ಮೈಸೂರು: ಕೆಲವು ಅಸಾಂಕ್ರಾಮಿಕ ರೋಗಗಳ ನಿವಾರಣೆಗೆ ‘ಔಷಧಿ ರಹಿತ ಚಿಕಿತ್ಸೆ’ ಒದಗಿಸುವುದಕ್ಕಾಗಿ ಯೋಗವನ್ನು ಬಳಸಿಕೊಳ್ಳುವ ಪ್ರಯತ್ನ ಜಿಲ್ಲೆಯ ‘ಆಯುಷ್ಮಾನ್ ಆರೋಗ್ಯ ಮಂದಿರ’ಗಳಲ್ಲಿ ನಡೆದಿದೆ.
ಆಯುಷ್ ಇಲಾಖೆಯಿಂದ ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಚಿಕಿತ್ಸೆ ಕಲ್ಪಿಸಲೆಂದೇ ‘ಸರ್ಕಾರಿ ಆಯುರ್ವೇದ ಆಸ್ಪತ್ರೆ’ಗಳನ್ನು ಸ್ಥಾಪಿಸಿದ್ದು, ಜಿಲ್ಲೆಯಲ್ಲಿ 33 ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. 20 ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿ ‘ಆಯುಷ್ಮಾನ್ ಆರೋಗ್ಯ ಮಂದಿರ’ ಎಂದು ಮರುನಾಮಕರಣ ಮಾಡಿ ಸೇವೆ ನೀಡಲಾಗುತ್ತಿದೆ. ಯೋಗಾಭ್ಯಾಸ ಕಲಿಸುವವರನ್ನು ಬಳಸಿಕೊಳ್ಳಲಾಗುತ್ತಿದೆ.
ನಗರದ ವಿವಿಧೆಡೆ ಸೇರಿ ತಾಲ್ಲೂಕಿನಲ್ಲಿ 5, ಹುಣಸೂರು 4, ನಂಜನಗೂಡು 5, ಪಿರಿಯಾಪಟ್ಟಣ 2, ಹುಣಸೂರು 2, ಕೆ.ಆರ್.ನಗರ ತಾಲ್ಲೂಕಿನಲ್ಲಿ 2 ಆರೋಗ್ಯ ಮಂದಿರಗಳಿದ್ದು, ಆಯುರ್ವೇದ, ಪ್ರಕೃತಿ ಚಿಕಿತ್ಸೆಯೊಂದಿಗೆ ಯೋಗಾಭ್ಯಾಸದ ಮೂಲಕ ರೋಗ ನಿರ್ವಹಣೆಗೆ ಪ್ರಯತ್ನಿಸಲಾಗುತ್ತಿದೆ. ಬೆಳಿಗ್ಗೆ ಹಾಗೂ ಸಂಜೆ ಯೋಗಾಭ್ಯಾಸ ಕಲಿಸಲಾಗುತ್ತಿದೆ. ವಿಶೇಷವಾಗಿ, ಹಿರಿಯ ನಾಗರಿಕರು ಅಭ್ಯಾಸಕ್ಕೆ ಬರುತ್ತಿರುವುದು ಕಂಡುಬರುತ್ತಿದೆ.
ತಲಾ ಇಬ್ಬರು: ‘ಪ್ರತಿ ಆರೋಗ್ಯ ಮಂದಿರದಲ್ಲೂ ಇಬ್ಬರು ಯೋಗ ತರಬೇತುದಾರರನ್ನು ಬಳಸಲಾಗುತ್ತಿದೆ. ಅವರು ನಿತ್ಯವೂ ಯೋಗ, ಧ್ಯಾನ ಹಾಗೂ ಪ್ರಾಣಾಯಾಮ ಹೇಳಿಕೊಡುತ್ತಾರೆ. ಇತ್ತೀಚೆಗೆ ಜನ ಪ್ರತಿ ಕಾಯಿಲೆಗೂ ಔಷಧಿ ಸೇವಿಸುವುದೇ ಚಿಕಿತ್ಸೆ ಎಂದು ಭಾವಿಸಿದ್ದಾರೆ. ಈ ಮನೋಭಾವವನ್ನು ಹೋಗಲಾಡಿಸಿ, ಕೆಲವು ಸಮಸ್ಯೆಗಳನ್ನು ಯೋಗಾಭ್ಯಾಸದ ಮೂಲಕವೂ ನಿರ್ವಹಿಸಬಹುದು ಎಂದು ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಜಿಲ್ಲಾ ಆಯುಷ್ ಅಧಿಕಾರಿ ರೇಣುಕಾದೇವಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಎನ್‌ಸಿಡಿ (ಅಸಾಂಕ್ರಾಮಿಕ ರೋಗ) ಕಾಯಿಲೆಗಳಾದ ಮಧುಮೇಹ, ಅಧಿಕ ರಕ್ತದೊತ್ತಡ, ಒತ್ತಡ ಮೊದಲಾದ ಜೀವನಶೈಲಿ ಸಮಸ್ಯೆಗಳನ್ನು