ADVERTISEMENT

ಸಿಎಂ ಸ್ವಗ್ರಾಮದಲ್ಲಿ ಅಕ್ರಮ ಮದ್ಯದ ಘಾಟು!

ದುಬಾರಿ ಬೆಲೆಗೆ ಮಾರಾಟ: ಸಾರ್ವಜನಿಕ ಸ್ಥಳದಲ್ಲೇ ಸೇವನೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2024, 5:42 IST
Last Updated 27 ಸೆಪ್ಟೆಂಬರ್ 2024, 5:42 IST
<div class="paragraphs"><p>ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಗ್ರಾಮವಾದ ಸಿದ್ದರಾಮನಹುಂಡಿಯಲ್ಲಿ ಕೆಲವು ಮನೆಗಳಲ್ಲಿಯೇ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ.

ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೊಂದಿಕೊಂಡಂತೆ ಇರುವ ಮನೆಯೊಂದರಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆದಿದೆ. ಸಮೀಪದ ಬಾರ್‌ಗಳಲ್ಲಿ ಮದ್ಯ ಖರೀದಿಸಿ ಹೆಚ್ಚಿನ ಬೆಲೆಗೆ ಅಕ್ರಮವಾಗಿ ಮಾರಲಾಗುತ್ತಿದೆ. ರಾತ್ರಿ ಹೊತ್ತು ಮಾರಾಟ ಜೋರಾಗಿದ್ದು, ಅದನ್ನು ಖರೀದಿಸುವವರು ಆಸ್ಪತ್ರೆ ಆವರಣ, ಗ್ರಾಮ ಪಂಚಾಯಿತಿ ಕಚೇರಿಯ ಆವರಣದಲ್ಲೇ ಸೇವನೆ ಮಾಡುತ್ತಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಮದ್ಯದ ಪ್ಯಾಕೆಟ್, ಬಾಟಲಿಗಳು ಬೀಳುತ್ತಿವೆ ಎಂದು ಸ್ಥಳೀಯರು ದೂರುತ್ತಾರೆ.

ADVERTISEMENT

‘ಗ್ರಾಮದಲ್ಲಿ ಮದ್ಯ ಅಕ್ರಮ ಮಾರಾಟದ ಕುರಿತು ಈ ಹಿಂದೆ ಅಬಕಾರಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದೆವು. ಆದರೂ ಕ್ರಮ ಕೈಗೊಂಡಿಲ್ಲ. ಮಧ್ಯರಾತ್ರಿವರೆಗೂ ಮಾರಾಟ ನಡೆದಿದ್ದು, ಸಾರ್ವಜನಿಕ ಸ್ಥಳದಲ್ಲಿಯೇ ಮದ್ಯ ಸೇವಿಸುವುದರಿಂದ ಜನರಿಗೆ ಕಿರಿಕಿರಿ ಹೆಚ್ಚಾಗಿದೆ’ ಎಂಬುದು ಸ್ಥಳೀಯರ ದೂರು.

ಸುತ್ತಲಿನ ಗ್ರಾಮಗಳಲ್ಲೂ ಮಾರಾಟ: ಸಿದ್ದರಾಮನಹುಂಡಿ ಮಾತ್ರವಲ್ಲದೆ ಯಡಕೊಳ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಇತರ ಗ್ರಾಮಗಳಲ್ಲಿಯೂ ಮನೆಗಳಲ್ಲಿ ಮದ್ಯ ಮಾರಾಟ ನಡೆಯುತ್ತಿದೆ. ಸಿದ್ದರಾಮನಹುಂಡಿಗೆ ಹೊಂದಿಕೊಂಡಂತೆ ಇರುವ ಶ್ರೀನಿವಾಸಪುರ, ರಂಗನಾಥಪುರ, ದೇವೇಗೌಡನಹುಂಡಿ, ಕುಪ್ಪೇಗಾಲ, ಹೊಸಳ್ಳಿ ಮೊದಲಾದ ಗ್ರಾಮಗಳ ಮನೆಗಳಲ್ಲಿಯೂ ಮದ್ಯ ಮಾರಾಟ ನಡೆದಿದೆ. ಕೆಲವು ಬಾರ್ ಮಾಲೀಕರು ನೇರವಾಗಿಯೇ ಮನೆಗಳಿಗೆ ಮದ್ಯ ಸರಬರಾಜು ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ಕುರಿತು ಪ್ರತಿಕ್ರಿಯೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ದೂರವಾಣಿ ಸಂಪರ್ಕಕ್ಕೆ ಲಭ್ಯವಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.