ADVERTISEMENT

ಸಂವಿಧಾನ ತಿಳಿದುಕೊಂಡರೆ ಮೋಸ ಹೋಗಲಾರೆವು: ಮಹದೇವಪ್ಪ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2024, 12:30 IST
Last Updated 11 ಮಾರ್ಚ್ 2024, 12:30 IST
   

ಮೈಸೂರು: ‘ಸಂವಿಧಾನವನ್ನು ತಿಳಿದುಕೊಂಡರೆ ನಮಗೆ ಯಾರೂ ಮೋಸ ಮಾಡಲಾಗುವುದಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಹೇಳಿದರು.

ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ ಹಾಗೂ ಜಿಲ್ಲಾಡಳಿತದಿಂದ ಜಿಲ್ಲೆಯ ವಿವಿಧೆಡೆ ಹೊಸದಾಗಿ ನಿರ್ಮಿಸಲಾಗುತ್ತಿರುವ ‘ಇಂದಿರಾ ಕ್ಯಾಂಟೀನ್‌’ಗಳಿಗೆ ಇಲ್ಲಿನ ಸಿದ್ಧಾರ್ಥನಗರದ ಜಿಲ್ಲಾಮಟ್ಟದ ಕಚೇರಿಗಳ ಸಂಕೀರ್ಣದ ಆವರಣದಲ್ಲಿ ಸೋಮವಾರ ಶಂಕುಸ್ಥಾಪನೆ ನೆರವೇರಿಸಿ, ಮುಖ್ಯಮಂತ್ರಿಗಳ ನಗರೋತ್ಥಾನ– 4ರಡಿ ಆಯ್ದ ವೈಯಕ್ತಿಕ ಫಲಾನುಭವಿಗಳಿಗೆ ಸಹಾಯಧನ ವಿತರಿಸಿದ ನಂತರ ಅವರು ಮಾತನಾಡಿದರು.

‘ಎಲ್ಲ ಧರ್ಮಗಳೂ ಸಮಾನವಾದವೇ. ಯಾವುದೂ ಮೇಲೂ ಇಲ್ಲ–ಕೀಳೂ ಇಲ್ಲ. ಇದೆಲ್ಲವನ್ನೂ ಸಂವಿಧಾನ ಸ್ಪಷ್ಟವಾಗಿ ತಿಳಿಸಿದೆ. ಹೀಗಾಗಿಯೇ ನಮ್ಮ ಸರ್ಕಾರದಿಂದ ಜಾಗೃತಿ ಮೂಡಿಸಲಾಗುತ್ತಿದೆ. ಎಲ್ಲರಿಗೂ ಅವರವರ ಬದುಕು, ಕುಟುಂಬದ ಹಿತ ಹಾಗೂ ಆರೋಗ್ಯ ಮುಖ್ಯ. ಅದನ್ನು ಪಡೆದುಕೊಳ್ಳಲು ಸಂವಿಧಾನ ನಮ್ಮೆಲ್ಲರಿಗೂ ಅವಕಾಶ ಕೊಟ್ಟಿದೆ’ ಎಂದು ತಿಳಿಸಿದರು.

ADVERTISEMENT

‘ಇಂದಿರಾ ಕ್ಯಾಂಟೀನ್‌ನಲ್ಲಿ ಮುದ್ದೆ, ಸೊಪ್ಪಿನ ಸಾರು’

‘ಬಡವರು, ಶ್ರಮಿಕರು, ಬೀದಿಬದಿ ವ್ಯಾಪಾರಿಗಳು, ದುಡಿಯುವ ವರ್ಗದವರು, ಪೌರಕಾರ್ಮಿಕರು, ವಲಸೆ ಕಾರ್ಮಿಕರು ಹಾಗೂ ವಿದ್ಯಾರ್ಥಿಗಳು ಹೀಗೆ... ಹಲವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಇಂದಿರಾ ಕ್ಯಾಂಟಿನ್‌ಗಳು ಸಹಕಾರಿಯಾಗಿವೆ. ಈ ಕ್ಯಾಂಟೀನ್‌ಗಳಲ್ಲಿ ಹೊಸದಾಗಿ ಮುದ್ದೆ ಹಾಗೂ ಸೊಪ್ಪಿನ ಸಾರಿನ ಊಟ ಸೇರ್ಪಡೆ ಮಾಡಲು ಕ್ರಮ ವಹಿಸಲಾಗಿದೆ’ ಎಂದು ತಿಳಿಸಿದರು.