ಯೋಗಾಭ್ಯಾಸ, ಧ್ಯಾನ ಹಾಗೂ ಪ್ರಾಣಾಯಾಮದ ಮೂಲಕ ನಿರ್ವಹಿಸಬಹುದು. ಇದಕ್ಕಾಗಿ ನಿಯಮಿತ ಅಭ್ಯಾಸ ಮುಖ್ಯ. ಈ ನಿಟ್ಟಿನಲ್ಲಿ ಯೋಗ ಶಿಕ್ಷಕರು ಮಾರ್ಗದರ್ಶನ ನೀಡುತ್ತಿದ್ದಾರೆ. ಮಾತ್ರೆಗಳು ಮೊದಲಾದ ಔಷಧಿಗಳ ಸೇವನೆಯಿಂದ ಆಗಬಹುದಾದ ‘ಅಡ್ಡಪರಿಣಾಮ’ಗಳಿಂದ ದೂರ ಇರಿಸುವುದು ಇಲಾಖೆಯ ಉದ್ದೇಶ. ನಿತ್ಯವೂ ಸರಾಸರಿ 50ರಿಂದ 60 ಮಂದಿ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಮಂದಿರದ ಆವರಣದಲ್ಲಿ ಯೋಗಾಭ್ಯಾಸ ನಡೆಯುತ್ತಿದೆ’ ಎಂದು ಮಾಹಿತಿ ನೀಡಿದರು.
ಹಲವು ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಯೋಗ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಜಾಗೃತಿ ಕೆಲಸವನ್ನು ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ ಮಾಡಲಾಗುತ್ತಿದೆ.– ರೇಣುಕಾದೇವಿ, ಜಿಲ್ಲಾ ಆಯುಷ್ ಅಧಿಕಾರಿ
ಜಯನಗರದಲ್ಲಿ ಸೌಲಭ್ಯ
ಮೈಸೂರಿನ ಜಯನಗರ (ಕೆ.ಜಿ. ಕೊಪ್ಪಲು)ದಲ್ಲಿ ಆಯುಷ್ ಇಲಾಖೆಯಿಂದ ₹ 2 ಕೋಟಿ ವೆಚ್ಚದಲ್ಲಿ ಪ್ರಕೃತಿ ಚಿಕಿತ್ಸಾ ಸರ್ಕಾರಿ ಆಸ್ಪತ್ರೆಯ ಕಟ್ಟಡವನ್ನು ನವೀಕರಿಸಿದ್ದು ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಹತ್ತು ಬಗೆಯ ಚಿಕಿತ್ಸೆಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ತಲೆನೋವು ಮಂಡಿನೋವು ಸೇರಿ ಎಲ್ಲಾ ಬಗೆಯ ಸಮಸ್ಯೆಗಳಿಗೂ ಚಿಕಿತ್ಸೆ ಲಭ್ಯ. ಇಬ್ಬರು ವೈದ್ಯರಿದ್ದಾರೆ.
ಬೆಳಿಗ್ಗೆ 9.30ರಿಂದ ಸಂಜೆ 5ರವರೆಗೆ ತೆರೆದಿರುತ್ತದೆ. ಮಧುಮೇಹ ನ್ಯೂನತೆ ಇರುವವರಿಗೆ ವಿಶೇಷವಾಗಿ ಕಾಳಜಿ ವಹಿಸಲಾಗುತ್ತಿದೆ. ಇಲ್ಲಿ ‘ಆಯುರ್ವೇದ ಪಂಚಕರ್ಮ ಚಿಕಿತ್ಸೆ ಜೊತೆಗೆ ಇದೀಗ ‘ಫಿಸಿಯೊಥೆರಪಿ’ ಹಾಗೂ ‘ಎಲೆಕ್ಟ್ರೊಥೆರಪಿ’ ಸೇವೆಗಳಿಗೆ ಹೊಸ ಉಪಕರಣಗಳನ್ನು ಒದಗಿಸಿದ್ದು. ಅದಕ್ಕೆ ₹ 4 ಕೋಟಿ ವೆಚ್ಚವಾಗಿದೆ. ಸಂಧಿವಾತ ಪಾರ್ಶ್ವವಾಯು ಶಸ್ತ್ರಚಿಕಿತ್ಸೆ ಪಡೆದ ರೋಗಿಗಳ ಆರೈಕೆಯೂ ಇರಲಿದೆ. ರೋಗಿಗಳಿಗೆ ಬೆಳಿಗ್ಗೆ 6 ಹಾಗೂ ಸಂಜೆ 4ರಿಂದ ಯೋಗ ತರಗತಿಗಳನ್ನೂ ನಡೆಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.