ಎಚ್.ಡಿ.ಕೋಟೆ: ಹಂಪಾಪುರ ಮತ್ತು ಜಯಪುರ ಹೋಬಳಿಯ 48 ಕೆರೆಗಳಿಗೆ ನೀರು ತುಂಬಿಸುವ ₹68 ಕೋಟಿ ವೆಚ್ಚದ ಇಬ್ಜಾಲ ಏತ ನೀರಾವರಿ ಯೋಜನೆ 2022ರಲ್ಲಿ ಪೂರ್ಣಗೊಂಡಿದ್ದರೂ ಬಳಕೆ ಆಗುತ್ತಿಲ್ಲ. ‘ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ’ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.
ಯೋಜನೆಯ ಉದ್ದೇಶ ಫಲಿಸದೆ, ವ್ಯಾಪ್ತಿಯ ಕೆರೆಗಳು ನೀರಿಲ್ಲದೆ ತಮ್ಮ ಸ್ವರೂಪ ಕಳೆದುಕೊಂಡಿದ್ದು, ಸುತ್ತಮುತ್ತಲಿನ ಅಂತರ್ಜಲಮಟ್ಟ ತೀವ್ರವಾಗಿ ಕುಸಿಯತೊಡಗಿದೆ. ಇದರಿಂದ ರೈತರು, ಸಾರ್ವಜನಿಕರು ಸಮಸ್ಯೆಗೆ ಸಿಲುಕಿಕೊಂದ್ದಾರೆ. ಸರಿಯಾದ ಪ್ರಮಾಣದಲ್ಲಿ ಮಳೆ ಇಲ್ಲದೆ ಯಾವ ಕೆರೆಗಳೂ ಭರ್ತಿಯಾಗಿಲ್ಲ. ಇದರಿಂತರ ರೈತರ ಕೊಳವೆಬಾವಿಗಳಲ್ಲಿಯೂ ನೀರು ಸಿಗದಂತಾಗಿದೆ.
‘ಕಬಿನಿ ಜಲಾಶಯದಿಂದ ತಮಿಳುನಾಡಿಗೆ ದೊಡ್ಡ ಪ್ರಮಾಣದಲ್ಲಿ ನೀರು ನಿರಂತರವಾಗಿ ಹರಿಯುತ್ತಿದೆ. ಆದರೆ, ತಾಲ್ಲೂಕು ವ್ಯಾಪ್ತಿಯ ಕೆರೆಗಳು ಒಣಗುತ್ತಿದೆ. ತಾಲ್ಲೂಕಿನ ಗ್ರಾಮದ ಬಳಿ ಇರುವ ಪಂಪ್‌ಹೌಸ್ ಮೂಲಕ ಕೆರೆಗಳಿಗೆ ನೀರು ಹರಿಸಲು ಎರಡು ಮೋಟಾರ್‌ಗಳನ್ನು ಕ್ಯೂಸೆಕ್ ಪ್ರಮಾಣದಲ್ಲಿ ಒಟ್ಟು 16 ಕ್ಯೂಸೆಕ್ ನೀರನ್ನು ಕೆರೆಗಳಿಗೆ ಹರಿಸುವ ಸಾಮರ್ಥ್ಯವಿದೆ. ಇಂತಹ ಅವಕಾಶ ಬಳಸಿಕೊಂಡು ಅಧಿಕಾರಿಗಳು ಕ್ರಮವಹಿಸಿದ್ದರೆ, ಈಗಾಗಲೆ ಕೆರೆಗಳು ಅರ್ಧದಷ್ಟು ಭರ್ತಿಯಾಗುತ್ತಿದ್ದವು’ ಎಂದು ಶಿಂಡೇನಹಳ್ಳಿಯ ರೈತ ಮುಖಂಡ ಯತೀಶ್ ತಿಳಿಸಿದರು.
