ರಾನಂದನ್‌ ಪಂತ್‌, ಮರಾಠಿ–ಹಿಂದಿ ಭಾಷಾಂತರದಲ್ಲಿ ಪ್ರಖ್ಯಾತರಾದ ಶ್ರೀಪಾದ ಜೋಶಿ, ಕನ್ನಡದ ಕುವೆಂಪು, ದೇಜಗೌ, ರಾವ್‌ ಬಹಾದ್ದೂರ್, ಚದುರಂಗ, ಅಕಬರ ಅಲಿ, ಪ್ರೊ.ಬಿ.ನಂ.ಚಂದ್ರಯ್ಯ, ಪ್ರೊ.ಭಗವಾನ್, ಪ್ರೊ.ಪ್ರಧಾನ ಗುರುದತ್ತ,  ಡಾ.ಎಚ್‌.ಎ.ಪಾರ್ಶ್ವನಾಥ್, ಬಿ.ಆರ್‌.ಲಕ್ಷ್ಮಣ್‌ರಾವ್‌ ಅವರೊಂದಿಗೆ ನಡೆಸಿದ ಸುದೀರ್ಘ ಸಂದರ್ಶನಗಳಿವೆ. ಸಂದರ್ಶನಕ್ಕೆ ಅವರು ನಡೆಸುತ್ತಿದ್ದ ಸಿದ್ಧತೆಗಳ ಕಡೆಗೂ ಅವರು ಗಮನ ಸೆಳೆಯುವುದು ವಿಶೇಷ.

ಸೇತುಬಂಧ: ಪ್ರೇಮ್‌ ಚಂದ್‌ರಂಥ ಮಹತ್ವದ ಲೇಖಕರಿಂದ ಮೋಹನ್‌ಲಾಲ್‌ ಮಹತೋ ವಿಯೋಗಿ, ಹಿಮಾಂಶು ಜೋಶಿ, ಶ್ರವಣಕುಮಾರ್, ಹರಿಶಂಕರ್‌ ಪರಸಾಈ, ನರೇಂದ್ರ ಕೋಹಲಿ, ಸುಶೀಲ್‌ ಕುಮಾರ್‌ ಸಿಂಹಾ, ಅಸಗರ್ ವಜಾಹತ್‌, ಧರ್ಮವೀರ್‌ ಭಾರತಿ, ವಿಷ್ಣು ಪ್ರಭಾಕರ್‌, ಓಂಪ್ರಕಾಶ್‌ ದೀಪಕ್, ಜಯಂತ್‌ ನಾರ್ಳೀಕರ್‌, ಅಮೃತಲಾಲ್‌ ನಾಗರ್ ಅವರ ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ.

ವಿನೋದ ಸಾಹಿತ್ಯ ಪ್ರೇಮಿ: ಅನುವಾದ ಕ್ಷೇತ್ರದಲ್ಲಿ ವಿಶೇಷ ಛಾಪು ಮೂಡಿಸಿದ್ದ ಪ್ರೊ.ತಿಪ್ಪೇಸ್ವಾಮಿ ವಿನೋದ ಸಾಹಿತ್ಯ ಪ್ರೇಮಿಯಾಗಿದ್ದರು ಎಂಬುದು ಬಹಳ ಮಂದಿಗೆ ತಿಳಿದಿಲ್ಲ.

ಪಿಎಚ್‌.ಡಿ. ಪದವಿಗಾಗಿ ಅವರು ಆಧುನಿಕ ಹಿಂದಿ ಸಾಹಿತ್ಯದ ಅತ್ಯಂತ ಪ್ರಸಿದ್ಧ ವಿಡಂಬನಕಾರ, ಹಾಸ್ಯಗಾರ ಮತ್ತು ಲೇಖಕ ‘ಹರಿಶಂಕರ್‌ ಪರಸಾಈ– ವ್ಯಕ್ತಿತ್ವ ಮತ್ತು ಕೃತಿತ್ವ’ ಕುರಿತು ಸಂಶೋಧನೆ ನಡೆಸಿದ್ದರು. ಕನ್ನಡದಲ್ಲಿ ‘ಹೊನ್ನಶೂಲ ಮತ್ತು ಇತರೆ ವ್ಯಂಗ್ಯ ವಿನೋದಗಳು’ ಕೃತಿಯನ್ನೂ ರಚಿಸಿದ್ದರು. ಇದೆಲ್ಲದ್ದರ ನಡುವೆ ಅವರಿಗೆ ಅನುವಾದವೇ ಜೀವಾಳವಾಗಿತ್ತು.

ಕಾಡಿದ ಮರೆವು

ಪ್ರೊ.ತಿಪ್ಪೇಸ್ವಾಮಿಯವರ ಕೊನೆಗಾಲದಲ್ಲಿ ಅವರನ್ನು ಮರೆವಿನ ಕಾಯಿಲೆ ಬಹಳಷ್ಟು ಕಾಡಿತ್ತು.
ಥೇಟು ಮಗುವಿನಂತಾಗಿದ್ದ ಅವರು ತಮ್ಮ ಸ್ನೇಹಿತರು, ಸಹೋದ್ಯೋಗಿಗಳನ್ನು ಗುರುತು ಹಿಡಿಯುತ್ತಿರಲಿಲ್ಲ. ಕೊನೆಗಾಲದಲ್ಲಿ ಅವರನ್ನು ಜತನದಿಂದ ನೋಡಿಕೊಂಡ ಕುಟುಂಬದ ಶ್ರಮವೂ ದೊಡ್ಡದು.

ಅಲ್ಲಮನಿಂದ ದೇವನೂರು ಮಹಾದೇವವರೆಗೆ...

ಪ್ರೊ.ತಿಪ್ಪೇಸ್ವಾಮಿಯವರು ಹಿಂದಿಯ ಮಹತ್ವದ ಲೇಖಕರನ್ನು ಅನುವಾದಿಸುವುದರ
ಜೊತೆಗೆ, 12ನೇ ಶತಮಾನದ ಅಲ್ಲಮಪ್ರಭುವಿನ ವಚನಗಳಿಂದ ಹಿಡಿದು ಆಧುನಿಕ
ಕನ್ನಡ ಸಾಹಿತ್ಯದ ಕುವೆಂಪು, ದೇವನೂರು ಮಹಾದೇವರ ಕತೆಗಳನ್ನು, ಆನಂದಪಾಟೀಲರ
ಮಕ್ಕಳ ಸಾಹಿತ್ಯವನ್ನು ಅನುವಾದಿಸಿ ಗಮನ ಸೆಳೆದವರು. ಅಲ್ಲಮ ಪ್ರಭುವಿನ
108 ವಚನಗಳನ್ನು ಹಿಂದಿಗೆ ಅನುವಾದಿಸಿರುವುದು ವಿಶೇಷ. ಬಿ.ವಿ.ವೈಕುಂಠರಾಜು, ರಾಮಚಂದ್ರದೇವ, ಬಿ.ಆರ್‌.ಲಕ್ಷ್ಮಣರಾವ್‌ ಅವರ ಕೃತಿಗಳು ತಿಪ್ಪೇಸ್ವಾಮಿಯವರಿಂದಾಗಿ
ಹಿಂದಿ ಓದುಗರಿಗೆ ಲಭಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.