
ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ
ಮೈಸೂರು: ‘ಜಿಲ್ಲೆಯ ಅಭಿವೃದ್ಧಿಗೆ ಎರಡೂವರೆ ವರ್ಷಗಳಲ್ಲಿ ₹ 10ಸಾವಿರ ಕೋಟಿ ಅನುದಾನ ನೀಡಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ತಾವು ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ₹ 323.04 ಕೋಟಿ ಮೊತ್ತದಲ್ಲಿ ವಿವಿಧ ಇಲಾಖೆಗಳ ಮೂಲಕ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ತಿ.ನರಸೀಪುರ ತಾಲ್ಲೂಕಿನ ಕುಪ್ಯಾ ಗ್ರಾಮದಲ್ಲಿ ನೆರವೇರಿಸಿ ಅವರು ಮಾತನಾಡಿದರು.
‘ನಾನು 2ನೇ ಬಾರಿಗೆ ಮುಖ್ಯಮಂತ್ರಿಯಾದ ಬಳಿಕ ವರುಣ ಕ್ಷೇತ್ರದಲ್ಲಿ ಮೂರು ಬಾರಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ದೊಡ್ಡಮಟ್ಟದಲ್ಲಿ ನಡೆಸಿದ್ದೇವೆ. 2024ರಲ್ಲಿ ₹ 501 ಕೋಟಿ ಹಾಗೂ 2025ರ ಆಗಸ್ಟ್‌ನಲ್ಲಿ ₹ 1,108 ಕೋಟಿ ಮೊತ್ತದ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮಾಡಿದ್ದೆವು. ಈಗ, ₹ 323 ಕೋಟಿ ಸೇರಿದಂತೆ ಒಟ್ಟು ₹ 1,932 ಕೋಟಿಯನ್ನು ಕ್ಷೇತ್ರದ ಅಭಿವೃದ್ಧಿಗೆ ಒದಗಿಸಿದ್ದೇನೆ. 1,500ಕ್ಕೂ ಹೆಚ್ಚು ಕೆಲಸಗಳನ್ನು ಇದು ಒಳಗೊಂಡಿದೆ’ ಎಂದು ಹೇಳಿದರು.
ವಿರೋಧ ಪಕ್ಷದವರು ಅರ್ಥ ಮಾಡಿಕೊಳ್ಳಬೇಕು
‘ನಾವು ಅಭಿವೃದ್ಧಿಗೂ ಹಣ ಕೊಡುತ್ತಿದ್ದೇವೆ. ಜೊತೆಗೆ ಗ್ಯಾರಂಟಿ ಯೋಜನೆಗಳಿಗೂ ನೀಡುತ್ತಿದ್ದೇವೆ ಎನ್ನುವುದು ಸ್ಪಷ್ಟವಾಗಿದೆ. ಆದರೆ, ವಿರೋಧ ಪಕ್ಷದವರು ನಮ್ಮ ವಿರುದ್ಧ ದೊಡ್ಡ ಮಟ್ಟದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಹಣ ಇಲ್ಲ, ಗ್ಯಾರಂಟಿಗೆ ಹಣ ಕೊಟ್ಟಿರುವುದರಿಂದ ಖಜಾನೆ ಖಾಲಿಯಾಗಿದೆ ಎಂದು ಹೇಳುತ್ತಾರೆ. ಖಜಾನೆ ಖಾಲಿಯಾಗಿದ್ದರೆ ಇಷ್ಟೊಂದು ಕೋಟಿ ಮೊತ್ತದ ಕಾಮಗಾರಿ ಕೈಗೊಳ್ಳುವುದಕ್ಕೆ ಸಾಧ್ಯವಾಗುತ್ತಿತ್ತೇ? ಎಲ್ಲ ಜಿಲ್ಲೆಗಳಲ್ಲೂ ಅಭಿವೃದ್ಧಿಗೆ ಹಣ ಕೊಟ್ಟಿದ್ದೇವೆ. ಇದನ್ನು ವಿರೋಧಪಕ್ಷದವರು ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.
‘ನಮ್ಮ ಸರ್ಕಾರವು ಪಂಚ ಗ್ಯಾರಂಟಿ ಯೋಜನೆಗಳಿಗಾಗಿ ₹ 1.15 ಲಕ್ಷ ಕೋಟಿ ವೆಚ್ಚ ಮಾಡಿದೆ.
