ಮೈಸೂರು: ‘ದೇಶದ ಭೂ ಸ್ವರೂಪ ಹಾಗೂ ಪ್ರಾಕೃತಿಕ ಇತಿಹಾಸವು ಜ್ಞಾನದ ಗಣಿಯಾಗಿದ್ದು, ಹಿಮಾಲಯ, ಪರ್ಯಾಯ ಪ್ರಸ್ಥಭೂಮಿ, ಕರಾವಳಿಯು ಜೀವವೈವಿಧ್ಯದ ವಿಸ್ಮಯವಾಗಿದೆ’ ಎಂದು ಲೇಖಕ ಸ್ಟೀಫನ್ ಆಲ್ಟರ್ ಹೇಳಿದರು.
‘ಫಾರ್ ದ ಫಾರೆಸ್ಟ್’ ಗೋಷ್ಠಿಯಲ್ಲಿ ಮಾತನಾಡಿ, ‘ಜೀವವೈವಿಧ್ಯ ಅರಿಯಲು ವೈಜ್ಞಾನಿಕ ನಿರೂಪಣೆಯ ಜೊತೆಗೆ ಇಲ್ಲಿನ ಜಾನಪದ ಕಥನ, ಚಿತ್ರಕಲೆಗಳನ್ನು ನೋಡಬೇಕು. ಮಧ್ಯಪ್ರದೇಶದ ಭೀಮಬೆಡ್ಕ ಗುಹೆಯಲ್ಲಿ ಸಾವಿರಾರು ವರ್ಷಗಳ ಹಿಂದೆ ಚಿತ್ರಿಸಿದ ಚಿತ್ರಗಳು ದೇಶದ ವನ್ಯಪ್ರಾಣಿಗಳ ಸಮೃದ್ಧಿಯನ್ನು ಹೇಳುತ್ತದೆ. ಅಲ್ಲಿ ಬರೆಯಲಾದ ಕಾಡೆಮ್ಮೆ, ಈಗ ಆ ಪ್ರದೇಶದಿಂದಲೇ ಅಳಿದಿದೆ’ ಎಂದರು.
‘ಬೇಟೆಗಾರರೂ ಪ್ರಾಕೃತಿಕ ಇತಿಹಾಸ ತಿಳಿಯಲು ಕೊಡುಗೆ ನೀಡಿದ್ದಾರೆ. ಚಿತ್ರಕಲೆಯ ಜೊತೆಗೆ ಅವರಿಗಿದ್ದ ವನ್ಯಜೀವಿಗಳ ಕುರಿತ ಜ್ಞಾನ ಕುತೂಹಲಕಾರಿಯಾಗಿದೆ. ಪ್ರಾಣಿಗಳ ಸ್ವಭಾವ, ಗಾಳಿಯ ಭಾಷೆ, ವನ್ಯಜೀವಿಗಳು ತಮ್ಮ ಅಸ್ತಿತ್ವಕ್ಕಾಗಿ ಹೊರಡಿಸುವ ಧ್ವನಿಗಳು ಇವೆಲ್ಲದರ ಅರಿವು ಇರುತ್ತದೆ’ ಎಂದು ಹೇಳಿದರು.
‘ಮಾನವ– ವನ್ಯಜೀವಿ ಸಂಘರ್ಷವೂ ದಶಕಗಳಿಂದ ಹೆಚ್ಚಾಗುತ್ತಿದೆ. ಅದನ್ನು ತಪ್ಪಿಸಲು ಕಾರಿಡಾರ್‌ಗಳ ರಕ್ಷಣೆ ಆಗಬೇಕು’ ಎಂದರು.
‘ಕಾವೇರಿ ನದಿಯಲ್ಲಿ ಕಾಣಸಿಗುವ ಮಹಶೀರ್ ಮೀನು ಅಳಿವಿನಂಚಿಗೆ ತಲುಪಿದೆ. ಮೀನುಗಾರಿಕೆ ಅಕ್ರಮವಾಗಿ ನಡೆಯುತ್ತಿದ್ದು, ನಾಡಬಾಂಬ್ ಸ್ಪೋಟಿಸಿ, ಸೆರೆ ಹಿಡಿಯಲಾಗುತ್ತಿದೆ. ಅವುಗಳ ರಕ್ಷಣೆ ಅಗತ್ಯವಾಗಿದೆ’ ಎಂದು ‘ವೈಲ್ಡ್‌ಲೈಫ್ ಅಸೋಸಿಯೇಷನ್ ಆಫ್ ಸೌತ್ ಇಂಡಿಯಾ’ದ ಸುಶೀಲ್ ಗ್ಯಾನ್‌ಚಂದ್ ಹೇಳಿದರು.
‘40ರ ದಶಕದಲ್ಲಿ ನಗರದಲ್ಲಿ ನೆಲೆಸಿದ್ದ ಆಸ್ಟ್ರೇಲಿಯಾದ ಮೂಲದ ‘ಟ್ಯಾಕ್ಸಿಡೆರ್ಮಿ’ ತಜ್ಞ ವ್ಯಾನ್ ಈಗನ್, ಸಂಗ್ರಹಿಸಿದ್ದ ‘ಮಹಶೀರ್’ ಅಸ್ತಿಪಂಜರವಿದೆ. ದೇಶದಲ್ಲಿನ 5 ಜಾತಿಯ ಮಹಶೀರ್ ಮೀನುಗಳಲ್ಲಿ ಹಂಪ್‌ಬ್ಯಾಕ್ ಮಹಶೀರ್ ಮೀನು ಕಾವೇರಿ ಹಾಗೂ ಉಪನದಿಗಳಲ್ಲಿ ಮಾತ್ರ ಕಾಣಸಿಗುತ್ತದೆ. ನದಿಯ ಆರೋಗ್ಯ ಕಾಪಾಡುವುದರೊಂದಿಗೆ ಹಾಗೂ ಬೇಟೆಯನ್ನು ತಪ್ಪಿಸಬೇಕಿದೆ’ ಎಂದು ಹೇಳಿದ ಅವರು, ‘ಶಾರ್ಪ್ ಶೂಟರ್’ ಆಗಿ, ನರಭಕ್ಷಕ ಹುಲಿಯನ್ನು ಕೊಂದ ಘಟನೆಯನ್ನೂ ವಿವರಿಸಿದರು.
‘ಬಂಡೀಪುರದ ಹೆಡಿಯಾಲ ಅರಣ್ಯ ವಲಯದಲ್ಲಿ ಹುಲಿಯೊಂದು ಹಲವು ಜನರನ್ನು ಕೊಂದಿತ್ತು. ವಯಸ್ಸಾದ ಕಾರಣ ಅದನ್ನು ಕೊಲ್ಲಲೇಬೇಕಾಗಿತ್ತು’ ಎಂದರು.
ಪ್ರಿಯಾ ದವೀದರ್ ಸಂವಾದ ನಡೆಸಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.