ADVERTISEMENT

ತಂದೆಗಾಗಿ ವರುಣಾ ಕ್ಷೇತ್ರ ತ್ಯಾಗಕ್ಕೆ ಮುಂದಾದ ಯತೀಂದ್ರ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 4 ಜುಲೈ 2022, 13:17 IST
Last Updated 4 ಜುಲೈ 2022, 13:17 IST
ಡಾ.ಯತೀಂದ್ರ ಸಿದ್ದರಾಮಯ್ಯ
ಡಾ.ಯತೀಂದ್ರ ಸಿದ್ದರಾಮಯ್ಯ   

ಮೈಸೂರು: ‘ತಂದೆ, ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ನಾನು ಪ್ರತಿನಿಧಿಸುತ್ತಿರುವ ವರುಣಾ ಕ್ಷೇತ್ರ ಬಿಟ್ಟು ಕೊಡುತ್ತೇನೆ. ಜನರು ಅಪೇಕ್ಷಿಸಿದರೆ ಇಲ್ಲಿಂದಲೇ ಸ್ಪರ್ಧಿಸಲಿ’ ಎಂದು ಕಾಂಗ್ರೆಸ್ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಇಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿ, ‘ಅಪ್ಪ ನನ್ನ ಕ್ಷೇತ್ರದಿಂದ ಸ್ಪರ್ಧಿಸಿದರೆ ನಾನು ಬೇರೆಲ್ಲೂ ಸ್ಪರ್ಧಿಸುವುದಿಲ್ಲ. ಇಲ್ಲೇ ಇದ್ದು ಅವರ ಗೆಲುವಿಗಾಗಿ ಶ್ರಮಿಸುವೆ’ ಎಂದರು.

‘ತಂದೆ ವರುಣಾಕ್ಕೆ ಬಂದರೆ ನಾನು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಹೋಗುತ್ತೇನೆ ಎಂಬುದು ಸುಳ್ಳು. ಆ ರೀತಿಯ ಯೋಚನೆ ಮಾಡಿಲ್ಲ. ಕ್ಚೇತ್ರದ ಆಯ್ಕೆಗೆ ಇನ್ನೂ ಸಮಯವಿದೆ. ಸಿದ್ದರಾಮಯ್ಯ ಅವರಿಗೆ ಬಹಳಷ್ಟು ಕ್ಷೇತ್ರಗಳಿಂದ ಆಹ್ವಾನವಿದೆ. ಅವರು ಹಾಗೂ ಪಕ್ಷದ ಹೈಕಮಾಂಡ್ ಅಳೆದು–ತೂಗಿ ನಿರ್ಧರಿಸಲಿದ್ದಾರೆ. ಈಗಲೇ ತೀರ್ಮಾನಕ್ಕೆ ಬರಬೇಕಾದ ತುರ್ತಿಲ್ಲ’ ಎಂದು ಪ್ರತಿಕ್ರಿಯಿಸಿದರು.

ADVERTISEMENT

‘ದಾವಣೆಗೆರೆಯಲ್ಲಿ ಆಯೋಜಿಸಿರುವ ‘ಸಿದ್ದರಾಮೋತ್ಸವ’ ಶಕ್ತಿ ಪ್ರದರ್ಶನದ ಕಾರ್ಯಕ್ರಮವಲ್ಲ. ತಂದೆಯ 75ನೇ ಜನ್ಮದಿನಾಚರಣೆ ಸಮಾರಂಭವಷ್ಟೆ. ಅದರಲ್ಲಿ ರಾಜಕೀಯ ಹುಡುಕಬೇಡಿ. ಎಲ್ಲ ಪಕ್ಷದವರನ್ನೂ ಸೇರಿಸಿಕೊಂಡು ಅಮೃತ ಮಹೋತ್ಸವ ಆಚರಿಸಿದರೆ ರಾಜಕೀಯವಾಗಿ ಬೇರೆ ರೀತಿಯ ಚರ್ಚೆಗಳಾಗುತ್ತವೆ. ಹೀಗಾಗಿ, ಕಾಂಗ್ರೆಸ್ ನಾಯಕರ ಸಮ್ಮುಖದಲ್ಲೇ ನಡೆಸಲಿದ್ದೇವೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕಾಗಿ ಹೀಗೆಲ್ಲಾ ಬಿಂಬಿಸಿಕೊಳ್ಳುತ್ತಿದ್ದಾರೆ ಎನ್ನುವುದು ಸರಿಯಲ್ಲ. ಈಗಲೇ ಬಿಂಬಿಸಿಕೊಳ್ಳುವ ಅಗತ್ಯ ಯಾರಿಗೂ ಇಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.