ADVERTISEMENT

ಹುಣಸೂರಿನಲ್ಲಿ ಸಿದ್ದರಾಮಯ್ಯ ತಂತ್ರಕ್ಕೆ ಬಿಜೆಪಿ ಪ್ರತಿತಂತ್ರ

ಹುಣಸೂರು ವಿಧಾನಸಭಾ ಉಪಚುನಾವಣೆ;

ಡಿ.ಬಿ, ನಾಗರಾಜ
Published 1 ಡಿಸೆಂಬರ್ 2019, 14:08 IST
Last Updated 1 ಡಿಸೆಂಬರ್ 2019, 14:08 IST
   

ಮೈಸೂರು: ಕಾಂಗ್ರೆಸ್‌–ಜೆಡಿಎಸ್‌ನ ದೋಸ್ತಿ ಸರ್ಕಾರ ಪತನದ ‘ರೂವಾರಿ’ ಎನಿಸಿದ, ಅಡಗೂರು ಎಚ್‌.ವಿಶ್ವನಾಥ್‌ ಅವರನ್ನು ಹುಣಸೂರು ವಿಧಾನಸಭಾ ಉಪಚುನಾವಣೆಯಲ್ಲಿ ಗೆಲ್ಲಿಸಿಕೊಳ್ಳಲಿಕ್ಕಾಗಿ, ಕಮಲ ಪಾಳೆಯವು ತಂತ್ರಗಾರಿಕೆಯ ಮೊರೆ ಹೋಗಿದೆ.

ಈ ಕ್ಷೇತ್ರವನ್ನು ಪ್ರತಿಷ್ಠೆಯ ಕಣವಾಗಿ ಪರಿಗಣಿಸಿರುವ ಸಿದ್ದರಾಮಯ್ಯ ಸಹ, 15 ಕ್ಷೇತ್ರಗಳ ಉಪಚುನಾವಣೆಯ ಅಧಿಕೃತ ಪ್ರಚಾರಕ್ಕೆ ಬುಧವಾರ ಇಲ್ಲಿಂದಲೇ ಚಾಲನೆ ನೀಡಿದ್ದಾರೆ. ಈಗಾಗಲೇ ತಮ್ಮ ಆಪ್ತರೊಡಗೂಡಿ, ಆಯಾ ಸಮುದಾಯದ ಮುಖಂಡರೊಂದಿಗೆ ಚರ್ಚಿಸಿದ್ದು, ರಣತಂತ್ರ ರೂಪಿಸಿದ್ದಾರೆ. ಜೆಡಿಎಸ್ ವರಿಷ್ಠರು ಕೂಡ ಗೆಲುವಿಗಾಗಿ ಅವರದೇ ಆದ ಸೂತ್ರಗಳನ್ನು ಹೆಣೆದಿದ್ದಾರೆ.

ಇವರಿಬ್ಬರ ತಂತ್ರಗಾರಿಕೆಯನ್ನು ಭೇದಿಸಲು ಬಿಜೆಪಿಯು ಬೇರೆಯದೇ ವಿಧಾನ ಅನುಸರಿಸುತ್ತಿದೆ ಎನ್ನುತ್ತವೆ ಬಿಜೆಪಿ ಮೂಲಗಳು. ಈ ಸಾಧನೆಗಾಗಿ ಪಕ್ಷದ ವರಿಷ್ಠರು, ನಾಮಪತ್ರ ಸಲ್ಲಿಕೆಗೆ ಮುನ್ನವೇ ಬಿಜೆಪಿ ‘ಮಹಾಶಕ್ತಿ ಕೇಂದ್ರ’ದ ನಿಷ್ಠಾವಂತರ ಮೊರೆ ಹೋಗಿದ್ದಾರೆ.

ADVERTISEMENT

ಇದಕ್ಕಾಗಿ, ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳ ಮಂಡಲ ವ್ಯಾಪ್ತಿಯ (ಹುಣಸೂರು ಬಿಜೆಪಿ ಮಂಡಲ ಹೊರತುಪಡಿಸಿ) ಮಹಾಶಕ್ತಿ ಕೇಂದ್ರದ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳ ಆಂತರಿಕ ಸಭೆ ನಡೆದಿದೆ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಸಿರುವ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಕೋಟೆ ಎಂ.ಶಿವಣ್ಣ, ಮುಖಂಡರಿಗೆ ಹಲವು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಹುಣಸೂರಿನವರು ಸ್ವಾಭಿಮಾನಿಗಳು. ಬಿಜೆಪಿಯ ಯಾವ ತಂತ್ರವೂ ನಡೆಯಲ್ಲ. ನಾವು ನೇರವಾಗಿ ಮತದಾರರ ಬಳಿ ಹೋಗಿ ವಿಶ್ವನಾಥ್ ಎಸಗಿದ ದ್ರೋಹ ತಿಳಿಸುತ್ತೇವೆ ಎನ್ನುತ್ತಾರೆಕಾಂಗ್ರೆಸ್ ಮಹಿಳಾ ಘಟಕದ ರಾಜ್ಯ ಅಧ್ಯಕ್ಷೆಪುಷ್ಪಾ ಅಮರನಾಥ್.

ತಂತ್ರಗಾರಿಕೆ: ‘ಒಂದೊಂದು ಮಹಾಶಕ್ತಿ ಕೇಂದ್ರದಿಂದ ಪಕ್ಷನಿಷ್ಠ 100 ಕಾರ್ಯಕರ್ತರ ಪಟ್ಟಿ ತಯಾರಿಸಲಾಗಿದೆ. ಹಲವರ ಒಂದೊಂದು ತಂಡ ರಚಿಸಲಾಗಿದೆ. ಈ ತಂಡಗಳು ಹುಣಸೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿ ಹಳ್ಳಿ–ಹಾಡಿಗೂ ಭೇಟಿ ನೀಡಲಿವೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಬಿಜೆಪಿ ಪದಾಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ತಂಡವು, ಕ್ಷೇತ್ರದ ವ್ಯಾಪ್ತಿಯ ಮನೆಮನೆಗೆ ತೆರಳಿ ಅವರ ಸಮಸ್ಯೆಗಳನ್ನು ಆಲಿಸುತ್ತದೆ. ಬೇಕು–ಬೇಡಗಳ ಪಟ್ಟಿಯನ್ನು ಮಾಡುತ್ತದೆ. ಹೀಗೆ ಸಂಗ್ರಹಿಸಿದ ಮಾಹಿತಿಯನ್ನು ಕ್ರೋಡೀಕರಿಸಿ, ಆಯಾ ಭಾಗದ ಜನರ ನಾಡಿಮಿಡಿತವನ್ನು ಅರುಹುವ ವರದಿಯನ್ನು ಮಂಡಲ ಅಧ್ಯಕ್ಷರಿಗೆ ನೀಡುತ್ತದೆ. ಹೀಗೆ ಸಲ್ಲಿಕೆಯಾದ ವರದಿಯನ್ನು ಆಯಾ ಮಂಡಲ ಅಧ್ಯಕ್ಷರು ಜಿಲ್ಲಾ ಘಟಕಕ್ಕೆ ಸಲ್ಲಿಸುತ್ತಾರೆ. ನಂತರ ರಾಜ್ಯ ಘಟಕಕ್ಕೆ ರವಾನೆಯಾಗುತ್ತದೆ. ಈ ವರದಿ ಆಧಾರದಲ್ಲೇ ಚುನಾವಣಾ ಪ್ರಚಾರಕ್ಕೆ ಬರುವ ಸಚಿವರು, ಆಯಾ ಭಾಗದ ಜನರ ಆಶೋತ್ತರಕ್ಕೆ ತಕ್ಕಂತೆ ಮಾತನಾಡುವ ಜತೆಗೆ, ಹಲವು ಭರವಸೆ, ಯೋಜನೆಗಳನ್ನು ಘೋಷಿಸಲಿದ್ದಾರೆ’ ಎನ್ನುತ್ತಾರೆ ಅವರು.

