ADVERTISEMENT

ಟೀಕೆಗಳಿಗೆ ‘ಪರ್ವ’ ಸಮರ್ಥ ಉತ್ತರ ನೀಡಿದೆ: ಪ್ರಭುಸ್ವಾಮಿ ಮಳಿಮಠ

‘ಚಹಾದ ಜೋಡಿ ಚರ್ಚಾ ಪರ್ವ’; ನಾಟಕ ನೋಡಿ ಟೀಕಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2021, 3:50 IST
Last Updated 25 ಮಾರ್ಚ್ 2021, 3:50 IST
ರಂಗಾಯಣದಲ್ಲಿ ಬುಧವಾರ ನಡೆದ ‘ಚಹಾದ ಜೋಡಿ ಚರ್ಚಾ ಪರ್ವ’ ಸಂವಾದದಲ್ಲಿ ರಂಗಾಸಕ್ತ ಡಾ.ಪುಟ್ಟಪ್ಪ ಮಾತನಾಡಿದರು. ಸಾಹಿತಿ ಎಸ್.ಎಲ್.ಭೈರಪ್ಪ, ಪ್ರಧಾನಗುರುದತ್, ಜಯರಾಮಪಾಟೀಲ, ರಂಗಾಯಣದ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ಇದ್ದಾರೆ
ರಂಗಾಯಣದಲ್ಲಿ ಬುಧವಾರ ನಡೆದ ‘ಚಹಾದ ಜೋಡಿ ಚರ್ಚಾ ಪರ್ವ’ ಸಂವಾದದಲ್ಲಿ ರಂಗಾಸಕ್ತ ಡಾ.ಪುಟ್ಟಪ್ಪ ಮಾತನಾಡಿದರು. ಸಾಹಿತಿ ಎಸ್.ಎಲ್.ಭೈರಪ್ಪ, ಪ್ರಧಾನಗುರುದತ್, ಜಯರಾಮಪಾಟೀಲ, ರಂಗಾಯಣದ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ಇದ್ದಾರೆ   

ಮೈಸೂರು: ವ್ಯಕ್ತವಾಗಿರುವ ಟೀಕೆಗಳಿಗೆ ‘ಪರ್ವ’ ನಾಟಕ ಸಮರ್ಪಕ ಉತ್ತರ ನೀಡಿದೆ ಎಂಬ ಅಭಿಪ್ರಾಯ ಇಲ್ಲಿನ ರಂಗಾಯಣದಲ್ಲಿ ಬುಧವಾರ ನಡೆದ ‘ಚಹಾದ ಜೋಡಿ ಚರ್ಚಾ ಪರ್ವ’ ಸಂವಾದದಲ್ಲಿ ಹೊರಹೊಮ್ಮಿತು.

ಮಾತನಾಡಿದ ಎಲ್ಲ ರಂಗಾಸಕ್ತರೂ ‘ಪರ್ವ’ ನಾಟಕದ ಪ್ರಯತ್ನವನ್ನು ಶ್ಲಾಘಿಸಿದರು. ಇದೊಂದು ಅದ್ಭುತವಾದ ಪ್ರಯೋಗ ಎಂದು ಹೇಳಿದರು. ಜತೆಜತೆಗೆ, ಭೋಜನ ವಿರಾಮದ ನಂತರ ನಾಟಕವು ತುಂಬಾ ಎಳೆಯುತ್ತದೆ. ಕೆಲವು ಪ್ರಸಂಗಗಳನ್ನು ಚುಟುಕುಗೊಳಿಸಿ, ದೀರ್ಘ ಅವಧಿಯನ್ನು ಕಡಿಮೆ ಮಾಡಬಹುದು ಎಂಬ ಸಲಹೆಗಳೂ ವ್ಯಕ್ತವಾದವು.

ಆಕಾಶವಾಣಿಯ ಪ್ರಭುಸ್ವಾಮಿ ಮಳಿಮಠ ಮಾತನಾಡಿ, ‘ನಾಟಕವನ್ನು ನಾಟಕವಾಗಿ, ಒಂದು ಅಭಿರುಚಿಯಾಗಿ ನೋಡಬೇಕು. ರಸಾಸ್ವಾದದ ದೃಷ್ಟಿಯಿಂದ ನೋಡುತ್ತ ನಮ್ಮನ್ನು ನಾವು ವಿಮರ್ಶೆ ಮಾಡಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

ರಂಗಾಸಕ್ತ ಡಾ.ಪುಟ್ಟಪ್ಪ ಮಾತನಾಡಿ, ‘ಟೀಕೆಗಳನ್ನು ಒಂದು ವಿಧದ ವೇಗ ನಿಯಂತ್ರಕಗಳೆಂದು ಭಾವಿಸಿ ಮುಂದಡಿ ಇಡಬೇಕು’ ಎಂದು ತಿಳಿಸಿದರು.

