ಮೈಸೂರು: ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ 50,206 ವಸತಿರಹಿತ ಹಾಗೂ 4,592 ನಿವೇಶನರಹಿತ ಕುಟುಂಬಗಳಿರುವುದು ಪತ್ತೆಯಾಗಿದೆ.
ಜಿಲ್ಲಾ ಪಂಚಾಯಿತಿಯು 2024–25ನೇ ಸಾಲಿನಲ್ಲಿ ನಡೆಸಿದ ಸಮೀಕ್ಷೆ ಪೂರ್ಣಗೊಂಡಿದ್ದು, ಮಾಹಿತಿಯನ್ನು ವಿವಿಧ ಹಂತದಲ್ಲಿ ಪರಿಶೀಲಿಸಿ ಸರ್ಕಾರದ ಅನುಮೋದನೆಗೆ ಕಳುಹಿಸಲಾಗಿದೆ. ಅನುಮೋದನೆ ಸಿಕ್ಕ ನಂತರ ಆದ್ಯತೆಯ ಮೇರೆಗೆ ಮನೆ ಕಟ್ಟಿಸಿಕೊಡಲು ಯೋಜಿಸಲಾಗಿದೆ.
ಜಿಲ್ಲೆಯಲ್ಲಿ 2018ರ ವಸತಿರಹಿತರು ಹಾಗೂ ನಿವೇಶನರಹಿತರ ಪಟ್ಟಿ ಸಿದ್ಧಪಡಿಸಿ ವಿವಿಧ ವಸತಿ ಯೋಜನೆಯಡಿ ಮನೆಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿತ್ತು. ಅನರ್ಹರನ್ನು ರದ್ದುಪಡಿಸಿ 20,908 ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿ, ಈ ಪೈಕಿ 2024–25ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಯಲ್ಲಿ ದಾಖಲಾತಿಗಳು ಲಭ್ಯವಿದ್ದು ಮನೆ ನಿರ್ಮಿಸಿಕೊಳ್ಳಲು ಮುಂದೆ ಬಂದಿರುವ 13,462 ಫಲಾನುಭವಿಗಳಿಗೆ ಕಾಮಗಾರಿ ಆದೇಶ ನೀಡಲಾಗಿದೆ. ಶೇಕಡಾವಾರು ಪ್ರಗತಿಯಲ್ಲಿ ಇಡೀ ರಾಜ್ಯದಲ್ಲಿ ಮೈಸೂರು ಜಿಲ್ಲೆಯು ಮೊದಲನೇ ಸ್ಥಾನದಲ್ಲಿದೆ ಎಂದು ಜಿಲ್ಲಾ ಪಂಚಾಯಿತಿ ಮೂಲಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿವೆ.
ಕಾಮಗಾರಿ ಆದೇಶ ಪಡೆದು ಮುಂಗಡ ಹಣ ದೊರೆತಿರುವ ಎಲ್ಲಾ ಫಲಾನುಭವಿಗಳು ಮೂರು ತಿಂಗಳೊಳಗೆ ಮನೆ ನಿರ್ಮಿಸಿಕೊಂಡು ಸರ್ಕಾರದ ಸಹಾಯಧನವನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕಾಗಿದೆ.
ಏಳು ವರ್ಷಗಳ ನಂತರ: ಕೇಂದ್ರ ಪುರಸ್ಕೃತವಾದ ಈ ಯೋಜನೆಯಡಿ ಸಮೀಕ್ಷೆ ಕಾರ್ಯವನ್ನು ಸರ್ಕಾರದ ಆದೇಶದ ಪ್ರಕಾರ ಏಳು ವರ್ಷಗಳ ನಂತರ ಕೈಗೊಳ್ಳಲಾಗಿದೆ. ಜಿಲ್ಲೆಯ ಎಲ್ಲ 256 ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ನಡೆದ ಈ ಪ್ರಕ್ರಿಯೆಯಲ್ಲಿ ಬಿಲ್ ಕಲೆಕ್ಟರ್‌ಗಳು, ಕಾರ್ಯದರ್ಶಿಗಳು, ಪಿಡಿಒಗಳು ಮೊದಲಾದವರು ಮೊಬೈಲ್ ಆ್ಯಪ್ ಬಳಸಿ ಸಮೀಕ್ಷೆ ನಡೆಸಿದ್ದಾರೆ. ನೈಜ ಫಲಾನುಭವಿಗಳನ್ನು ಪತ್ತೆ ಹಚ್ಚುವ ಉದ್ದೇಶದಿಂದ ಸರ್ಕಾರವು ಸಮೀಕ್ಷೆ ನಡೆಸುವಂತೆ ಆದೇಶಿಸಿತ್ತು.
