ADVERTISEMENT

ಭಾರತದ್ದು ಮಾನವೀಯ ನೆಲೆಯ ನೋಟ: ತಮಿಳುನಾಡು ರಾಜ್ಯಪಾಲ

ಹಿಂಸೆಯನ್ನು ರಾಜಕೀಯ ಸಂಪನ್ಮೂಲ‌ವನ್ನಾಗಿ ಮಾಡಿಕೊಂಡಿಲ್ಲ: ರಾಜ್ಯಪಾಲ ರವಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 15:16 IST
Last Updated 4 ಫೆಬ್ರುವರಿ 2023, 15:16 IST
ಜೆ.ಎಸ್.ಎಸ್ ಮಹಾವಿದ್ಯಾಪೀಠದಿಂದ ಆಯೋಜಿಸಿದ್ದ ಸುವರ್ಣ ಮಹೋತ್ಸವದ ದತ್ತಿ ಉಪನ್ಯಾಸ-12 ಕಾರ್ಯಕ್ರಮದಲ್ಲಿ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಹಾಗೂ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಭಾಗವಹಿಸಿದ್ದರು/ ಪ್ರಜಾವಾಣಿ ಚಿತ್ರ
ಜೆ.ಎಸ್.ಎಸ್ ಮಹಾವಿದ್ಯಾಪೀಠದಿಂದ ಆಯೋಜಿಸಿದ್ದ ಸುವರ್ಣ ಮಹೋತ್ಸವದ ದತ್ತಿ ಉಪನ್ಯಾಸ-12 ಕಾರ್ಯಕ್ರಮದಲ್ಲಿ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಹಾಗೂ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಭಾಗವಹಿಸಿದ್ದರು/ ಪ್ರಜಾವಾಣಿ ಚಿತ್ರ   

ಮೈಸೂರು: ‘ಭಾರತವು ಹಿಂಸೆಯನ್ನು ರಾಜಕೀಯ ಸಂಪನ್ಮೂಲ‌ ಮಾಡಿಕೊಂಡಿಲ್ಲ. ಎಲ್ಲರನ್ನೂ ಮಾನವೀಯ ನೆಲೆಯಲ್ಲಿ ನೋಡುತ್ತಿದೆ’ ಎಂದು ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಹೇಳಿದರು.

ಜೆಎಸ್‌ಎಸ್ ಆಸ್ಪತ್ರೆಯ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠದಿಂದ ಶನಿವಾರ ಆಯೋಜಿಸಿದ್ದ ಸುವರ್ಣ ಮಹೋತ್ಸವದ 12ನೇ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಜಿ-20ನಾಯಕತ್ವ: ಭಾರತದ ಅವಕಾಶಗಳು’ ವಿಷಯ ಕುರಿತು ಅವರು ಮಾತನಾಡಿದರು.

‘ಇಂದು ಇಡೀ ಜಗತ್ತು ಭಾರತದ ಕಡೆಗೆ ನೋಡುತ್ತಿದೆ. ಇದರಿಂದ ನೆಮ್ಮದಿ ಸಿಗುತ್ತದೆ ಎಂಬ ನಂಬಿಕೆ ಎಲ್ಲರಿಗೆ ಬಂದಿದೆ. ಭಾರತ ಬೆಳೆದರೆ ಇಡೀ ಜಗತ್ತು ಸ್ವಾಗತಿಸುತ್ತದೆ. ಏಕೆಂದರೆ, ನಮಗೆ ದುರುದ್ದೇಶವಿಲ್ಲ. ಎಲ್ಲರೂ ಸಂತೋಷದಿಂದ ಇರಲೆಂದು ಬಯಸುವ ದೇಶ ನಮ್ಮದು. ಇಡೀ ಜಗತ್ತೇ ಕುಟುಂಬವೆಂದು ಭಾವಿಸಿದ ಸಂಸ್ಕೃತಿ ನಮ್ಮದು. ಆದರೆ, ಚೀನಾ ಬೆಳೆದರೆ ಆ ಪರಿಸ್ಥಿತಿ ಇಲ್ಲ’ ಎಂದರು.

ADVERTISEMENT

120ಕ್ಕೂ ಹೆಚ್ಚು ದೇಶಗಳಿಗೆ:

‘ಕೋವಿಡ್ ಪರಿಸ್ಥಿತಿಯಲ್ಲಿ ಇಡೀ ಜಗತ್ತು ತಲ್ಲಣಗೊಂಡಿತ್ತು. ಎಲ್ಲರೂ ಆತಂಕಕ್ಕೆ ‌ಒಳಗಾಗಿದ್ದರು. ಏನು ಮಾಡಬೇಕು ಎನ್ನುವುದು ಗೊತ್ತಿರಲಿಲ್ಲ. ಕೆಲವು ದೇಶಗಳು ‌ಲಸಿಕೆಯನ್ನು ಹಣ ಮಾಡುವ ಕೆಲಸವಾಗಿ ಮಾಡಿಕೊಂಡಿದ್ದವು. ಆದರೆ, ನಾವು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಲಸಿಕೆಯನ್ನು 120ಕ್ಕೂ ಹೆಚ್ಚು ದೇಶಗಳಿಗೆ ಉಚಿತವಾಗಿ ನೀಡಿದೆವು. ಅಂತರರಾಷ್ಟ್ರೀಯ ವ್ಯವಹಾರಗಳಲ್ಲಿ ಧ್ವನಿ ಇಲ್ಲದವರಿಗೆ ಭಾರತ ಧ್ವನಿಯಾಗುತ್ತದೆ ಎಂಬ ನಂಬಿಕೆ ಬಂದಿದೆ’ ಎಂದು ಹೇಳಿದರು.

