ADVERTISEMENT

ಹುಣಸೂರು: ರಾಗಿ ಬಂಪರ್‌ ಫಸಲು ನಿರೀಕ್ಷೆಯಲ್ಲಿ ರೈತ

ಬೇಸಾಯಕ್ಕೆ ಪೂರಕ ಹಿಂಗಾರು ಮಳೆ; ಬಿತ್ತನೆ ಕಾರ್ಯ ಪೂರ್ಣ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 5:16 IST
Last Updated 25 ಅಕ್ಟೋಬರ್ 2025, 5:16 IST
ಹುಣಸೂರು ತಾಲ್ಲೂಕಿನ ಭರತವಾಡಿ ಗ್ರಾಮದಲ್ಲಿ ಹುಲುಸಾಗಿ ಬೆಳೆದಿರುವ ರಾಗಿ ಹೊಲದಲ್ಲಿ ರೈತ ಮಹಿಳೆ ಕಳೆ  ಕೀಳುತ್ತಿರುವುದು 
ಹುಣಸೂರು ತಾಲ್ಲೂಕಿನ ಭರತವಾಡಿ ಗ್ರಾಮದಲ್ಲಿ ಹುಲುಸಾಗಿ ಬೆಳೆದಿರುವ ರಾಗಿ ಹೊಲದಲ್ಲಿ ರೈತ ಮಹಿಳೆ ಕಳೆ  ಕೀಳುತ್ತಿರುವುದು    

ಹುಣಸೂರು: ಅರೆ ಮಲೆನಾಡು ಪ್ರದೇಶಕ್ಕೆ ಸೇರಿದ ಹುಣಸೂರು ತಾಲ್ಲೂಕಿನಲ್ಲಿ ಹಿಂಗಾರು ಮಳೆ ಉತ್ತಮವಾಗಿದ್ದು, ದ್ವಿದಳ ಧಾನ್ಯ ಬೇಸಾಯ ಭರದಿಂದ ಸಾಗಿ 11, 005 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಮುಗಿದಿದೆ.

ಕ್ಷೇತ್ರದ ಪ್ರಮುಖ ವಾಣಿಜ್ಯ ಬೆಳೆ ತಂಬಾಕು ಬೇಸಾಯ ಮುಕ್ತಾಯಗೊಂಡು ಹಿಂಗಾರು ಮಳೆಗೆ ತಂಬಾಕು ತೆಗೆದು ದ್ವಿದಳ ಧಾನ್ಯಗಳಾದ ಅವರೆಕಾಯಿ, ಹುರುಳಿ, ಅಲಸಂದೆ, ರಾಗಿ ಮತ್ತು ಎಣ್ಣೆ ಕಾಳು ಬೆಳೆಯುವುದು ವಾಡಿಕೆ.

ಈ ಹಂಗಾಮಿನಲ್ಲಿ ಸುರಿದ ಉತ್ತಮ ಮಳೆಗೆ ರೈತರು ಬಹುತೇಕ ಪ್ರದೇಶದಲ್ಲಿ ಬಿತ್ತನೆ ಮುಗಿಸಿ  ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದಾರೆ. ಏಕದಳ ಧಾನ್ಯಗಳಾದ ರಾಗಿ 5,575 ಹೆಕ್ಟೇರ್‌ ಮತ್ತು ಮುಸುಕಿನ ಜೋಳ 1,690 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮುಗಿದಿದೆ.

ADVERTISEMENT

ದ್ವಿದಳ ಧಾನ್ಯಗಳಲ್ಲಿ ಹುರುಳಿ 2,650 ಹೆಕ್ಟೇರ್‌, ಅಸಂದೆ 680 ಹೆಕ್ಟೇರ್‌, ಅವರೆಕಾಯಿ 410 ಹೆಕ್ಟೇರ್‌ ಸೇರಿದಂತೆ ಒಟ್ಟು 3,740 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗಿದೆ.