ಪಿಎಂಎವೈ–ಜಿ ಯೋಜನೆಯಡಿ ಸಾಮಾನ್ಯ ವರ್ಗದವರಿಗೆ ₹1.20 ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ₹1.75 ಲಕ್ಷ ಸಹಾಯಧನ ಸಿಗುತ್ತದೆ. ನರೇಗಾ ಯೋಜನೆಯಡಿ 90 ದಿನ ಮಾನವ ದಿನಗಳನ್ನು ಬಳಸಿಕೊಳ್ಳಲು (ಕೆಲಸ ಮಾಡಿಸಿಕೊಳ್ಳಲು) ಎಲ್ಲ ವರ್ಗದವರಿಗೂ ಅವಕಾಶವಿದೆ. ಇದರಲ್ಲಿ ₹ 31,410 ಸಿಗುತ್ತದೆ. ಶೌಚಾಲಯ ನಿರ್ಮಾಣ ಸಹಾಯಧನಕ್ಕೆ ಅರ್ಹತೆ ಇದ್ದರೆ ಸಾಮಾನ್ಯ ವರ್ಗದವರಿಗೆ ₹ 12ಸಾವಿರ ಹಾಗೂ ಪರಿಶಿಷ್ಟರಿಗೆ ₹20ಸಾವಿರ ಸಿಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ವಸತಿರಹಿತ ಕುಟುಂಬಗಳು, ಭಿಕ್ಷುಕರು, ಸ್ವಚ್ಛತಾ ಸಿಬ್ಬಂದಿ, ಬುಡಕಟ್ಟು ಗುಂಪುಗಳು, ಜೀತವಿಮುಕ್ತಗೊಂಡ ಕುಟುಂಬಗಳು ಪಿಎಂಎವೈ–ಜಿ ಫಲಾನುಭವಿಗಳಾಗಲು ಅವಕಾಶವಿದೆ. ಶಿಥಿಲಗೊಂಡಿರುವ ಚಿಕ್ಕ ಮನೆಯಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಮೂಲಸೌಕರ್ಯಗಳೊಂದಿಗೆ ‘ಪಕ್ಕಾ ಮನೆ’ ಒದಗಿಸುವ ಯೋಜನೆಯೂ ಹೌದು. ಸ್ಥಳೀಯ ಸಂಸ್ಥೆಗಳ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎನ್ನುತ್ತಾರೆ ಅವರು.
‘ಹೆಚ್ಚಿನ ಫಲಾನುಭವಿಗಳು ಸಮಯಕ್ಕೆ ಸರಿಯಾಗಿ ಮನೆಗಳನ್ನು ನಿರ್ಮಿಸಿಕೊಳ್ಳುವಂತೆ ಕೋರಲಾಗಿದೆ. ಜಿಪಿಎಸ್, ಪಾವತಿಗಳನ್ನು ಹಂತ ಹಂತವಾಗಿ ಸಕಾಲಕ್ಕೆ ಮಾಡಿಕೊಡುವಂತೆ ಆಯಾ ಪಿಡಿಒಗಳಿಗೆ ಸೂಚಿಸಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್‌ಕುಮಾರ್ ಪ್ರತಿಕ್ರಿಯಿಸಿದರು.
ನಂಜನಗೂಡು ತಾಲ್ಲೂಕಿನಲ್ಲಿ ಹೆಚ್ಚು
ಸಮೀಕ್ಷೆ ಪ್ರಕಾರ ನಂಜನಗೂಡು ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ 12493 ವಸತಿರಹಿತರು ಇದ್ದಾರೆ. ನಂತರದ ಸ್ಥಾನದಲ್ಲಿ ನಂಜುಂಡಪ್ಪ ವರದಿಯಂತೆ ಅತ್ಯಂತ ಹಿಂದುಳಿದ ತಾಲ್ಲೂಕು ಎಂದು ಗುರುತಿಸಲಾಗಿರುವ ಎಚ್.ಡಿ. ಕೋಟೆ ಇದೆ. ಅಲ್ಲಿ 9255 ಮಂದಿಗೆ ವಸತಿ ಇಲ್ಲ. ನಿವೇಶನವೇ ಇಲ್ಲದವರ ಪಟ್ಟಿಯಲ್ಲಿ ಸರಗೂರು ತಾಲ್ಲೂಕು ಮೊದಲ ಸ್ಥಾನದಲ್ಲಿದೆ (809 ಮಂದಿ). ಕೆ.ಆರ್.ನಗರ ತಾಲ್ಲೂಕಿನಲ್ಲಿ ಅತ್ಯಂತ ಕಡಿಮೆ ಕಡಿಮೆ ಇರುವುದನ್ನು ಗುರುತಿಸಲಾಗಿದೆ. ಹಳ್ಳಿಗಳಲ್ಲಿನ ವಸತಿರಹಿತರಿಗೆ ‘ಸೂರು’ ಕಲ್ಪಿಸುವ ಉದ್ದೇಶದ ಪ್ರಧಾನ ಮಂತ್ರಿ ಆವಾಸ್ ಯೋಜನೆ–ಗ್ರಾಮೀಣ್ (ಪಿಎಂಎವೈ–ಜಿ) ಅಡಿಯಲ್ಲಿ ಜಿಲ್ಲೆಯಾದ್ಯಂತ ಮತ್ತೊಂದು ಸುತ್ತಿನ ಸಮೀಕ್ಷೆಗೆ ನಡೆಸಲಾಗಿದೆ. ‘ಆವಾಸ್’ ಮೊಬೈಲ್ ಆ್ಯಪ್ ಬಳಸಿ ಮತ್ತು ಖಾಲಿ ನಿವೇಶನವಿರುವ ಸ್ಥಳದಿಂದಲೇ ಜಿಪಿಎಸ್ ಫೋಟೊಸಹಿತ ದಾಖಲಿಸುವ ಪ್ರಕ್ರಿಯೆಯನ್ನು ಕೈಗೊಳ್ಳಲಾಗಿದೆ.
ನೈಜ ಫಲಾನುಭವಿಗಳಿಗೆ ವಸತಿ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ನಿಖರ ಮಾಹಿತಿಗಾಗಿ ಸಮೀಕ್ಷೆ ನಡೆಸಲಾಗಿದೆ– ಎಸ್.ಯುಕೇಶ್‌ಕುಮಾರ್, ಸಿಇಒ ಜಿಲ್ಲಾ ಪಂಚಾಯಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.