ADVERTISEMENT

ಮೈಸೂರು: ಟಿಬೆಟ್‌ಗೆ ಮರಳಲು ಅವಕಾಶ ನೀಡುವಂತೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2020, 10:09 IST
Last Updated 10 ಮಾರ್ಚ್ 2020, 10:09 IST

ಮೈಸೂರು: ಟಿಬೆಟ್‌ಗೆ ಮತ್ತೆ ವಾಪಸ್ ಹೋಗಿ ಅಲ್ಲಿ ನೆಲೆಸಲು ಅವಕಾಶ ಮಾಡಿಕೊಡಬೇಕು ಎಂದು ವಿವಿಧ ಟಿಬೆಟಿಯನ್ ಸಂಘಟನೆಗಳ ಮುಖಂಡರು ಇಲ್ಲಿ ಮಂಗಳವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಚೀನಾದೊಂದಿಗೆ ಮಾತುಕತೆ ನಡೆಸುವಾಗ ಹಾಗೂ ಜಾಗತಿಕ ವೇದಿಕೆಗಳಲ್ಲಿ ಟಿಬೆಟ್ ಮೇಲೆ ಚೀನಾದ ಅತಿಕ್ರಮಣ ವಿಷಯವನ್ನು ಪ್ರಸ್ತಾಪಿಸುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗಿದೆ ಎಂದು ಬೈಲುಕಪ್ಪೆಯ ಟಿಬೆಟಿಯನ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಸೇರಿಂಗ್ ಲಖ್ಯಪ್‌ಜನೇಯಲ್ ತಿಳಿಸಿದರು.

ಈ ಕುರಿತು ಮಾತನಾಡಿದ ಇಂಡೊ– ಟಿಬೆಟಿಯನ್ ಫ್ರೆಂಡ್‌ಷಿಪ್ ಸೊಸೈಟಿ ಅಧ್ಯಕ್ಷ ಬಿ.ವಿ.ಜವರೇಗೌಡ, ‘1959ರ ಮಾರ್ಚ್ 10ರಂದು ಟಿಬೆಟ್ ಮೇಲೆ ಚೀನಾ ಆಕ್ರಮಣ ಮಾಡಿದಾಗ 166 ಮಂದಿ ಟಿಬೆಟಿಯನ್ನರು ವೀರ ಮರಣವನ್ನಪ್ಪಿದರು. ಇವರ ನೆನಪಿಗೆ ಈ ದಿನವನ್ನು ರಾಷ್ಟ್ರೀಯ ಬಂಡಾಯ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು

ADVERTISEMENT

ಟಿಬೆಟಿಯನ್ನರ ಸ್ಥಿತಿಗತಿಯ ಬಗ್ಗೆ ಚರ್ಚಿಸಲು ದಲಾಯಿಲಾಮಾ ಅವರ ಮಧ್ಯಸ್ಥಿಕೆಯನ್ನು ಒಪ್ಪಬೇಕು, ಪಂಚೆನ್ ಲಾಮಾ ಮತ್ತು ಇನ್ನಿತರ ರಾಜಕೀಯ ಕೈದಿಗಳನ್ನು ಬಿಡಗಡೆ ಮಾಡಬೇಕು, ರಾಜಕೀಯ ಮತ್ತು ವಾಕ್‌ ಸ್ವಾತಂತ್ರ್ಯ ನೀಡಬೇಕು, ಟಿಬೆಟಿಯನ್ ಪರಿಸರ ಉಳಿಸಬೇಕು ಎಂದು ಒತ್ತಾಯಿಸಿದರು.

ಬೈಲುಕುಪ್ಪೆಯಲ್ಲಿ 20 ಸಾವಿರ, ಕೊಳ್ಳೇಗಾಲದ ಬಳಿ 7 ಸಾವಿರ ಹಾಗೂ ಧಾರವಾಡದ ಸಮೀಪ 15 ಸಾವಿರ ಮಂದಿ ಟಿಬೆಟಿಯನ್ನರು ಆಶ್ರಯ ಪಡೆದಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಕೊಳ್ಳೇಗಾಲದ ಟಿಬೆಟಿಯನ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಸೇರಿಂಗ್ ದೋರ್ಜಿ ಚುಂಗ್, ಹುಣಸೂರು ವಿಭಾಗದ ಅಧ್ಯಕ್ಷ ಪಾಲ್ಡೆನ್‌ ದೋರ್ಜಿ, ಬೈಲುಕುಪ್ಪೆಯ ಟಿಬೆಟಿಯನ್ ಮಹಿಳೆಯರ ಪ್ರಾದೇಶಿಕ ಸಂಘದ ಅಧ್ಯಕ್ಷೆ ಚಾಯ್‌ಡನ್, ಕೊಳ್ಳೇಗಾಲ ವಿಭಾಗದ ಅಧ್ಯಕ್ಷೆ ತಾಶಿ ಯಂಗ್‌ಜಾಮ್, ಹುಣಸೂರು ಭಾಗದ ಅಧ್ಯಕ್ಷೆ ತಾಮದಿನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.