‘₹ 5ಕ್ಕೆ ತಿಂಡಿ, ₹ 10ಕ್ಕೆ ಊಟ ಯಾರು ಕೊಡುತ್ತಾರೆ? ಶ್ರಮಿಕ ವರ್ಗದವರು ದೊಡ್ಡ ಹೋಟೆಲ್‌ಗಳಲ್ಲಿ ಊಟ ಮಾಡಲಾಗುತ್ತದೆಯೇ? ಅಂಥವರಿಗೆ ನಮ್ಮ ಸರ್ಕಾರ ನೆರವಾಗುತ್ತಿದೆ. ಜಿಲ್ಲೆಯಲ್ಲಿ 17 ಇಂದಿರಾ ಕ್ಯಾಂಟಿನ್‌ಗಳಿವೆ. ಈ ಪೈಕಿ ನಗರದಲ್ಲೇ 12 ಕಾರ್ಯನಿರ್ವಹಿಸುತ್ತಿವೆ’ ಎಂದು ಮಾಹಿತಿ ನೀಡಿದರು.

‘ನಮ್ಮ ಸರ್ಕಾರದಲ್ಲಿ ಮನೆ ಇಲ್ಲದವರಿಗೆ ನಿರ್ಮಿಸಿಕೊಳ್ಳಲು ಸಹಾಯಧನ ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಲ್ಯಾಪ್‌ಟಾಪ್‌ ಕೂಡ ಕೊಡಲಾಗುತ್ತಿದೆ. ನಮ್ಮ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಂದ ಎಲ್ಲ ವರ್ಗದವರಿಗೂ ಅನುಕೂಲವಾಗಿದ್ದು, ಅವರ ಜೀವನ ಮಟ್ಟ ಸುಧಾರಿಸುತ್ತಿದೆ. ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿದೆ’ ಎಂದರು.

ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್‌ ಸೇಠ್ ಮಾತನಾಡಿ, ‘ನಮ್ಮ ಸರ್ಕಾರ ಇಂದಿರಾ ಕ್ಯಾಂಟೀನ್‌ಗಳಂತಹ ಜನಪರ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ದುಡಿಯುವ ವರ್ಗದವರಿಗೆ ಪೌಷ್ಟಿಕ ಆಹಾರ ದೊರೆಯುವಂತೆ ಮಾಡಿದೆ’ ಎಂದರು.

ಎಲ್ಲೆಲ್ಲಿ ನಿರ್ಮಾಣ?

ಜಿಲ್ಲಾಧಿಕಾರಿ ಡಾ.ಕೆ.ಕೆ.ವಿ. ರಾಜೇಂದ್ರ ಮಾತನಾಡಿ, ‘ಜಿಲ್ಲೆಯಲ್ಲಿ ಹೊಸದಾಗಿ 9 ಇಂದಿರಾ ಕ್ಯಾಂಟೀನ್‌ಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಈ ಪೈಕಿ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ₹ 35 ಲಕ್ಷ ವೆಚ್ಚದಲ್ಲಿ 2 ಕ್ಯಾಂಟೀನ್ ನಿರ್ಮಿಸಲಾಗುವುದು. ಜೊತೆಗೆ ಹೂಟಗಳ್ಳಿ ನಗರಸಭೆ, ಪಿರಿಯಾಪಟ್ಟಣ, ಬನ್ನೂರು ಪುರಸಭೆ, ಸರಗೂರು, ಬೋಗಾದಿ, ಕಡಕೊಳ, ರಮ್ಮನಹಳ್ಳಿ ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನಿರ್ಮಾಣಗೊಳ್ಳಲಿವೆ. ಇದಕ್ಕಾಗಿ ₹65 ಲಕ್ಷ ವೆಚ್ಚವಾಗಲಿದೆ. ಈಗಾಗಲೇ ಇರುವಲ್ಲಿ ದುರಸ್ತಿ ಕೈಗೊಳ್ಳಲು ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.

ವಿಧಾನಪರಿಷತ್ ಶಾಸಕ ಸಿ.ಎನ್. ಮಂಜೇಗೌಡ, ಡಾ.ಡಿ. ತಿಮ್ಮಯ್ಯ, ಮುಡಾ ಅಧ್ಯಕ್ಷ ಕೆ.ಮರೀಗೌಡ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಆಯೂಬ್‌ ಖಾನ್, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು, ಮಹಾನಗರಪಾಲಿಕೆ ಆಯುಕ್ತೆ ಎನ್.ಎಸ್. ಮಧು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.