ಜಯರಾಮಪಾಟೀಲ ಮಾತನಾಡಿ, ‘2ರಿಂದ 3 ವಿರಾಮದಲ್ಲಿ ಹೊರಡಬಹುದು ಎಂದುಕೊಂಡು ಬಂದೆ. ಆದರೆ, ನಾಟಕ ಮುಗಿಯುವವರೆಗೂ ನನ್ನನ್ನು ಮಾತ್ರವಲ್ಲ ಎಲ್ಲರನ್ನೂ ಹಿಡಿದು ಕೂರಿಸಿತು. ಟೀಕೆಗಳಿಗೆ ನಾಟಕ ಸಮರ್ಥ ಉತ್ತರ ನೀಡಿದೆ’ ಎಂದು ಹೇಳಿದರು.

ರಂಗಾಸಕ್ತ ಹರೀಶ್‌ ಅವರು ಭೈರಪ್ಪ ಅವರ ‘ಗೃಹಭಂಗ’ ಕಾದಂಬರಿಯನ್ನೂ ನಾಟಕ ಮಾಡಬೇಕು. ‘ಪರ್ವ’ ನಾಟಕವನ್ನು ಶಿಕ್ಷಕ ವೃಂದಕ್ಕೆ ತೋರಿಸಬೇಕು ಎಂದು ಸಲಹೆ ನೀಡಿದರು.

ರಂಗಾಯಣದ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ಮಾತನಾಡಿ, ‘ಹಿಂದೆಯೂ ರಂಗಾಯಣದ ನಾಟಕಗಳಿಗೆ ₹ 90 ಲಕ್ಷ ನೀಡಿದ ಉದಾಹರಣೆ ಇರುವಾಗ, ‘ಪರ್ವ’ಗೆ ₹ 1 ಕೋಟಿ ಕೊಟ್ಟಿರುವುದಕ್ಕೆ ಟೀಕೆ ಏಕೆ’ ಎಂದು ಪ್ರಶ್ನಿಸಿದರು.

ನಾಟಕವನ್ನು ಕನಿಷ್ಠ 40 ನಿಮಿಷಗಳಷ್ಟು ಕಾಲ ‘ಎಡಿಟ್’ ಮಾಡಲು ಪ್ರಯತ್ನಿಸಲಾಗಿದೆ ಎಂದು ಹೇಳಿದರು.

ನಾಟಕ ಚೆನ್ನಾಗಿ ಮೂಡಿ ಬಂದಿದೆ– ಎಸ್.ಎಲ್‌.ಭೈರಪ್ಪ
ಮೈಸೂರು:
‘ವಿಸ್ತಾರ ಇಲ್ಲದೇ ಹೋದರೆ ಆಳವೂ ಇರುವುದಿಲ್ಲ. ವಿಸ್ತಾರ ಮತ್ತು ಆಳ ಪರಸ್ಪರ ಪೂರಕ. ಎಲ್ಲವೂ ಸಂಕ್ಷಿಪ್ತವಾಗಿರಬೇಕು ಎನ್ನುವ ಪರಿಕಲ್ಪನೆ ಬಹಳ ದಿನ ಬದುಕುವುದಿಲ್ಲ’ ಎಂದು ಸಾಹಿತಿ ಎಸ್.ಎಲ್‌.ಭೈರಪ್ಪ ತಿಳಿಸಿದರು.

‘ಪರ್ವ’ ನಾಟಕ ವಿಸ್ತಾರವಾಯಿತು. ಅದು ಸಮಯ, ಹಣ, ಶಕ್ತಿ ಅಪವ್ಯಯಕ್ಕೆ ಕಾರಣ ಎಂಬ ಟೀಕೆಗಳು ಬರುತ್ತಿವೆ. ಇದೇ ಬಗೆಯ ಟೀಕೆಗಳು ಕನ್ನಡದ ನವ್ಯ ಸಾಹಿತ್ಯ ಕಾಲಘಟ್ಟದಲ್ಲೂ ಬಂದಿತ್ತು. ನವೋದಯ ಸಾಹಿತ್ಯವನ್ನು ಕೆಲವು ನವ್ಯ ಸಾಹಿತಿಗಳು ‘ಆನೆ ಲದ್ದಿ’ ಎಂದೇ ಟೀಕಿಸಿದರು. ಈ ನಾಟಕ ಕುರಿತು ಮಾಡುವ ಟೀಕಾಕಾರರೂ ನವ್ಯ ಕಾಲಘಟ್ಟಕ್ಕೆ ಸೇರಿದವರೆಂದು ತಿಳಿದು, ಹೆಚ್ಚಿನ ಮಹತ್ವ ನೀಡಬೇಕಿಲ್ಲ ಎಂದರು.

