ADVERTISEMENT

ಮೈಸೂರು| ಹೆಚ್ಚು ಮನೆ ವಿತರಿಸಿದ ಕ್ಷೇತ್ರ: ರಾಮದಾಸ್‌

ಕೃಷ್ಣರಾಜ ಕ್ಷೇತ್ರದ 6,207 ಅರ್ಜಿದಾರರಿಗೆ ಆಯ್ಕೆ ಪತ್ರ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 16:18 IST
Last Updated 19 ಮಾರ್ಚ್ 2023, 16:18 IST
ಮೈಸೂರಿನ ವಸ್ತುಪ್ರದರ್ಶನ ಮೈದಾನದಲ್ಲಿ ಭಾನುವಾರ ಕೃಷ್ಣರಾಜ ಕ್ಷೇತ್ರದ ಆಶ್ರಯ ವಸತಿ ಯೋಜನೆ ಫಲಾನುಭವಿಗಳಿಗೆ ಆಯ್ಕೆಪತ್ರ ಹಾಗೂ ಹಕ್ಕು ಖುಲಾಸೆ ಪತ್ರ ಹಸ್ತಾಂತರಿಸಲಾಯಿತು. ಶಾಸಕ ಎಸ್‌.ಎ.ರಾಮದಾಸ್‌, ಮೇಯರ್‌ ಶಿವಕುಮಾರ್‌, ಪಾಲಿಕೆ ಹೆಚ್ಚುವರಿ ಆಯುಕ್ತೆ ಎಂ.ಜೆ. ರೂಪಾ ಇದ್ದರು
ಮೈಸೂರಿನ ವಸ್ತುಪ್ರದರ್ಶನ ಮೈದಾನದಲ್ಲಿ ಭಾನುವಾರ ಕೃಷ್ಣರಾಜ ಕ್ಷೇತ್ರದ ಆಶ್ರಯ ವಸತಿ ಯೋಜನೆ ಫಲಾನುಭವಿಗಳಿಗೆ ಆಯ್ಕೆಪತ್ರ ಹಾಗೂ ಹಕ್ಕು ಖುಲಾಸೆ ಪತ್ರ ಹಸ್ತಾಂತರಿಸಲಾಯಿತು. ಶಾಸಕ ಎಸ್‌.ಎ.ರಾಮದಾಸ್‌, ಮೇಯರ್‌ ಶಿವಕುಮಾರ್‌, ಪಾಲಿಕೆ ಹೆಚ್ಚುವರಿ ಆಯುಕ್ತೆ ಎಂ.ಜೆ. ರೂಪಾ ಇದ್ದರು   

ಮೈಸೂರು: ‘ಸ್ವಂತ ಮನೆ ಇಲ್ಲದವರಿಗೆ ಅತಿ ಹೆಚ್ಚು ಸಂಖ್ಯೆಯಲ್ಲಿ ನಿವೇಶನ, ಮನೆ ನೀಡಿದ ವಿಧಾನಸಭಾ ಕ್ಷೇತ್ರ ಎಂಬ ಖ್ಯಾತಿಗೆ ‘ಕೃಷ್ಣರಾಜ’ ಪಾತ್ರವಾಗಿದೆ. 6,207 ಅರ್ಜಿದಾರರಿಗೆ ಆಯ್ಕೆ ತಿಳಿವಳಿಕೆ ಪತ್ರ, ಹಕ್ಕುಕುಲಾಸೆ ಪತ್ರ ನೀಡುತ್ತಿದ್ದು, ಕ್ಷೇತ್ರದ ಬಡಜನರಿಗೆ ಯುಗಾದಿ ಕೊಡುಗೆ ಇದಾಗಿದೆ’ ಎಂದು ಶಾಸಕ ಎಸ್‌.ಎ. ರಾಮದಾಸ್‌ ಹೇಳಿದರು.

ಇಲ್ಲಿನ ವಸ್ತುಪ್ರದರ್ಶನ ಆವರಣದಲ್ಲಿ ಭಾನುವಾರ ಕೃಷ್ಣರಾಜ ಕ್ಷೇತ್ರದ ‘ಪ್ರಧಾನ ಮಂತ್ರಿ ಆವಾಸ್‌’, ‘ಆಶ್ರಯ’ ವಸತಿ ಯೋಜನೆಯ 6,207 ಅರ್ಜಿದಾರರಿಗೆ ಆಯ್ಕೆ ಪತ್ರ ಹಸ್ತಾಂತರ ಹಾಗೂ ಈ ಮೊದಲು ಪಡೆದವರಿಗೆ ಅವರ ಹೆಸರಿಗೆ ವರ್ಗಾಯಿಸುವ ಹಕ್ಕು ಖುಲಾಸೆ ಪತ್ರ ವಿತರಿಸಿ, ಲಲಿತಾದ್ರಿಪುರದಲ್ಲಿ ವಸತಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ದೇಶದ 7,200 ಹಾಗೂ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೇ ಕೃಷ್ಣರಾಜ ಕ್ಷೇತ್ರ ವಸತಿ ಯೋಜನೆಯ ಮನೆ ನಿವೇಶನಗಳನ್ನು ಅತಿ ಹೆಚ್ಚು ಸಂಖ್ಯೆಯಲ್ಲಿ ವಿತರಿಸುವ ಮೂಲಕ ಪ್ರಧಾನಿ ಮೋದಿ ಅವರ ‘5 ಕೋಟಿ ಮನೆ ನಿರ್ಮಾಣ– ಸರ್ವರಿಗೆ ಸೂರು’ ಕನಸನ್ನು ಸಾಕಾರಗೊಳಿಸಲು ಪ್ರಯತ್ನಿಸಿದ್ದೇನೆ’ ಎಂದರು.

