ADVERTISEMENT

ಮಾನವ-ಪ್ರಾಣಿ ಸಂಘರ್ಷ ತಡೆಗೆ ಕ್ರಮ ಕೈಗೊಳ್ಳಿ: ಶಾಸಕ ದರ್ಶನ್ ಧ್ರುವನಾರಾಯಣ

ಅಧಿಕಾರಿಗಳ ಸಭೆಯಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 4:20 IST
Last Updated 4 ನವೆಂಬರ್ 2025, 4:20 IST
ನಂಜನಗೂಡಿನ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ಶಾಸಕ ದರ್ಶನ್ ಧ್ರುವನಾರಾಯಣ ಅವರು ಅಧಿಕಾರಿಗಳ ಸಭೆ ನಡೆಸಿದರು
ನಂಜನಗೂಡಿನ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ಶಾಸಕ ದರ್ಶನ್ ಧ್ರುವನಾರಾಯಣ ಅವರು ಅಧಿಕಾರಿಗಳ ಸಭೆ ನಡೆಸಿದರು   

ನಂಜನಗೂಡು: ‘ನಮ್ಮ ಕ್ಷೇತ್ರದಲ್ಲಿ ಮಾನವ ಪ್ರಾಣಿ ಸಂಘರ್ಷದಿಂದ ಯಾವುದೇ ಪ್ರಾಣಾಪಾಯ, ಅನಾಹುತ ಸಂಭವಿಸಿದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಯಾವುದಾದರೂ ಅನಾಹುತ ಸಂಭವಿಸಿದಲ್ಲಿ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು’ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಎಚ್ಚರಿಸಿದರು.

ನಗರದ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ನಡೆದ ಅರಣ್ಯ ಇಲಾಖೆ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ತಾಲ್ಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಮತ್ತು ನಗರ ಪ್ರದೇಶದ ಸುತ್ತಲಿನ ಪ್ರದೇಶಗಳಲ್ಲಿ ಹುಲಿ ಚಿರತೆ ಮತ್ತು ಕಾಡು ಪ್ರಾಣಿಗಳಿಂದ ರೈತರಿಗೆ ಆಗುತ್ತಿರುವ ಹಾನಿಯನ್ನು ತಡೆಗಟ್ಟಬೇಕು. ಹೆಡಿಯಾಲ ಭಾಗದ ಸುತ್ತಲಿನ ಗ್ರಾಮಗಳಲ್ಲಿ ಹೆಚ್ಚಾಗಿ ಹುಲಿಗಳು ಕಾಣಿಸಿಕೊಂಡಿವೆ. ಹುಲಿ ದಾಳಿಯಿಂದ ಪ್ರಾಣ ಹಾನಿಯೂ ಸಂಭವಿಸಿದೆ. ನಮ್ಮ ಪಕ್ಕದ ಕ್ಷೇತ್ರದ ಸರಗೂರಿನಲ್ಲಿ ಕಾಡು ಪ್ರಾಣಿಗಳ ಸಂಘರ್ಷದಿಂದ ಅತ್ಯಂತ ಹೆಚ್ಚು ಪ್ರಾಣ ಹಾನಿಗಳು ಸಂಭವಿಸಿವೆ. ಈ ಘಟನೆ ನಮಗೆ ಪಾಠವಾಗಬೇಕಿದೆ’ ಎಂದರು.

ADVERTISEMENT

‘ಮುಂದಿನ ಎರಡರಿಂದ ಮೂರು ತಿಂಗಳು ಹೆಚ್ಚಾಗಿ ಪ್ರಾಣಿಗಳು ಆಹಾರ ಹುಡುಕಿ ನಾಡಿನತ್ತ ಬರುವುದರಿಂದ, ಕಾಡು ಪ್ರಾಣಿಗಳಿಂದ ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಅರಣ್ಯಾಧಿಕಾರಿಗಳು ತಾಲ್ಲೂಕಿನಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು. ರೈತರಿಂದ ಕರೆ ಬಂದಾಗ ತಕ್ಷಣಕ್ಕೆ ಸ್ಥಳಕ್ಕೆ ಭೇಟಿ ನೀಡಿ ಅವರ ನೆರವಿಗೆ ಧಾವಿಸಬೇಕು. ಅರಣ್ಯ ಪ್ರದೇಶದಲ್ಲಿ ಹೆಚ್ಚು ಪೊದೆ ಇರುವ ಪ್ರದೇಶಗಳನ್ನು ತೆರವುಗೊಳಿಸಿ ಜಂಗಲ್ ಕ್ಲೀನಿಂಗ್ ನಡೆಸಬೇಕು’ ಎಂದು ಸೂಚಿಸಿದರು.

