ADVERTISEMENT

ತಿ.ನರಸೀಪುರ| ಒಳ ಮೀಸಲಾತಿ ಪೂರ್ಣ ಜಾರಿಯಾಗಲಿ: ಭಾಸ್ಕರ್ ಪ್ರಸಾದ್

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 7:13 IST
Last Updated 13 ಅಕ್ಟೋಬರ್ 2025, 7:13 IST
ತಿ.ನರಸೀಪುರ ಪಟ್ಟಣದಲ್ಲಿ ಮಾದಿಗ ಕ್ರಾಂತಿಕಾರಿ ಒಳಮೀಸಲಾತಿ ಹೋರಾಟ ಸಮಿತಿ ಹಾಗೂ ತಾಲ್ಲೂಕು ಮಾದಿಗ ಸಂಘಟನೆಗಳ ನೇತೃತ್ವದಲ್ಲಿ ಭಾನುವಾರ ಸಂಜೆ ನಡೆದ ಸಂಪೂರ್ಣ ಒಳ ಮೀಸಲಾತಿ ಜಾರಿಗಾಗಿ ಕ್ರಾಂತಿಕಾರಿ ಪ್ರತಿಭಟನಾ ಸಮಾವೇಶವನ್ನು ಷಡಕ್ಷರ ಮುನಿ ಸ್ವಾಮೀಜಿ ಉದ್ಘಾಟಿಸಿದರು
ತಿ.ನರಸೀಪುರ ಪಟ್ಟಣದಲ್ಲಿ ಮಾದಿಗ ಕ್ರಾಂತಿಕಾರಿ ಒಳಮೀಸಲಾತಿ ಹೋರಾಟ ಸಮಿತಿ ಹಾಗೂ ತಾಲ್ಲೂಕು ಮಾದಿಗ ಸಂಘಟನೆಗಳ ನೇತೃತ್ವದಲ್ಲಿ ಭಾನುವಾರ ಸಂಜೆ ನಡೆದ ಸಂಪೂರ್ಣ ಒಳ ಮೀಸಲಾತಿ ಜಾರಿಗಾಗಿ ಕ್ರಾಂತಿಕಾರಿ ಪ್ರತಿಭಟನಾ ಸಮಾವೇಶವನ್ನು ಷಡಕ್ಷರ ಮುನಿ ಸ್ವಾಮೀಜಿ ಉದ್ಘಾಟಿಸಿದರು   

ತಿ.ನರಸೀಪುರ: ‘ಅನೇಕ ದಶಕಗಳಿಂದ ಹೋರಾಟ ಮಾಡಿರುವ ಮಾದಿಗರಿಗೆ ಒಳ ಮೀಸಲಾತಿಯನ್ನು ಯಾವುದೇ ಕುತಂತ್ರ ಮಾಡದೇ ಕಡ್ಡಾಯವಾಗಿ ಜಾರಿಗೊಳಿಸಬೇಕು’ ಎಂದು ಮಾದಿಗರ ಒಳ ಮೀಸಲಾತಿ ಹೋರಾಟಗಾರ ಭಾಸ್ಕರ್ ಪ್ರಸಾದ್ ಒತ್ತಾಯಿಸಿದರು.

ಪಟ್ಟಣದ ಗೋಪಾಲಪುರ ದಿ. ಎನ್. ರಾಚಯ್ಯ ಸ್ಮಾರಕದ ಬಳಿ ಮಾದಿಗ ಕ್ರಾಂತಿಕಾರಿ ಒಳ ಮೀಸಲಾತಿ ಹೋರಾಟ ಸಮಿತಿ ಹಾಗೂ ತಿ.ನರಸೀಪುರ ತಾಲ್ಲೂಕು ಮಾದಿಗ ಸಂಘಟನೆಗಳು ಭಾನುವಾರ ಸಂಜೆ ಆಯೋಜಿಸಿದ್ದ ಸಂಪೂರ್ಣ ಒಳ ಮೀಸಲಾತಿ ಜಾರಿಗಾಗಿ ಕ್ರಾಂತಿಕಾರಿ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದರು.

‘ಮಾದಿಗರಿಗೆ ಈಗ ಶೇ 6 ರಷ್ಟು ಮೀಸಲಾತಿ ನೀಡಿದೆ, ಅದರಲ್ಲೂ ಎಕೆ ಎಡಿ ಎಎ ಪ್ರಮಾಣಪತ್ರದಡಿ ಮಾದಿಗರ ಒಳ ಮೀಸಲಾತಿಯನ್ನು ವಂಚಿಸುವ ಪ್ರಯತ್ನ‌ ನಡೆದಿದೆ. ಸಂಪೂರ್ಣ ಒಳ ಮೀಸಲಾತಿ ನೀಡದೆ ರಾಜ್ಯದಲ್ಲಿ ನಮ್ಮನ್ನು ವಂಚಿಸುತ್ತಿದ್ದು, ಮಾದಿಗರು ಅಸಹಾಯಕರಾಗಿದ್ದೇವೆ.
ಸಮಾಜ ಕಲ್ಯಾಣ ಸಚಿವ ಡಾ. ಎಚ್‌.ಸಿ.ಮಹದೇವಪ್ಪ ಹಾಗೂ ಸರ್ಕಾರ 40 ಲಕ್ಷ ಮಾದಿಗರ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿದ್ದಾರೆ. ನ್ಯಾಯ ಕೇಳಲು ಹೋದ ಮುಖಂಡರ ಮೇಲೆ ಸಮಾಜ ಕಲ್ಯಾಣ ಸಚಿವರು ಕುತಂತ್ರ ಮಾಡುತ್ತಾರೆ. ಒಳ ಮೀಸಲಾತಿ ಬಗ್ಗೆ ಚರ್ಚಿಸಲು ಸಚಿವರು ಆಹ್ವಾನ ನೀಡಿದ್ದಾರೆ. ನಾವು ಹೋಗುತ್ತೇವೆ, ಗೌರವಯುತವಾಗಿ ನಡೆಸಿಕೊಂಡರೆ ಸರಿ, ನಮ್ಮ ಹಕ್ಕನ್ನು ನಮಗೆ ಕೊಡಿಸದಿದ್ದರೆ ನಮ್ಮ‌ ಹೋರಾಟ ಮುಂದುವರಿಯುತ್ತದೆ’ ಎಂದು ಅವರು ಎಚ್ಚರಿಸಿದರು.