ADVERTISEMENT

‘2012ರಲ್ಲಿ ಭೂಮಿ ಖರೀದಿಸಿದ್ದರೂ ನ್ಯಾಯಾಲಯ ವ್ಯಾಜ್ಯ ಮುಗಿಯಲು ವಿಳಂಬವಾಯಿತು. ₹28 ಕೋಟಿ ತುಂಬಿದ್ದು, ಈಗ ಹಂಚಿಕೆ ನಡೆಯುತ್ತಿದೆ. ಗೋರೂರಿನಲ್ಲಿ 22 ಎಕರೆ ಹಾಗೂ ಮೈಸೂರಿನ ವಿವಿಧೆಡೆ ಖಾಲಿ ಸಮಿತಿಯನ್ನು ಆಶ್ರಯ ಸಮಿತಿಗೆ ಮನೆ, ನಿವೇಶನಕ್ಕಾಗಿ ನೀಡಲಾಗಿದೆ. ಇದು 11 ವರ್ಷಗಳ ಪರಿಶ್ರಮದ ಫಲ’ ಎಂದು ಹೇಳಿದರು.

ಉದ್ಘಾಟಿಸಿದ ಮೇಯರ್‌ ಶಿವಕುಮಾರ್‌ ಮಾತನಾಡಿ, ‘ಈ ಹಿಂದೆ 10 ಸಾವಿರಕ್ಕೂ ಹೆಚ್ಚು ಆಶ್ರಯ ಮನೆ ನೀಡಿದ ಶಾಸಕ ರಾಮದಾಸ್‌, ಈಗ 6 ಸಾವಿರ ಮನೆ ನೀಡಿ ಬಡವರ ಸ್ವಂತ ಮನೆ ಹೊಂದುವ ಕನಸು ನನಸಾಗಿಸಿದ್ದಾರೆ’ ಎಂದರು.

ಮುಡಾ ಅಧ್ಯಕ್ಷ ಯಶಸ್ವಿ ಎಸ್.ಸೋಮಶೇಖರ್‌ ಮಾತನಾಡಿದರು. ಸುಧಾಕರ್‌, ಸಲ್ಮಾ ಕೌಸರ್‌, ವರಲಕ್ಷ್ಮಿ, ಶಿವರುದ್ರಸ್ವಾಮಿ, ರವಿಚಂದ್ರ ಮೂರ್ತಿ, ರಾಘವೇಂದ್ರ, ಜಯಂತಿ ಅವರಿಗೆ ತಿಳಿವಳಿಕೆ ಪತ್ರ ಹಸ್ತಾಂತರಿಸಲಾಯಿತು. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಅಂಚೆ ಮೂಲಕ ಮನೆಗೆ ತಲುಪಿಸಲು, ವೇದಿಕೆಯಲ್ಲಿ ಇರಿಸಿದ್ದ ಅಂಚೆ ಪೆಟ್ಟಿಗೆಗೆ ಕೆಲವು ಪತ್ರಗಳನ್ನು ಹಾಕಲಾಯಿತು.

ರಾಜೇಶ್ವರಿ ಮೋಹನ್‌ ಕುಮಾರ್‌, ಮಹೇಶ್‌ ಕೃಷ್ಣೋಜಿರಾವ್‌, ರಮೇಶ್‌ ದೇವಯ್ಯ, ಶೋಭಾ ಗುರುಪ್ರಸಾದ್‌, ಬಿ.ಎಸ್‌. ನರೇಂದ್ರ, ಬಸವರಾಜು, ನಿರ್ಮಲಾ, ಎಂ.ಜಿ. ಸುಮನಾ, ಮಹಾದೇವಮ್ಮ, ಸಿ. ಮಂಜುಳಾ, ವಿನಯಾ ಇವರಿಗೆ ಹಕ್ಕು ಖುಲಾಸೆ ಪತ್ರ ನೀಡಿ, ಹಿಂದೆ ನೀಡಿದ್ದ ಮನೆ ಅವರ ಹೆಸರಿಗೆ ವರ್ಗಾಯಿಸುವ ಪತ್ರವನ್ನು ಸಾಂಕೇತಿಕವಾಗಿ ನೀಡಲಾಯಿತು.

ಪಾಲಿಕೆ ಹೆಚ್ಚುವರಿ ಆಯುಕ್ತೆ ಎಂ.ಜೆ.ರೂಪಾ, ಉಪ ಮೇಯರ್‌ ಡಾ.ಜಿ.ರೂಪಾ ಯೋಗೇಶ್, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ.ಶಿವಕುಮಾರ್‌, ಪಾಲಿಕೆ ಸದಸ್ಯರಾದ ವಿ.ವಿ. ಮಂಜುನಾಥ್, ಛಾಯಾ ದೇವಿ, ಸೌಮ್ಯಾ ಉಮೇಶ್‌, ಆಶಾ ನಾಗಮೂರ್ತಿ, ಆಶ್ರಯ ಸಮಿತಿ ಸದಸ್ಯರಾದ ವಿದ್ಯಾ ಅರಸ್‌, ಹೇಮಂತ್‌ ಕುಮಾರ್‌, ಬಿ. ಗೌರಿ, ಹನ್ಸರಾಜ್‌ ಜೈನ್‌, ಪೀತಾಂಬರ ಸ್ವಾಮಿ, ಸತ್ಯಮೂರ್ತಿ, ಸುಶ್ರುತ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.