ಸಾಂದರ್ಭಿಕ ಚಿತ್ರ
ಮೈಸೂರು: ಮನೆಮನೆಗೆ ಗಂಗೆ ಆಶಯದ ಅಡಿ ಜಾರಿಗೊಂಡಿರುವ ಜಲಜೀವನ್ ಮಿಷನ್ ಯೋಜನೆಯು ಜಿಲ್ಲೆಯಲ್ಲಿ ಹಲವು ಎಡರು–ತೊಡರುಗಳ ನಡುವೆಯೂ ಪ್ರಗತಿ ಕಾಣುತ್ತಿದ್ದು, ಒಟ್ಟು 4.71 ಲಕ್ಷ ಮನೆಗಳ ಪೈಕಿ 4.45 ಲಕ್ಷ ಮನೆಗಳಿಗೆ ನಳ ಸಂಪರ್ಕ ಸಾಧ್ಯವಾಗಿದೆ.
2028ರ ವೇಳೆಗೆ ಪ್ರತಿ ಮನೆಗೂ ಶುದ್ದ ನೀರು ಪೂರೈಕೆಯ ಆಶಯದೊಂದಿಗೆ ಈ ಯೋಜನೆ ಸಾಕಾರಗೊಂಡಿದ್ದು, ಜಿಲ್ಲೆಯಲ್ಲಿ ಒಟ್ಟು 1909 ಕಾಮಗಾರಿಗಳನ್ನು ನಿರ್ವಹಿಸಲಾಗುತ್ತಿದೆ. ಇದರಲ್ಲಿ 1,580 ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿದ್ದು, ಉಳಿದ 315 ಕಾಮಗಾರಿಗಳು ಪ್ರಗತಿಯಲ್ಲಿವೆ. ಶೇ 82.77 ರಷ್ಟು ಪ್ರಗತಿ ಆಗಿರುವುದಾಗಿ ಅಧಿಕಾರಿಗಳು ಹೇಳುತ್ತಾರೆ.
ಎಚ್.ಡಿ. ಕೋಟೆ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ 383 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಇದರಲ್ಲಿ 315 ಕಾಮಗಾರಿಗಳು ಪೂರ್ಣಗೊಂಡಿದೆ. ಮೈಸೂರು ತಾಲ್ಲೂಕಿನಲ್ಲಿ ಕಡಿಮೆ ಪ್ರಮಾಣದಲ್ಲಿ ಗುರಿ ಸಾಧನೆ ಆಗಿದ್ದು, ಇಲ್ಲಿನ 175 ಕಾಮಗಾರಿಗಳ ಪೈಕಿ 119 ಪೂರ್ಣಗೊಂಡು, ಇನ್ನೂ 51 ಪ್ರಗತಿಯಲ್ಲಿದ್ದು ಶೇ 68ರಷ್ಟು ಮಾತ್ರ ಗುರಿ ಸಾಧನೆಯಾಗಿದೆ.
ವೆಚ್ಚವೆಷ್ಟು?: ಪ್ರತಿ ಮನೆಗೆ ನಳ ಸಂಪರ್ಕ, ಪೈಪ್‌ಲೈನ್ ಮೊದಲಾದ ಕಾಮಗಾರಿಗಳಿಗಾಗಿ ಜಿಲ್ಲೆಯಲ್ಲಿ ಒಟ್ಟು ₹1293.66 ಕೋಟಿ ವೆಚ್ಚ ಅಂದಾಜಿಸಲಾಗಿದೆ. ಇದರಲ್ಲಿ ಈಗಾಗಲೇ ₹896.88 ಕೋಟಿ ಖರ್ಚಾಗಿದ್ದು, ವೆಚ್ಚವಾರು ಶೇ 69.33ರಷ್ಟು ