ADVERTISEMENT

ಮೂಲ‌ಸೌಕರ್ಯ ವಂಚಿತ ತಲಕಾಡಿನ ಮೇದರ ಕೇರಿ

ಎರಡನೇ ಬ್ಲಾಕ್‌ನಲ್ಲಿರುವ ಬಡಾವಣೆ; ಸಂಕಷ್ಟದ ಜೀವನ ನಡೆಸುತ್ತಿರುವ ಜನ

​ಪ್ರಜಾವಾಣಿ ವಾರ್ತೆ
Published 22 ಜನವರಿ 2022, 4:11 IST
Last Updated 22 ಜನವರಿ 2022, 4:11 IST
ತಲಕಾಡಿನ ಮೇದರ ಕೇರಿ ರಸ್ತೆ ಮಳೆ ಬಂದಾಗ ಕೆಸರು ಗದ್ದೆಯಂತಾಗುತ್ತದೆ (ಎಡಚಿತ್ರ). ಮೇದರ ಕೇರಿಯಲ್ಲಿ ಬುಟ್ಟಿ ಹೆಣೆಯುವುದರಲ್ಲಿ ತೊಡಗಿದ್ದ ಮಹಿಳೆ
ತಲಕಾಡಿನ ಮೇದರ ಕೇರಿ ರಸ್ತೆ ಮಳೆ ಬಂದಾಗ ಕೆಸರು ಗದ್ದೆಯಂತಾಗುತ್ತದೆ (ಎಡಚಿತ್ರ). ಮೇದರ ಕೇರಿಯಲ್ಲಿ ಬುಟ್ಟಿ ಹೆಣೆಯುವುದರಲ್ಲಿ ತೊಡಗಿದ್ದ ಮಹಿಳೆ   

ತಲಕಾಡು: ಪಟ್ಟಣದ ಎರಡನೇ ಬ್ಲಾಕ್‌ನಲ್ಲಿರುವ ಮೇದರ ಕೇರಿಯಲ್ಲಿ ಮೂಲ ಸೌಲಭ್ಯಗಳಿಲ್ಲದೆ ಜನರು ಸಂಕಷ್ಟ ಎದುರಿಸುತ್ತಿದ್ದಾರೆ.

ಬಡಾವಣೆಯಲ್ಲಿ ಹಿಂದುಳಿದ ಸಮುದಾಯದ ಜನರೇ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಇಲ್ಲಿ ರಸ್ತೆ, ಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ.

ತಲಕಾಡಿನ ಮುಖ್ಯ ವೃತ್ತದಿಂದ ನೂರು ಅಡಿ ದೂರದಲ್ಲಿರುವ ಮೇದರ ಕೇರಿಯಲ್ಲಿ ಮೇದ ಸಮುದಾಯದ 11 ಹಾಗೂ ನಾಯಕ ಸಮುದಾಯದ ಮೂರು ಕುಟುಂಬಗಳು ವಾಸಿಸುತ್ತಿವೆ. ಸಮುದಾಯದ ಮೂಲ‌ ಕಸಬು ಬಿದಿರು ಹೆಣೆಯುವ ವೃತ್ತಿ. ಇಲ್ಲಿನ ಜನರು ಮಂಕರಿ, ಬಿದರಿನ ಬುಟ್ಟಿ, ಮೊರ ಮತ್ತಿತರ ವಸ್ತುಗಳನ್ನು ತಯಾರಿಸಿ, ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ.

ADVERTISEMENT

ಕೇರಿಗೆ ಬಿದಿರು ತರಲು ಹಾಗೂ ವಾಹನಗಳ ಸಂಚಾರಕ್ಕೆ ಇಲ್ಲಿ ರಸ್ತೆ ಇಲ್ಲ. ಖಾಸಗಿ ವ್ಯಕ್ತಿಗಳ ಜಮೀನಿನಲ್ಲಿ ಸಂಚರಿಸುವಂತಾಗಿದೆ. ಕೆಲವರು ತಮ್ಮ ನಿವೇಶನಗಳಿಗೆ ಬೇಲಿ ಹಾಕುತ್ತಿರುವುದರಿಂದ ಇವರು ಓಡಾಡಲು ಜಾಗವಿಲ್ಲ.

ಮೇದರ ಕುಲದೇವತೆ ಲಕ್ಷ್ಮಿ ದೇವಿಯ ದೇವಸ್ಥಾನವಿದೆ. ಪೂಜಾ ಮಹೋತ್ಸವ, ಹಬ್ಬದ ಆಚರಣೆ ಮಾಡಬೇಕಾದರೆ ಖಾಸಗಿ ಜಮೀನು ಬಳಸಬೇಕಿದೆ.

‘ಮೇದರ ಕೇರಿಯಲ್ಲಿವ ಸಮಸ್ಯೆಗಳ ಬಗ್ಗೆಗ್ರಾಮ ಪಂಚಾಯಿತಿಗೆ ಅನೇಕ ಬಾರಿ ದೂರು ನೀಡಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ತೋರಿಕೆ ಉತ್ತರ ನೀಡುತ್ತಾರೆ’ ಎಂದು ಮೇದರ ಕೇರಿಯ ನಿವಾಸಿ ರಮೇಶ್ ದೂರಿದರು.

ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಮ್ಮ ಬಡಾವಣೆಗೆ ಮೂಲಸೌಕರ್ಯ ಕಲ್ಪಿಸಲು ಸಾಧ್ಯವಾಗಿಲ್ಲ. ಬಡಾವಣೆಗೆ ಕೂಡಲೇ ರಸ್ತೆ ಸಂಪರ್ಕ ಕಲ್ಪಿಸಬೇಕು. ಚರಂಡಿ ವ್ಯವಸ್ಥೆ ಮಾಡಬೇಕು. ಸಮರ್ಪಕವಾಗಿ ಕುಡಿಯುವ ನೀರನ್ನು ಪೂರೈಸಬೇಕು ಎಂದು ಆಗ್ರಹಿಸಿದರು.

***

ಮೇದರ ಕೇರಿಯಲ್ಲಿ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲದಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಗ್ರಾಮ ಸಭೆಯಲ್ಲಿ ಚರ್ಚಿಸಿದ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು.

–ಜಿ.ಕೆಂಪಯ್ಯ, ತಲಕಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.