ADVERTISEMENT

ಎಚ್‌.ವಿಶ್ವನಾಥ್‌ ಅಲ್ಲ; ಹುಚ್ಚ ವಿಶ್ವನಾಥ್‌: ಶಾಸಕ ಸಾ.ರಾ.ಮಹೇಶ್‌ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2019, 8:48 IST
Last Updated 23 ಸೆಪ್ಟೆಂಬರ್ 2019, 8:48 IST
   

‌‌‌ಮೈಸೂರು: ‘ಶಾಸಕ ಸ್ಥಾನದಿಂದ ಅನರ್ಹರಾದ ಬಳಿಕ ಎಚ್‌.ವಿಶ್ವನಾಥ್‌, ಹುಚ್ಚ ವಿಶ್ವನಾಥ್‌ ಆಗಿದ್ದಾರೆ. ಬಿಜೆಪಿಯ ಗೆಳೆಯರು ಚಿಕಿತ್ಸೆ ಕೊಡಿಸಲಿ’ ಎಂದು ಜೆಡಿಎಸ್ ಶಾಸಕ ಸಾ.ರಾ.ಮಹೇಶ್‌ ವಾಗ್ದಾಳಿ ನಡೆಸಿದರು.

‘ಪಕ್ಷದ ಶಾಸಕರ ತಲೆ ಕಾಯಲಿ ಎಂದು ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಡಿದರೆ, ಜೆಡಿಎಸ್‌ನ ಇಬ್ಬರು ಶಾಸಕರನ್ನು ಬಾಂಬೆಗೆ ಕರೆದೊಯ್ದು ತಲೆ ಹಿಡುಕರಾದರು’ ಎಂದು ಸೋಮವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಿಡಿಕಾರಿದರು.

‘ನನ್ನನ್ನು ಚೆಡ್ಡಿ ಒಗೆದವ ಎಂದಿದ್ದಾರೆ. ಚೆಡ್ಡಿ ಒಗೆದಿದ್ದರೆ ಪರವಾಗಿಲ್ಲ. ನಿಮ್ಮಂಗೆ ಕಂಡ ಕಂಡ ಕಡೆ ಚೆಡ್ಡಿ ಬಿಚ್ಚಿಲ್ಲ. ನೀವೇ ಕೊಚ್ಚೆಗುಂಡಿ. ಬ್ಲೂಫಿಲಂ ಹೀರೋ. ನೀವು ವಕೀಲರಿದ್ದಾಗ ನ್ಯಾಯ ಕೇಳಿಕೊಂಡು ನಿಮ್ಮ ಬಳಿಗೆ ಬಂದಿದ್ದ ವಿಧವೆ ಗತಿ ಏನಾಯ್ತು?. 1994ರಲ್ಲಿ ಕೆ.ಆರ್.ನಗರದಿಂದ ಚುನಾವಣೆಗೆ ಸ್ಪರ್ಧಿಸಿದ್ದಾಗ ನೀವು ಪ್ರಚಾರಕ್ಕೆ ಹೋದ ಕಡೆಯೆಲ್ಲಾ ಹಳ್ಳಿಯ ಜನರು ಬಾಗಿಲು ಮುಚ್ಚುತ್ತಿದ್ದು ಏಕೆ ಎಂಬುದನ್ನು ಬಹಿರಂಗ ಪಡಿಸಬೇಕಾ?’ ಎಂದು ಸಾ.ರಾ.ಮಹೇಶ್‌ ತಿರುಗೇಟು ನೀಡಿದರು.

ADVERTISEMENT

ಪತ್ರಿಕಾಗೋಷ್ಠಿಯಲ್ಲೇ ಆಡಿಯೊ ಸಿಡಿಯೊಂದನ್ನು ಬಿಡುಗಡೆಗೊಳಿಸಿದ ಶಾಸಕರು, ‘ಈ ಪುಣ್ಯಾತ್ಮನಿಗೆ ಹಳ್ಳಿ ಹಕ್ಕಿ ಎಂದು ಕರೆದವರು ಯಾರೋ ಗೊತ್ತಿಲ್ಲ. ಮಳೆಗಾಲ–ಚಳಿಗಾಲ–ಬೇಸಿಗೆ ಕಾಲದಲ್ಲೊಂದೊಂದು ಮೂಡು ಇವರಿಗೆ. ಆಡಿಯೊ ಕೇಳಿ. ಎರಡು ತಿಂಗಳ ಹಿಂದಷ್ಟೇ ತನ್ನ ಹಿರೋಯಿನ್ ಜತೆ ನಡೆಸಿದ ಸರಸ ಸಲ್ಲಾಪವಿದೆ. ಮಾನ–ಮರ್ಯಾದೆ ಇದ್ದವರು ಹೊಳೆಗೋ–ಕೆರೆಗೋ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು’ ಎಂದು ಛೇಡಿಸಿದರು.