ಮತದಾರರ ಮೇಲೆ ಪ್ರಭಾವ ಬೀರಲಿದೆ ಎಂಬ ನಿರೀಕ್ಷೆಯಿಂದ ಈ ತಂತ್ರಕ್ಕೆ ಮೊರೆ ಹೋಗಲಾಗಿದೆ. ಸಭೆಯಲ್ಲಿ ಈ ಕುರಿತಂತೆ ಪಕ್ಷ ನಿಷ್ಠರಿಗೆ ಯಾವ ರೀತಿ ಕೆಲಸ ಮಾಡಬೇಕು ಎಂಬುದನ್ನು ಸವಿವರವಾಗಿ ತಿಳಿಸಿಕೊಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಈಗಾಗಲೇ ಸ್ವಂತ ವಾಹನ ಹೊಂದಿದ ನಿಷ್ಠಾವಂತ ಕಾರ್ಯಕರ್ತರು, ಹುಣಸೂರು ಕ್ಷೇತ್ರದಲ್ಲಿ ಈ ಕಾರ್ಯಾಚರಣೆಗೆ ಇಳಿದಿದ್ದಾರೆ ಎಂದೂ ಅವರು ಹೇಳಿದರು.

ಈ ಬಗ್ಗೆ ಪ್ರತಿಕ್ರಿಯೆ ‍ಪಡೆಯಲು ‘ಪ್ರಜಾವಾಣಿ’ ಸ್ಥಳೀಯ ಬಿಜೆಪಿ ಪ್ರಮುಖರನ್ನು ಸಂಪರ್ಕಿಸಿದಾಗ, ಅವರು ಇದನ್ನು ಒಪ್ಪಿಕೊಂಡರು. ಆದರೆ, ಅಧಿಕೃತವಾಗಿ ಮಾತನಾಡಲು ನಿರಾಕರಿಸಿದರು.

ಚಿಹ್ನೆ ಪರಿಚಯಿಸುವ ಹೊಸ ಸವಾಲು

ಹುಣಸೂರಿನ ಮತದಾರರಿಗೆ ಎಚ್‌.ವಿಶ್ವನಾಥ್ ಅವರನ್ನು ಹೊಸದಾಗಿ ಪರಿಚಯ ಮಾಡಿಕೊಡುವ ಅಗತ್ಯ ಇಲ್ಲ. ಆದರೆ, ಬಿಜೆಪಿಗೆ ಸವಾಲು ಎದುರಾಗಿರುವುದು; ಅವರು ಸ್ಪರ್ಧಿಸುತ್ತಿರುವ ಪಕ್ಷದ ಚಿಹ್ನೆಯನ್ನು ಹೊಸದಾಗಿ ಪರಿಚಯಿಸುವಲ್ಲಿ!

ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಅವರು ಈ ಬಾರಿ ಬಿಜೆಪಿ ಅಭ್ಯರ್ಥಿ ಎಂದು ಎಲ್ಲರಿಗೂ ಹೇಳಿಕೊಂಡು ಬರಬೇಕಿದೆ. ಆ ಕಾರಣಕ್ಕಾಗಿಯೇ ಗುರುವಾರ ಹುಣಸೂರಿನಲ್ಲಿ ಪ್ರಚಾರ ನಡೆಸಿದ ಸಚಿವ ವಿ.ಸೋಮಣ್ಣ, ‘ತೆನೆ ಹೊತ್ತ ಮಹಿಳೆಗಲ್ಲ; ಕಮಲಕ್ಕೆ ಮತ ಹಾಕಿ’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.