‘ನಾನು ಹೆಚ್ಚಾಗಿ ಕ್ಷೇತ್ರಕ್ಕೆ ಬರುವುದಕ್ಕೆ ಆಗುತ್ತಿಲ್ಲ. ಆದರೆ, ಅಭಿವೃದ್ಧಿ ಕಾರ್ಯ ನಿಂತಿಲ್ಲ. ಜನರು, ನಾನು ಕ್ಷೇತ್ರಕ್ಕೆ ಬರುತ್ತಿಲ್ಲ ಎಂದು ತಪ್ಪು ತಿಳಿದುಕೊಳ್ಳಬಾರದು. ಮೇಲ್ಮನೆ ಸದಸ್ಯರಾದ ಯತೀಂದ್ರ ಕ್ಷೇತ್ರವನ್ನು ಸಂಪೂರ್ಣವಾಗಿ ನೋಡಿಕೊಳ್ಳುತ್ತಿದ್ದಾರೆ. ನನ್ನ ಗೈರು ಹಾಜರಿಯಲ್ಲಿ ಕ್ಷೇತ್ರೆದ ಜನರ ಕಷ್ಟ–ಸುಖವನ್ನು ಅವರು ಕೇಳುತ್ತಿದ್ದಾರೆ. ಗ್ರಾಮಗಳಿಗೂ ಭೇಟಿ ಕೊಡುತ್ತಿದ್ದಾರೆ’ ಎಂದ ಅವರು, ‘ಹೌದೋ ಅಲ್ಲವೋ’ ಎಂದು ನೆರೆದಿದ್ದವರನ್ನು ಕೇಳಿದರು. ಜನರು ‘ಹೌದು’ ಎಂದು ಉತ್ತರಿಸಿದರು.
‘ಮ–ನರೇಗಾ ಮರುಸ್ಥಾಪನೆಗಾಗಿ ಜನರು ಹೋರಾಟಕ್ಕೆ ಸಜ್ಜಾಗಬೇಕು. ಕಾಯ್ದೆ ರದ್ದುಪಡಿಸುವವರೆಗೂ ವಿರಮಿಸಬಾರದು. ಬಿಜೆಪಿಯವರು ಬಡವರು, ದಲಿತರು, ಹೆಣ್ಣುಮಕ್ಕಳು ಹಾಗೂ ಕಾರ್ಮಿಕರಿಗೆ ಕೆಲಸ ಕೊಡುವುದಕ್ಕೆ ಬಿಡುವುದಿಲ್ಲ. ವರ್ಷದಲ್ಲಿ ಯಾವಾಗ ಕೇಳಿದರೂ ಉದ್ಯೋಗ ನೀಡುವ ಕಾನೂನನ್ನು ಮನಮೋಹನ್‌ಸಿಂಗ್ ಅವರು ಮಾಡಿದ್ದರು. ಈಗ, ಕೆಲಸ ಕೊಡುವುದನ್ನು ಸರ್ಕಾರವೇ ನಿರ್ಧರಿಸುತ್ತದೆ. ಇದರಿಂದ ದುಡಿಯುವ ಕೈಗಳಿಗೆ ಅನ್ಯಾಯ ಆಗುತ್ತದೆ’ ಎಂದು ತಿಳಿಸಿದರು.
‘ಹೊಸ ಕಾಯ್ದೆಯ ರಾಮ್ ಜಿ ಎಂದರೆ ರಾಮನಲ್ಲ. ಕೌಶಲ್ಯ ರಾಮನೂ ಅಲ್ಲ, ಸೀತಾರಾಮನೂ ಅಲ್ಲ. ದಶರಥರಾಮನೂ ಅಲ್ಲ. ಜನರನ್ನು ತಪ್ಪು ದಾರಿಗೆ ಎಳೆಯುವುದಕ್ಕಾಗಿ ವಿಬಿ–ಜಿರಾಮ್‌ಜಿ ಎಂದು ಮಾಡಿದ್ದಾರೆ’ ಎಂದು ಆರೋಪಿಸಿದರು.
‘ನನ್ನ ಕೊನೆಯ ಉಸಿರು ಇರುವವರೆಗೂ ರಾಜ್ಯದ ಜನರ ಸೇವೆ ಮಾಡುತ್ತೇನೆ’ ಎಂದು ಹೇಳಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ‘ವರುಣ ಕ್ಷೇತ್ರದಲ್ಲಿ ನಿಮ್ಹಾನ್ಸ್ ಆಸ್ಪತ್ರೆ ಮಾದರಿಯಲ್ಲಿ ₹100 ಕೋಟಿ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ಮುಖ್ಯಮಂತ್ರಿಯವರು ಜಿಲ್ಲೆಯಲ್ಲಿ ಜಯದೇವ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ ಪ್ರಾರಂಭಿಸಿ ಬಡವರಿಗೆ ಉತ್ತಮ ಆರೋಗ್ಯ ಸೇವೆ ಪಡೆಯುವಂತೆ ಮಾಡಿದ್ದಾರೆ’ ಎಂದರು.
ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ, ‘ಸಂವಿಧಾನದ ಮೌಲ್ಯವನ್ನು ಪ್ರತಿಯೊಬ್ಬರೂ ತಿಳಿಯಬೇಕು. ಅದನ್ನು ಗೌರವಿಸಿ ಪಾಲಿಸುವವರನ್ನು ಜನರು ಬೆಂಬಲಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು’ ಎಂದು ಕೋರಿದರು.
ಸಂಸದ ಸುನೀಲ್ ಬೋಸ್ ಮಾತನಾಡಿದರು. ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಕೆ.ಆರ್.ನಗರ ಶಾಸಕ ಡಿ.ರವಿಶಂಕರ್, ವಿಧಾನಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ, ಮೈಲ್ಯಾಕ್ ಅಧ್ಯಕ್ಷ ಎಚ್.ಡಿ. ಗಣೇಶ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.