ADVERTISEMENT

ಬದುಕಿನ ಯಶಸ್ಸಿಗೆ ಸ್ಪಷ್ಟ ಗುರಿ ಮುಖ್ಯ: ಪ್ರೊ.ಡಿ.ಆನಂದ್

‘ದೀಕ್ಷಾರಂಭ' ಪರಿಚಯಾತ್ಮಕ ಕಾರ್ಯಕ್ರಮದಲ್ಲಿ ಪ್ರೊ.ಡಿ.ಆನಂದ್ ಸಲಹೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2024, 14:24 IST
Last Updated 11 ಆಗಸ್ಟ್ 2024, 14:24 IST
ಮೈಸೂರಿನ ಊಟಿ ರಸ್ತೆಯ ಜೆಎಸ್‌ಎಸ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರೊ.ಡಿ.ಆನಂದ್ ಮಾತನಾಡಿದರು
ಮೈಸೂರಿನ ಊಟಿ ರಸ್ತೆಯ ಜೆಎಸ್‌ಎಸ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರೊ.ಡಿ.ಆನಂದ್ ಮಾತನಾಡಿದರು   

ಮೈಸೂರು: ‘ಸಾಧಿಸುವ ಛಲ, ದೂರದೃಷ್ಟಿ ಮತ್ತು ದೃಢ ಸಂಕಲ್ಪ ಯಶಸ್ಸಿನ ಮೂರು ಮುಖ್ಯ ಸೂತ್ರಗಳು. ಇವುಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಮೈಸೂರು ವಿಶ್ವವಿದ್ಯಾಲಯದ ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಪ್ರೊ.ಡಿ.ಆನಂದ್ ಹೇಳಿದರು.

ಊಟಿ ರಸ್ತೆಯ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಐಕ್ಯೂಎಸಿಯ ಸಹಯೋಗದಲ್ಲಿ ಈಚೆಗೆ ಪದವಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಎರಡು ದಿನದ ‘ದೀಕ್ಷಾರಂಭ’ ಪರಿಚಯಾತ್ಮಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ವಿದ್ಯಾರ್ಥಿಗಳಲ್ಲಿ ಸಮಯ ಪ್ರಜ್ಞೆ ಮತ್ತು ಗುರಿ ಸ್ಪಷ್ಟವಾಗಿರಬೇಕು. ಆಗ ಮಾತ್ರ ಬದುಕಿನಲ್ಲಿ ಯಶಸ್ಸನ್ನು ಕಾಣಲು ಸಾಧ್ಯ. ಸಮಯ ಮತ್ತು ಅವಕಾಶ ಯಾರಿಗೂ ಕಾಯುವುದಿಲ್ಲ. ಆದ್ದರಿಂದ ನೀವೇನಾಗಬೇಕು ಎಂಬುದನ್ನು ನಿಶ್ಚಯಿಸಿಕೊಳ್ಳಬೇಕು. ಇದರಿಂದ ನಿಮ್ಮ ಮುಂದಿನ ಭವಿಷ್ಯ ಸುಭದ್ರವಾಗಿರುತ್ತದೆ’ ಎಂದರು.

ADVERTISEMENT

‘ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಕನಸಾದ ‘ಸೂಪರ್ ಪವರ್ ಇಂಡಿಯಾ’ ನನಸು ಮಾಡಲು ವಿದ್ಯಾರ್ಥಿಗಳು ಪಣ ತೊಡಬೇಕು. ಶಿಕ್ಷಣ ಎಂದರೆ ಕೇವಲ ಪದವಿ ಪಡೆಯುವುದಲ್ಲ; ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವುದಾಗಿರುತ್ತದೆ. ಇಂದು ಯುವಕರು ಸ್ಪಷ್ಟ ಗುರಿಗಳಿಲ್ಲದೆ ದಾರಿ ತಪ್ಪುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ ಮಾತನಾಡಿ, ‘ವಿದ್ಯಾರ್ಥಿಗಳು ಕಾಲೇಜಿನ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಗುರು ಮತ್ತು ವಿದ್ಯಾರ್ಥಿಗಳ ಸಂಬಂಧ ಗಟ್ಟಿಗೊಳಿಸಲು, ಕಾಲೇಜಿನ ಸರ್ವಾಂಗೀಣ ಬೆಳವಣಿಗೆಗೆ ಕಾರಣವಾಗಿರುವ ವಿಚಾರಗಳ ಮೇಲೆ ಬೆಳಕು ಚೆಲ್ಲುವುದು ‘ದೀಕ್ಷಾರಂಭ’ ಕಾರ್ಯಕ್ರಮದ ಉದ್ದೇಶವಾಗಿದೆ’ ಎಂದರು.

ಪ್ರಾಂಶುಪಾಲ ಎಂ.ಪ್ರಭು, ಎಲ್.ವಿನಯ್ ಕುಮಾರ್, ಎನ್.ರಾಜೇಂದ್ರಪ್ರಸಾದ್, ಕಾಲೇಜಿನ ಪರೀಕ್ಷಾ ನಿಯಂತ್ರಣಾಧಿಕಾರಿ ಬಿ.ಪ್ರಭುಸ್ವಾಮಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.