‘ಕೆ.ಆರ್.ನಗರದ ತಹಶೀಲ್ದಾರ್ ಕುಟುಂಬ ಬೀದಿಗೆ ನಿಲ್ಲುವಂತಾಗಿದ್ದು ಯಾರಿಂದ ಎಂಬುದನ್ನು ಆಗಿನ ನಿಮ್ಮ ಸಮಕಾಲೀನ ರಾಜಕಾರಣಿಗಳನ್ನು ಕರೆ ತಂದು ಹೇಳಿಸುವೆ. ರೀ ವಿಶ್ವನಾಥ್‌ ಇದು ಆರಂಭ. ಇನ್ಮುಂದೆ ದಾಖಲೆ ಸಮೇತ ನಿಮ್ಮ ಬಣ್ಣ ಬಯಲುಗೊಳಿಸುವೆ. ನವರಾತ್ರಿ ಬರುತ್ತಿದೆ. ಬನ್ನಿ ಚಾಮುಂಡಿ ಸನ್ನಿಧಿಗೆ. ಪ್ರಮಾಣ ಮಾಡಿ. ಕೊಚ್ಚೆಗುಂಡಿ, ಬ್ಲೂಫಿಲಂ ಹೀರೋ, ಅಯೋಗ್ಯ ನಾನಾ–ನೀವಾ ಎಂಬುದನ್ನು ಸಾಬೀತುಪಡಿಸುವೆ’ ಎಂದು ಮಹೇಶ್‌ ವಿಶ್ವನಾಥ್‌ಗೆ ಬಹಿರಂಗ ಸವಾಲು ಹಾಕಿದರು.

‘ನಾನು ಕುಮಾರಸ್ವಾಮಿಗೆ ಹತ್ತಿರದವ. ಅವರು ಮುಖ್ಯಮಂತ್ರಿ ಇದ್ದಂತ ಸಂದರ್ಭದಲ್ಲಿ ನೀವು ಹೇಳಿದ ಕೆಎಸ್‌ಆರ್‌ಟಿಸಿಯ 2000 ಸ್ಕ್ಯ್ರಾಪ್ ಬಸ್‌ಗಳ ವಿಲೇವಾರಿ ನಿಮ್ಮ ಬಾಂಬೆ ಪಾರ್ಟಿಗೆ ಕೊಡಿಸಲಿಲ್ಲ, ₹ 25 ಲಕ್ಷ ನೀವು ಪಡೆದಿದ್ದರೂ ಹಾರೋಹಳ್ಳಿಯ ವರ್ಗಾವಣೆಯನ್ನು ಕಾನೂನು ಬಾಹಿರವಾಗಿ ಮಾಡಿಸಿಕೊಡಲಿಲ್ಲ ಎಂಬುದಕ್ಕೆ ಸಾ.ರಾ.ಮಹೇಶ್‌ ಕೆಟ್ಟವನಾದನಾ’ ಎಂದು ಶಾಸಕರು ಪ್ರಶ್ನಿಸಿದರು.

‘ನಿಮ್ಮ ತಂದೆ 4 ಎಕರೆ ಜಮೀನ್ದಾರ ಎಂಬುದು ಗೊತ್ತಿದೆ. ನಮ್ಮಪ್ಪ ಉಪನ್ಯಾಸಕರಿದ್ದರು. ಸಂಸ್ಕಾರ ಕಲಿಸಿದ್ದಾರೆ. ನಾನೂ ಏಕವಚನ ಬಳಸಬಲ್ಲೆ. ಎಚ್ಚರದಿಂದಿರಿ’ ಎಂದು ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.