ಮಳೆ: ಹಿಂಗಾರು ವಾಡಿಕೆ ಮಳೆ ಪ್ರಮಾಣ ಜನವರಿಯಿಂದ ಅಕ್ಟೋಬರ್‌ ವರೆಗೆ 69.4 ಸೆ.ಮೀ. ಮಳೆ ಬದಲು 68.2 ಸೆ.ಮೀ. ಮಳೆಯಾಗಿದೆ. ಅಕ್ಟೋಬರ್‌ ತಿಂಗಳಲ್ಲಿ ವಾಡಿಕೆಯ ಮಳೆ 11.7 ಸೆ.ಮೀ. ಆಗಬೇಕಿದ್ದು 15.5 ಸೆ.ಮೀ. ಮಳೆ ಲಭಿಸಿದೆ. ಕಳೆದ ಸಾಲಿನಲ್ಲಿ ಅಕ್ಟೋಬರ್‌ 24 ವರೆಗೆ 74.5 ಸೆ.ಮೀ. ಮಳೆಯಾಗಿತ್ತು. ಗಾವಡಗೆರೆ ಹೋಬಳಿ ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶ ಎಂದು ಗುರುತಿಸಿದ್ದು,  ಅಕ್ಟೋಬರ್‌ ತಿಂಗಳಲ್ಲಿ ವಾಡಿಕೆ ಮಳೆ 11.6ಸೆ.ಮೀ. ನಿರೀಕ್ಷೆ ಇತ್ತಾದರೂ 21.85 ಸೆ.ಮೀ. ಮಳೆಯಾಗಿ ಗಾವಡಗೆರೆ, ಹಿರಿಕ್ಯಾತನಹಳ್ಳಿ, ಮುಳ್ಳೂರು ಭಾಗದಲ್ಲಿ ತಗ್ಗು ಪ್ರದೇಶದ ಹೊಲ ಗದ್ದೆಗಳಲ್ಲಿ ಬೆಳೆ ನಾಶವಾಗಿತ್ತು.

ಮಹಾದೇವಿ  
ಅನಿಲ್‌  
ಸರ್ಕಾರ ಪ್ರತಿ ಕ್ವಿಂಟಲ್‌ಗೆ ₹ 4886 ಬೆಂಬಲ ಬೆಲೆ ನೀಡಿ ಖರೀದಿಸುತ್ತಿದ್ದು ಒಂದು ಹೆಕ್ಟೇರ್‌ನಲ್ಲಿ 8 ಕ್ವಿಂಟಲ್‌ ಇಳುವರಿ ನಿರೀಕ್ಷೆಯಲ್ಲಿದ್ದೇವೆ. ರಾಗಿ ಬೆಳೆಯುವುದು ಲಾಭದಾಯಕ. ಜಾನುವಾರುಗಳಿಗೆ ಮೇವೂ ಸಿಗುತ್ತದೆ.
ಮಹಾದೇವಿ ರೈತ ಮಹಿಳೆ ಭರತವಾಡಿ
ರಸಗೊಬ್ಬರದ ಕೊರತೆ ಇಲ್ಲ ರಸಗೊಬ್ಬರ ಮಾರಾಟ ಕೇಂದ್ರಗಳಲ್ಲಿ ದಾಸ್ತಾನಿದೆ. ಆತಂಕಪಡುವ ಅವಶ್ಯಕತೆ ಇಲ್ಲ. ಅ. 23 ರಂದು ಹೆಚ್ಚುವರಿ 260 ಟನ್‌ ಯೂರಿಯಾ ತರಿಸಲಾಗಿದೆ.
ಅನಿಲ್‌ ಕೃಷಿ ಸಹಾಯಕ ನಿರ್ದೇಶಕ ಹುಣಸೂರು

‘ಉತ್ತಮ ರಾಗಿ ಫಸಲು ನಿರೀಕ್ಷೆ’

ತಾಲ್ಲೂಕಿನಲ್ಲಿ ಈ ಸಾಲಿನಲ್ಲಿ ತಡ ಮುಂಗಾರಿನಲ್ಲಿ 16400 ಹೆಕ್ಟೇರ್ ಮತ್ತು ಹಿಂಗಾರಿನಲ್ಲಿ 5575 ಹೆಕ್ಟೇರ್‌ ಸೇರಿದಂತೆ ಒಟ್ಟು 21975 ಹೆಕ್ಟೇರ್‌ ಪ್ರದೇಶದಲ್ಲಿ ರೈತರು ರಾಗಿ ಬೆಳೆದಿದ್ದಾರೆ. ತಡ ಮುಂಗಾರಿನಲ್ಲಿ ನಾಟಿ ಮಾಡಿದ್ದ ರಾಗಿ ಕಟಾವಿಗೆ ಬಂದಿಲ್ಲ. ಹಿಂಗಾರಿನಲ್ಲಿ ನಾಟಿ ಮಾಡಿದ ರಾಗಿ ಉತ್ತಮವಾಗಿ ಬೆಳೆದಿದೆ. ಪ್ರತಿ ಹೆಕ್ಟೇರ್‌ಗೆ ಕನಿಷ್ಠ 6 ರಿಂದ 7 ಕ್ವಿಂಟಲ್‌ ರಾಗಿ ಇಳುವರಿ ನಿರೀಕ್ಷೆಯಲ್ಲಿದ್ದು ಒಟ್ಟು 2.30 ಲಕ್ಷ ಕ್ವಿಂಟಲ್‌ ಇಳುವರಿ ನಿರೀಕ್ಷೆಯಲ್ಲಿದ್ದೇವೆ ಎಂದು  ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅನಿಲ್‌ ತಿಳಿಸಿದರು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.