ತಾಲ್ಲೂಕು ಅರೆ ಮಲೆನಾಡು ಎಂದು ಹೆಸರಾದರೂ, ಹಂಪಾಪುರ ಹೋಬಳಿ ಬರಪೀಡಿತ ಪ್ರದೇಶವಾಗಿದೆ. ಜನ– ಜಾನುವಾರುಗಳಿಗೆ ಮಳೆಗಾಲದಲ್ಲಿಯೇ ನೀರಿನ ಸಮಸ್ಯೆ ಎದುರಾಗಿದೆ. ಕಬಿನಿ ಜಲಾಶಯದಿಂದ ಯತೇಚ್ಛವಾಗಿ ನೀರು ತಮಿಳುನಾಡಿಗೆ ಹರಿಯುತ್ತಿದೆ. ವ್ಯರ್ಥವಾಗಿ ಹರಿಯುತ್ತಿರುವ ಭಾರಿ ಪ್ರಮಾಣದ ನೀರು ಬಳಸಿಕೊಂಡು ರೈತರಿಗೆ ಅನುಕೂಲ ಕಲ್ಪಿಸಲು ಮುಂದಾಗಬೇಕಿದೆ. ಈಗಾಗಲೇ ತಾಲ್ಲೂಕಿನ ಹಂಪಾಪುರ ಹೋಬಳಿ ವ್ಯಾಪ್ತಿಯ 14 ಕೆರೆಗಳು ನೀರಿಲ್ಲದೆ ಬತ್ತಿಹೋಗಿದೆ.
‘ಕಬಿನಿ ಜಲಾಶಯದ ನೀರಿನಿಂದ ಹಂಪಾಪುರ ಹೋಬಳಿ ವ್ಯಾಪ್ತಿಯಲ್ಲಿರುವ ಕೆರೆಗಳಿಗೆ ನೀರು ತುಂಬಿಸಲು ಅಧಿಕಾರಿಗಳು ಮುಂದಾಗಿಲ್ಲ. ಈ ಭಾಗದಲ್ಲಿ ಕೆರೆಗಳಲ್ಲಿ ನೀರಿಲ್ಲದೆ ದನ-ಕರುಗಳು, ರೈತರು, ಸಾರ್ವಜನಿಕರು ಪರದಾಡುವಂತಾಗಿದೆ. ಕೆರೆಗಳಿಗೆ ನೀರು ತುಂಬಿಸುವಂತೆ ಮನವಿ ಮಾಡಿದರೂ ಸಬೂಬು ಹೇಳುತ್ತಿದ್ದಾರೆ. ಕೆರೆಗೆ ನೀರು ತುಂಬಿಸುವ ಕಾರ್ಯ ಮಾಡದಿದ್ದರೆ ರೈತರು ಒಗ್ಗೂಡಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುವುದು’ ಎಂದು ಕ್ಯಾತನಹಳ್ಳಿಯ ರೈತ ಶಿವು ಎಚ್ಚರಿಸಿದರು.
‘ಕೆರೆಗಳಿಗೆ ನೀರು ತುಂಬಿಸಲು ಶೀಘ್ರ ಕ್ರಮ’
‘ಹಂಪಾಪುರ ಮತ್ತು ಜಯಪುರ ಹೋಬಳಿಯ ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಕಾರ್ಯ ಪ್ರಾರಂಭಿಸುತ್ತಿದ್ದೇವೆ. ಕೆಲ ಸಮಸ್ಯೆಗಳು ಎದುರಾಗಿದ್ದದ್ದು ನಿವಾರಣೆಗೆ ಕ್ರಮ ಕೈಗೊಳ್ಳಲಾಗಿದೆ. ದುರಸ್ತಿ ಕಾರ್ಯ ನಡೆಯುತ್ತಿದೆ. ಶೀಘ್ರದಲ್ಲೇ ಕಬಿನಿ ಏತ ನೀರಾವರಿ ಮೂಲಕ ನೀರು ತುಂಬಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ನೀರಾವರಿ ಇಲಾಖೆ ಎಇ ಅವಿನಾಶ್ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.