ADVERTISEMENT

ವಕೀಲ ಅರುಣ್ ಕುಮಾರ್ ಮಾತನಾಡಿ, ‘ರಾಜ್ಯದ ಕಾಂಗ್ರೆಸ್ ಸರ್ಕಾರ ನೀಡಿರುವ ಆಗಸ್ಟ್ 25ರ ಒಳ ಮೀಸಲಾತಿ ಮಾದಿಗ ಸಮುದಾಯಕ್ಕೆ ಮರಣ ಶಾಸನ. ಎಡಿ ಎಕೆ ಎಎ ಎಂಬ ಹೆಸರಲ್ಲಿ ಸುಮಾರು 4,74,954 ಮಂದಿ ಮೂಲ‌ ಜಾತಿ ಹೇಳದೆ ಪ್ರಮಾಣ ಪತ್ರ ಪಡೆದಿದ್ದಾರೆ. ಸರ್ಕಾರ ಅವರಲ್ಲಿ 2,37,477 ಜನರನ್ನು ಸೇರಿಸಿ ಎ ಮತ್ತು ಬಿ ಗುಂಪಿನಲ್ಲಿ ಅನುಕೂಲತೆ ಮೀಸಲಾತಿಯಲ್ಲಿ ಸೌಲಭ್ಯ ಪಡೆಯುವಂತೆ ಪ್ರಮಾಣ ಪತ್ರ ಪಡೆದಿದ್ದಾರೆ. ಹೊಲೆಯ ಸಮಾಜದವರು ಮಾದಿಗರ ಹಕ್ಕಲ್ಲಿ ಸೌಲಭ್ಯ ಪಡೆಯುವಂತಾದಲ್ಲಿ ಮಾದಿಗರಿಗೆ ಸೌಲಭ್ಯ ಸಿಗುವುದಿಲ್ಲ, ಹೋರಾಟ ವ್ಯರ್ಥವಾಗುತ್ತದೆ. ಇಂತಹ ಕುತಂತ್ರವನ್ನು ರಾಜ್ಯ ಸರ್ಕಾರ ಮಾಡಿದ್ದು ಈ ಬಗ್ಗೆ ನಾವು ಎಚ್ಚೆತ್ತುಕೊಳ್ಳಬೇಕಿದೆ’ ಎಂದು ಸಮುದಾಯದವರಿಗೆ ಕರೆ ನೀಡಿದರು.

ಮುಖಂಡರಾದ ಅರಕಲವಾಡಿ ನಾಗೇಂದ್ರ, ಷಡಾಕ್ಷರ ಮುನಿ ಸ್ವಾಮೀಜಿ, ಮಾಜಿ ಶಾಸಕ ಸಿ. ರಮೇಶ್‌ ಮಾತನಾಡಿದರು.

ಚಿಂತಕ ನಾಗೇಂದ್ರ, ಕೊಡಿಹಳ್ಳಿ ಸಂತೋಷ, ಸಂಘದ ಮಾಜಿ ಅಧ್ಯಕ್ಷ ಕೆ.ಪ್ರಭುರಾಜ್, ಕೊಡಲಿ ಅರುಂಧತಿ ಸಹಕಾರ ಸಂಘದ ಅಧ್ಯಕ್ಷ ಕೆಂಚಪ್ಪ,  ಬಾಬು ಜಗಜೀವನ್‌ರಾಂ ಜನಕಲ್ಯಾಣ ಸಂಘದ ಅಧ್ಯಕ್ಷ ಮಲಿಯೂರು ಶಂಕರ್, ಮೂಗೂರು ಸಿದ್ದರಾಜು, ಹುಣಸೂರು ಪುಟ್ಟಯ್ಯ, ಬೆಂಗಳೂರಿನ ಮುನಿರಾಜ್, ಹಾಸನದ ಮಂಜುನಾಥ್, ತಿಮ್ಮಯ್ಯ, ಸ್ವಾಮಿ, ಬೆಳ್ಳಿಯಪ್ಪ, ಬಸವನಪುರ ರಾಜಶೇಖರ್, ಗಾಂಧಿನಗರದ ಇಂದ್ರಮ್ಮ, ನಾರಾಯಣ, ಜವರಪ್ಪ, ಬೂದಬಾಳು ಮಹದೇವ, ಹಸಗುಲಿ ಸಿದ್ದಯ್ಯ, ಪುರಸಭಾ ಮಾಜಿ ಸದಸ್ಯ ಗೋಪಿ, ಸುರೇಶ್, ಎಲ್ಐಸಿ ರಾಜಣ್ಣ, ಸಾಮಾಜಿಕ ನ್ಯಾಯಪರ ವೇದಿಕೆಯ ಅಧ್ಯಕ್ಷ ಮರಡಿಪುರ ರವಿಕುಮಾರ್‌ ಮುಖಂಡರು ಹಾಜರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.