ADVERTISEMENT

ಪ್ರವಾಹ ಎದುರಿಸಲು ಸಜ್ಜಾಗಿ: ಸೂಚನೆ

ಬೀಚನಹಳ್ಳಿ ಗ್ರಾಮದ ಸೇತುವೆ ಮುಳುಗಡೆ ಸ್ಥಳಕ್ಕೆ ಉಪವಿಭಾಗಾಧಿಕಾರಿ, ತಹಶೀಲ್ದಾರ್‌ ಭೇಟಿ

​ಪ್ರಜಾವಾಣಿ ವಾರ್ತೆ
Published 24 ಜುಲೈ 2021, 6:42 IST
Last Updated 24 ಜುಲೈ 2021, 6:42 IST
ಎಚ್.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯ ಮುಂಭಾಗದ ಸೇತುವೆ ಮುಳುಗಡೆ ಪ್ರದೇಶಕ್ಕೆ ವರ್ಣಿತ್ ನೇಗಿ, ಎಸ್.ಎನ್.ನರಗುಂದ ಭೇಟಿ ನೀಡಿ ಪರಿಶೀಲಿಸಿದರು (ಎಡಚಿತ್ರ). ಪ್ರವಾಸಿ ಮಂದಿರದಲ್ಲಿ ವರ್ಣಿತ್ ನೇಗಿ ಅವರು ಅಧಿಕಾರಿಗಳ ಸಭೆ ನಡೆಸಿದರು
ಎಚ್.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯ ಮುಂಭಾಗದ ಸೇತುವೆ ಮುಳುಗಡೆ ಪ್ರದೇಶಕ್ಕೆ ವರ್ಣಿತ್ ನೇಗಿ, ಎಸ್.ಎನ್.ನರಗುಂದ ಭೇಟಿ ನೀಡಿ ಪರಿಶೀಲಿಸಿದರು (ಎಡಚಿತ್ರ). ಪ್ರವಾಸಿ ಮಂದಿರದಲ್ಲಿ ವರ್ಣಿತ್ ನೇಗಿ ಅವರು ಅಧಿಕಾರಿಗಳ ಸಭೆ ನಡೆಸಿದರು   

ಎಚ್.ಡಿ.ಕೋಟೆ: ತಾಲ್ಲೂಕಿನ ಬೀಚನಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯದ ಮುಂಭಾಗದ ಸೇತುವೆ ಮುಳುಗಡೆ ಸ್ಥಳಕ್ಕೆ ಉಪವಿಭಾಗಾಧಿಕಾರಿ ವರ್ಣಿತ್ ನೇಗಿ ಮತ್ತು ತಹಶೀಲ್ದಾರ್ ಎಸ್.ಎನ್.ನರಗುಂದ ಭೇಟಿ ನೀಡಿ ಪರಿಶೀಲಿಸಿದರು.

ಕಬಿನಿ ಜಲಾಶಯದ ಹೊರಹರಿವು ಹೆಚ್ಚಳವಾಗುತ್ತಿದ್ದಂತೆ ಬಿದರಹಳ್ಳಿ ವೃತ್ತದ ಬಳಿಯಿರುವ 50 ಕುಟುಂಬಗಳಿಗೆ ಸಂಕಷ್ಟ ಎದುರಾಗಿರುವ ಬಗ್ಗೆ ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ, ಗ್ರಾಮಕ್ಕೆ ತೆರಳಿದ ವರ್ಣಿತ್ ನೇಗಿ, ಸಮಸ್ಯೆಗಳನ್ನು ಆಲಿಸಿದರು. ಸಂತ್ರಸ್ತರಿಗೆ ಮನೆ ನಿರ್ಮಿಸಲು ಇರುವ ತೊಡಕಿನ ಬಗ್ಗೆ ತಹಶೀಲ್ದಾರರಿಂದ ಮಾಹಿತಿ ಪಡೆದರು.

‘ಸರ್ಕಾರ ಪುನರ್ವಸತಿ ಕಲ್ಪಿಸುವುದಾಗಿ ನೀಡಿದ್ದ ಭರವಸೆಯನ್ನು ಈಡೇರಿಸಿಲ್ಲ. ನಾವು ಇಂದಿಗೂ ಅತಂತ್ರವಾಗಿ ಜೀವನ ನಡೆಸುತ್ತಿದ್ದೇವೆ’ ಎಂದು ಗ್ರಾಮದ ನಿವಾಸಿ ಮಣಿಕಂಠ ಅಳಲು ತೋಡಿಕೊಂಡರು.

ADVERTISEMENT

‘ಪ್ರವಾಹ ಮುಗಿಯುವವರೆಗೂ ಪರಿಹಾರ ಕೇಂದ್ರದಲ್ಲೇ ವಾಸ ಮಾಡುವ ಸ್ಥಿತಿ ಪುನಃ ಬರಬಹುದು’ ಎಂದು ಬೇಸರ ವ್ಯಕ್ತಪಡಿಸಿದರು.

ಅಧಿಕಾರಿಗಳ ಸಭೆ: ಕಬಿನಿ ಜಲಾಶಯದ ಹಿನ್ನೀರು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಸಭೆ ನಡೆಸಿದ ವರ್ಣಿತ್ ನೇಗಿ, ‘ಅಧಿಕಾರಿಗಳು ಸ್ಥಳೀಯವಾಗಿ ವಾಸವಿದ್ದು, ಪ್ರವಾಹವನ್ನು ಎದುರಿಸಲು ಸಜ್ಜಾಗಬೇಕು. ಸ್ಥಳೀಯ ವಾಹನಗಳ ಲಭ್ಯತೆ ಹಾಗೂ ಪರಿಹಾರ ಕೇಂದ್ರಗಳನ್ನು ತೆರೆಯಲು ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

‘ಜಲಾಶಯದ ಅಧಿಕಾರಿಗಳು ಕೇರಳದ ಜಲಾಶಯಗಳ ಅಧಿಕಾರಿ ಗಳೊಂದಿಗೆ ಸಂಪರ್ಕದಲ್ಲಿರಬೇಕು. ಮುಂದಾಗುವ ಸಮಸ್ಯೆಗಳ ಬಗ್ಗೆ ನಿಗಾ ಇಡಬೇಕು’ ಎಂದು ಸೂಚಿಸಿದರು.

ಸಭೆಯಲ್ಲಿ ಸರಗೂರು ತಹಶೀಲ್ದಾರ್ ಚೆಲುವರಾಜ್, ಜಲಾಶಯದ ಕಾರ್ಯ ಪಾಲಕ ಎಂಜಿನಿಯರ್‌ ಸುರೇಶ್ ಬಾಬು, ಎಇ ಜನಾರ್ದನ್, ಇಒ ನಿಂಗರಾಜ್, ಸಣ್ಣ ರಾಮಪ್ಪ, ಸಿಪಿಐ ಆನಂದ್, ಅಗ್ನಿಶಾಮಕದಳದ ಎಸ್ಐ ಮಹೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.