‘ಜಾಗತಿಕ ತಾಪಮಾನ ಏರಿಕೆಯಿಂದ ಭೂಮಿಯು ಕಾದಿದೆ. ನದಿಗಳು ಒಣಗುತ್ತಿವೆ.‌ ಅತಿಯಾದ ರಸಗೊಬ್ಬರ ಬಳಕೆಯಿಂದ ಭೂಮಿಯ ಫಲವತ್ತತೆ ಹಾಳಾಗುತ್ತಿದೆ. ಇದೆಲ್ಲದರಿಂದ ಹೊರಬರುವುದು ಹೇಗೆ? ಇದಕ್ಕಾಗಿಯೂ ಇಡೀ ವಿಶ್ವ ಭಾರತದತ್ತಲೇ ನೋಡುತ್ತಿದೆ. ನಾವು ಭೂಮಿಯನ್ನು ಸಂಪನ್ಮೂಲವಾಗಿ ಮಾತ್ರವೇ ನೋಡುತ್ತಿಲ್ಲ. ‍ಪೂಜಿಸುತ್ತೇವೆ. ಪರಿಹಾರವಾಗಿ, ಹಸಿರು ಇಂಧನದ ಕಡೆಗೆ ವೇಗವಾಗಿ ಸಾಗುತ್ತಿದ್ದೇವೆ. ಸಾವಯವ ಕೃಷಿಯತ್ತ ಹೋಗುತ್ತಿದ್ದೇವೆ. ಭಾರತವು ಪರಿಹಾರದ ದಾರಿ ‌ತೋರುತ್ತಿದೆ’ ಎಂದರು.

‘ಸಮಸ್ಯೆ ಪರಿಹಾರಕ್ಕೆ ‌ಯುದ್ಧವೇ ಪರಿಹಾರವಲ್ಲ ಎನ್ನುವುದು ದೇಶದ ನಂಬಿಕೆ. ‌ಯುದ್ಧಗಳಿಗೆ‌ ಕೊನೆ ಹಾಡಬೇಕು ಎನ್ನುವುದು ಆಶಯ’ ಎಂದು ತಿಳಿಸಿದರು.

ಜಿ–20 ನಾಯಕತ್ವದಿಂದ:

‘ಭಾರತವು ಜಿ–20 ಅಧ್ಯಕ್ಷತೆ ವಹಿಸಿರುವುದು ಬಹಳ ಮಹತ್ವದ್ದಾಗಿದೆ. ವಿವಿಧ ದೇಶಗಳ ನಿಯೋಗವು ದೇಶದ ವಿವಿಧೆಡೆ ಚಟುವಟಿಕೆಗಳನ್ನು ನಡೆಸುವ ಮೂಲಕ ಇತರರು ಭಾರತವನ್ನು ನೋಡುವಂತಾಗಲಿದೆ. ಇದರಿಂದ ಪ್ರವಾಸೋದ್ಯಮ ಅಭಿವೃದ್ಧಿಗೂ ಸಹಕಾರಿಯಾಗಲಿದೆ. ಇಲ್ಲೇನು ಅವಕಾಶಗಳಿವೆ ಎನ್ನುವುದನ್ನು ಅರಿತು ಅವರು ಹೂಡಿಕೆಗೂ ಮುಂದಾಗಬಹುದು. ಇದು ಪ್ರಧಾನಿ ನರೇಂದ್ರ ಮೋದಿ ಅವರ ಪರಿಕಲ್ಪನೆಯಾಗಿದೆ’ ಎಂದರು.

‘ಜಿ–20 ಕುರಿತು ಕಾಲೇಜುಗಳಲ್ಲೂ ಜಾಗೃತಿ ಕಾರ್ಯಕ್ರಮ ಆಯೋಜನೆಯಾಗಬೇಕು. ಯುವಜನರಿಗೆ ಮಾಹಿತಿ ಕೊಡಬೇಕು’ ಎಂದು ಸಲಹೆ ನೀಡಿದರು.

‘ಸ್ವಾತಂತ್ರ್ಯ ನಂತರ ಎಲ್ಲ ಕ್ಷೇತ್ರಗಳಲ್ಲೂ ದೇಶ ಸಂಕಷ್ಟದಲ್ಲಿತ್ತು. ಅಂತಹ ಸಂದರ್ಭದಲ್ಲಿ ರಾಜೇಂದ್ರ ಶ್ರೀ ಸ್ಥಾಪಿಸಿದ ಜೆಎಸ್‌ಎಸ್ ಮಹಾವಿದ್ಯಾಪೀಠ ಇಲ್ಲಿನ ಜನರಿಗೆ ಬಹು ದೊಡ್ಡ ವರದಾನವಾಗಿ ಪರಿಣಮಿಸಿತು. ವಿಶ್ವದಾದ್ಯಂತ 350ಕ್ಕೂ ಹೆಚ್ಚು ಸಂಸ್ಥೆಗಳನ್ನು ಹೊಂದಿ ಸಮಾಜಕ್ಕೆ ಉತ್ತಮ ಕೊಡುಗೆಯನ್ನು ಕೊಡುತ್ತಿದೆ’ ಎಂದು ಶ್ಲಾಘಿಸಿದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.