ಹಿಂದೆ ಕಂಪನಿ ನಾಟಕವನ್ನು ದಿನವಿಡೀ ಜನ ನೋಡುತ್ತಿದ್ದರು. ಈಗಲೂ ಹಳ್ಳಿಗಳಲ್ಲಿ ಪೌರಾಣಿಕ ನಾಟಕವನ್ನು ರಾತ್ರಿಯಿಂದ ಮುಂಜಾನೆಯವರೆಗೆ ನೋಡುತ್ತಾರೆ ಎಂದು ಹೇಳಿದರು.

‘ನಾಟಕ ನೋಡಿದ ಮೇಲೆ ಪರ್ವ ಕಾದಂಬರಿಯನ್ನು ಮತ್ತೊಮ್ಮೆ ಓದಬೇಕು ಎಂದೆನಿಸಿದೆ. ಮತ್ತೊಂದು ಬಾರಿ ನಾಟಕ ನೋಡಿ, ಓದುತ್ತೇನೆ’ ಎಂದು ನುಡಿದರು.

‘ಪರ್ವ ಕಾದಂಬರಿ ಬರೆಯುವುದಕ್ಕೂ ಮುಂಚೆ ಸಾಕಷ್ಟು ಸಂಶೋಧನೆಗಳನ್ನು ಕೈಗೊಂಡೆ. ಹಲವು ಮಹಾಭಾರತಗಳನ್ನು, ಪಿ.ವಿ.ಕಾಣೆ ಅವರ ‘ಹಿಸ್ಟರಿ ಆಫ್ ಧರ್ಮಶಾಸ್ತ್ರ’ ಗ್ರಂಥದ 7 ಸಂಪುಟಗಳನ್ನೂ ಅಧ್ಯಯನ ಮಾಡಿದ್ದೆ’ ಎಂದು ವಿವರಿಸಿದರು.

‘ವಿಶ್ವವಿದ್ಯಾನಿಲಯಗಳಲ್ಲಿ ವಿಭಾಗಗಳಿಗೆ ಮುಖ್ಯಸ್ಥರು ಮಾತ್ರವೇ ಇದ್ದು, ಉಳಿದವರೆಲ್ಲರೂ ಅತಿಥಿ ಉಪನ್ಯಾಸಕರು ಇರುವಂತೆ ಕಲಾವಿದರ ಸಂಖ್ಯೆಯಲ್ಲೂ ಇತಿಮಿತಿಗಳು ಇರುತ್ತವೆ. ಹಾಗಾಗಿ, ಒಬ್ಬರೇ ಎರಡೆರಡು ಪಾತ್ರವನ್ನು ಮಾಡಬೇಕಾಗಿದೆ. ಈ ಮಿತಿಗಳ ನಡುವೆಯೂ ನಾಟಕ ಚೆನ್ನಾಗಿ ಮೂಡಿ ಬಂದಿದೆ’ ಎಂದು ಶ್ಲಾಘಿಸಿದರು.

ಟೀಕಿಸಿದ್ದ ಸತ್ಯು: ಈಚೆಗೆ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿನಿಮಾ ನಿರ್ದೇಶಕ ಎಂ.ಎಸ್‌.ಸತ್ಯು ಮಾತನಾಡಿ, ‘ಪರ್ವ ನಾಟಕ ದೀರ್ಘವಾಗಿ ಬೇಕಿರಲಿಲ್ಲ. ನಾವು ಏನನ್ನು ಹೇಳಬೇಕು ಎಂಬುದನ್ನು ಸೂಕ್ಷ್ಮವಾಗಿ, ಒಂದು ಸೀಮಿತ ಚೌಕಟ್ಟಿನಲ್ಲಿ ಹೇಳಬೇಕಿತ್ತು’ ಎಂದು ಟೀಕಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.