ಮೈಸೂರು: ‘ಜಾಗತಿಕವಾಗಿ ದೈತ್ಯ ಐಟಿ ಸಂಸ್ಥೆಗಳು ಎಂದೇ ಗುರುತಿಸಲ್ಪಡುವ ಐಬಿಎಂ ಹಾಗೂ ಗೂಗಲ್ ಮೈಸೂರು ವಿಶ್ವವಿದ್ಯಾನಿಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ಜೊತೆಗೆ ಒಡಂಬಡಿಕೆಗೆ ಮುಂದಾಗಿವೆ’ ಎಂದು ವಿವಿಯ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ತಿಳಿಸಿದರು.
ಆಹಾರ ವಿಜ್ಞಾನ ಮತ್ತು ಪೌಷ್ಟಿಕಾಂಶ ಅಧ್ಯಯನ ವಿಭಾಗದ ವತಿಯಿಂದ ಗುರುವಾರ ನಗರದ ವಿಜ್ಞಾನ ಭವನದಲ್ಲಿ ನಡೆದ ‘ಆಹಾರ ಸುರಕ್ಷತೆ ಮತ್ತು ಪೋಷಣೆಗಾಗಿ ಸುಸ್ಥಿರ ತಂತ್ರಗಳು’ ವಿಷಯ ಕುರಿತ ಎರಡು ದಿನದ ರಾಷ್ಟ್ರೀಯ ಸಮಾವೇಶಕ್ಕೆ ಚಾಲನೆ ನೀಡಿದ ಅವರು ಮಾತನಾಡಿ, ‘ವಿದ್ಯಾರ್ಥಿಗಳ ಕೌಶಲ ಅಭಿವೃದ್ಧಿಗೆ ಪೂರಕವಾಗುವ ನಿಟ್ಟಿನಲ್ಲಿ ಈ ಎರಡೂ ಸಂಸ್ಥೆಗಳು ಕಾರ್ಯೋನ್ಮುಖವಾಗಲಿವೆ’ ಎಂದು ಹೇಳಿದರು.
‘ವಿವಿಯ 100ನೇ ಘಟಿಕೋತ್ಸವದ ಪ್ರಧಾನ ಭಾಷಣ ಮಾಡಿದ ಪ್ರಧಾನಿ ಮೋದಿ ಸಲಹೆಯಂತೆ, ವಿವಿಯ ಎಲ್ಲಾ ವಿಭಾಗಗಳು ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ವಿಭಾಗಕ್ಕೆ ಸಂಬಂಧಿಸಿದ ಉದ್ಯಮಗಳೊಂದಿಗೆ ಸಂಪರ್ಕ ಸಾಧಿಸುವುದು ಅತ್ಯಗತ್ಯವಾಗಿದೆ’ ಎಂದರು.
‘ರಾಷ್ಟ್ರೀಯ ಶಿಕ್ಷಣ ನೀತಿಯ ಅಭಿವೃದ್ಧಿಗಾಗಿ ವಿವಿಯ ಬೋಧಕ ವರ್ಗ ಹಾಗೂ ವಿದ್ಯಾರ್ಥಿಗಳ ಸಹಕಾರ ಪ್ರಮುಖವಾಗಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳು ದೊರೆಯಲಿವೆ. ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟವು ಹೆಚ್ಚಲಿದೆ’ ಎಂಬ ವಿಶ್ವಾಸವನ್ನು ಕುಲಪತಿ ವ್ಯಕ್ತಪಡಿಸಿದರು.
ಸಮಾವೇಶದ ವೆಬಿನಾರ್‌ನಲ್ಲಿ 400ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ವಿಭಾಗದ ಮುಖ್ಯಸ್ಥೆ ಡಾ.ಅಸ್ನಾ ಊರಜ್, ಮಾನವ ಅಭಿವೃದ್ಧಿ ವಿಭಾಗದ ಪ್ರಾಧ್ಯಾಪಕಿ ಡಾ.ಎಂ.ಕೋಮಲಾ, ಡಾ.ಸಂಧ್ಯಾಸಿಂಗ್ ಮತ್ತಿತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.