ADVERTISEMENT

ಯಾವುದೇ ಕಾರಣಕ್ಕೂ ಬಿಜೆಪಿ ಸೇರಲ್ಲ: ಜಿ.ಟಿ ದೇವೇಗೌಡ

​ಪ್ರಜಾವಾಣಿ ವಾರ್ತೆ
Published 4 ಜೂನ್ 2019, 18:05 IST
Last Updated 4 ಜೂನ್ 2019, 18:05 IST
   

ಮೈಸೂರು: ‘ಯಾವುದೇ ಕಾರಣಕ್ಕೂ ನಾನು ಬಿಜೆಪಿ ಸೇರುವುದಿಲ್ಲ. ಏನೇನೊ ಕಟ್ಟುಕತೆಗಳನ್ನು ನಂಬಬೇಡಿ’ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಇಲ್ಲಿ ಮಂಗಳವಾರ ಸ್ಪಷ್ಟಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ಬಿಜೆಪಿಗೆ ಹೋಗಲ್ಲ ಅಂತ ಎಷ್ಟು ಸಲ ಹೇಳಬೇಕು. ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಉನ್ನತ ಶಿಕ್ಷಣ ಸಚಿವ ಸ್ಥಾನವನ್ನು ಪಕ್ಷ ನನಗೆ ನೀಡಿದೆ. ಬಿಜೆಪಿಗೆ ಹೋಗುವಂತಹ ಪ್ರಮೇಯ ಏನಿದೆ’ ಎಂದು ಪ್ರಶ್ನಿಸಿದರು.

‘ಬಿಜೆಪಿಯ ಯಾವುದೇ ಮುಖಂಡರು ಪಕ್ಷಕ್ಕೆ ಬನ್ನಿ ಎಂದು ನನ್ನನ್ನು ಕರೆದಿಲ್ಲ. ಆ ಪಕ್ಷದ ನಾಯಕರ ಜತೆ ಮಾತನಾಡಿಯೂ ಇಲ್ಲ. ಈ ಹಿಂದೆ ಬಿಜೆಪಿಯಲ್ಲಿದ್ದವ ನಾನು. ಆ ಪಕ್ಷ ಏನು ಎಂಬುದನ್ನು ಚೆನ್ನಾಗಿ ಬಲ್ಲೆ’ ಎಂದರು.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಮೈತ್ರಿ ಸರ್ಕಾರ ಐದು ವರ್ಷ ಪೂರೈಸಬೇಕು ಎಂಬುದು ಮಾತ್ರ ನಮ್ಮ ಮುಂದಿರುವ ಗುರಿ ಎಂದು ತಿಳಿಸಿದರು.

ಸತ್ಯಶೋಧನಾ ಸಮಿತಿ ರಚನೆಯಾಗಲಿ: ‘ಕಾಂಗ್ರೆಸ್‌ ಪಕ್ಷವು ಲೋಕಸಭೆ ಚುನಾವಣೆಯ ಸೋಲಿಗೆ ಕಾರಣಗಳನ್ನು ಹುಡುಕಲು ಸತ್ಯಶೋಧನಾ ಸಮಿತಿ ರಚಿಸಿದೆ. ಜೆಡಿಎಸ್‌ ಅಭ್ಯರ್ಥಿಗಳ ಸೋಲಿಗೆ ಕಾರಣಗಳನ್ನು ತಿಳಿಯಲು ಅದೇ ರೀತಿ ಸಮಿತಿ ರಚಿಸುವಂತೆ ಹೈಕಮಾಂಡ್‌ಗೆ ಒತ್ತಾಯಿಸಲಾಗುವುದು’ ಎಂದು ಹೇಳಿದರು.

‘ಬಿಜೆಪಿಯ ಯಾವುದೇ ಮುಖಂಡರು ಪಕ್ಷಕ್ಕೆ ಬನ್ನಿ ಎಂದು ನನ್ನನ್ನು ಕರೆದಿಲ್ಲ. ನಾನು ಆ ಪಕ್ಷದ ನಾಯಕರ ಜತೆ ಮಾತನಾಡಿಯೂ ಇಲ್ಲ. ಈ ಹಿಂದೆ ಐದು ವರ್ಷ ಬಿಜೆಪಿಯಲ್ಲಿದ್ದ ನಾನು, ಆ ಪಕ್ಷ ಏನು ಎಂಬುದನ್ನು ಚೆನ್ನಾಗಿ ಬಲ್ಲೆ’ ಎಂದರು.

ಎಚ್‌.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಮೈತ್ರಿ ಸರ್ಕಾರ ಐದು ವರ್ಷ ಪೂರೈಸಬೇಕು ಎಂಬುದು ಮಾತ್ರ ನಮ್ಮ ಮುಂದಿರುವ ಗುರಿ ಎಂದು ತಿಳಿಸಿದರು.

ಕಾರಿನಲ್ಲಿ ಕಮಲ–ತೆನೆ ದೋಸ್ತಿ!

ರಾಜಕೀಯ ವಿಚಾರದಲ್ಲಿ ಪದೇಪದೇ ಕೆಣಕುವ, ತೆಗಳುವ, ವಾಕ್‌ ಪ್ರಹಾರ ನಡೆಸುವ ಬಿಜೆಪಿ ಹಾಗೂ ಜೆಡಿಎಸ್‌ ಮುಖಂಡರು ಮೈಸೂರಿನಲ್ಲಿ ಮಂಗಳವಾರ ಕುಶಲೋಪರಿಯಲ್ಲಿ ತೊಡಗಿದ್ದು ಕಂಡುಬಂತು. ಹಲವು ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡರು.

ಅಷ್ಟೇ ಏಕೆ; ಒಂದೇ ಕಾರಿನಲ್ಲಿ ಅಕ್ಕಪಕ್ಕ ಕುಳಿತು ಪ್ರಯಾಣಿಸುವ ಮೂಲಕ ಗಮನ ಸೆಳೆದರು. ಬಿಜೆಪಿ ಸಂಸದ ಪ್ರತಾಪಸಿಂಹ ಅವರು ಸಚಿವ ಜಿ.ಟಿ.ದೇವೇಗೌಡ ಜೊತೆ ಕಾರಿನಲ್ಲಿ ಪ್ರಯಾಣಿಸಿದರು. ಪ್ರತಾಪಸಿಂಹ ಪಕ್ಕ ಸಚಿವ ಸಾ.ರಾ.ಮಹೇಶ್‌ ಕುಳಿತಿದ್ದರು.

ಬೆಳಿಗ್ಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಜಿಟಿಡಿ ಹಾಗೂ ಪ್ರತಾಪಸಿಂಹ ಚಾಲನೆ ನೀಡಿದರು. ನಂತರ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಕಾರ್ಯಕ್ರಮದಲ್ಲೂ ಜೊತೆಯಲ್ಲಿ ಕಾಣಿಸಿಕೊಂಡರು. ಬಿಜೆಪಿ ಶಾಸಕರಾದ ಎಸ್‌.ಎ.ರಾಮದಾಸ್, ಎಲ್‌.ನಾಗೇಂದ್ರ ಕೂಡ ಸಾಥ್ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.