ಗ್ರಾಮ ಪಂಚಾಯಿತಿ ಅಧಿಕಾರಿಗಳು ಹುಲಿ ಕಾಣಿಸಿಕೊಂಡ ಸಂದರ್ಭದಲ್ಲಿ ಡಂಗೂರ ಹೊಡೆಸಿ ಗ್ರಾಮಸ್ಥರು ಎಚ್ಚರಿಕೆ ವಹಿಸುವಂತೆ ಜಾಗೃತಿ ಮೂಡಿಸಬೇಕು. ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಜಂಗಲ್ ಸ್ವಚ್ಛತೆ ನಡೆಸಬೇಕು. ಮುಖ್ಯವಾಗಿ ಕೂಬಿಂಗ್ ಸಮಯದಲ್ಲಿ ಜನರು ಜಮಾವಣೆಯಾಗದಂತೆ 144 ಸೆಕ್ಷನ್ ಜಾರಿಗೊಳಿಸಬೇಕು. ಎಐ ಚಿತ್ರೀಕರಣದ ಮೂಲಕ ಚಿತ್ರಗಳನ್ನು ಸೃಷ್ಟಿಸಿ, ಜನರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡುವವರ ವಿರುದ್ಧ ಕ್ರಮ ವಹಿಸಬೇಕು ಎಂದು ಹೇಳಿದರು.

ನೀರಾವರಿ ಇಲಾಖೆಯ ಅಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಇಲಾಖೆಯ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಜಂಗಲ್ ಕ್ಲೀನಿಂಗ್ ನಡೆಸಬೇಕು. ರೈತರು ರಾತ್ರಿ ವೇಳೆ ನೀರು ಹಾಯಿಸಲು ಜಮೀನಿಗೆ ತೆರಳುವುದನ್ನು ತಪ್ಪಿಸಲು, ಕಾಡಂಚಿನ ಗ್ರಾಮಗಳಲ್ಲಿ ಬೆಳಗಿನ ಸಮಯದಲ್ಲಿ ವಿದ್ಯುತ್ ಸಂಪರ್ಕ ನೀಡಬೇಕು ಎಂದರು.

ಸಹಾಯವಾಣಿ ಆರಂಭಿಸಿ:

ತಾಲ್ಲೂಕು ಆಡಳಿತ ಮಾನವ–ಪ್ರಾಣಿಸಂಘರ್ಷ ತಡೆಯುವ ನಿಟ್ಟಿನಲ್ಲಿ ಜನರಿಗೆ ಅನುಕೂಲವಾಗುವಂತೆ ಸಹಾಯವಾಣಿ ಆರಂಭಿಸಬೇಕು ಎಂದು ತಹಶೀಲ್ದಾರ್ ಶಿವಕುಮಾರ್ ಅವರಿಗೆ ಸೂಚಿಸಿದರು.

ಎಸಿಎಫ್ ಪರಮೇಶ್ ಮಾತನಾಡಿ, ‘ಹೆಡಿಯಲ ಭಾಗದ ಮಡುವಿನಹಳ್ಳಿ, ಮಹದೇವನಗರಗಳಲ್ಲಿ ಸುಮಾರು 8 ಹುಲಿ, ಚಿರತೆಗಳು ಕಾಣಿಸಿಕೊಂಡಿವೆ. ಅವುಗಳ ಸೆರೆಗೆ ಕೂಂಬಿಂಗ್ ನಡೆಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ವಲಯ ಅರಣ್ಯಾಧಿಕಾರಿ ಮುನಿರಾಜು ಮಾತನಾಡಿ, ‘ಮಡುವಿನಹಳ್ಳಿ, ಮಹದೇವನಗರ, ಹೊಸವೀಡು, ಹೆಡಿಯಾಲ, ಕುದುರೆಗುಂಡಿ ಹಳ್ಳದಲ್ಲಿ ಪೊದೆಗಳು ಹೆಚ್ಚಿರುವುದರಿಂದ ಚಿರತೆ, ಹುಲಿಗಳು ವಾಸವಿರುವ ಸಾಧ್ಯತೆ ಹೆಚ್ಚಾಗಿದೆ., ಪೊದೆಗಳನ್ನು ತೆರವುಗೊಳಿಸಲು ಕ್ರಮವಿಸಬೇಕು’ ಎಂದು ಮನವಿ ಮಾಡಿದರು.

ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಹೆಚ್ಚುತ್ತಿದೆ. ಹೆದ್ದಾರಿಯ ಬೀದಿ ದೀಪ ಹಾಳಾಗಿದ್ದು, ದುರಸ್ತಿ ಮಾಡಬೇಕು. ಸೂಚನಾ ಫಲಕಗಳನ್ನು ಅಳವಡಿಸಿಲ್ಲ. ಹೆದ್ದಾರಿ ಪ್ರಾದಿಕಾರದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು, ತಾಲ್ಲೂಕು ಪಂಚಾಯಿತಿ ಇಒ ಜೆರಾಲ್ಡ್ ರಾಜೇಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.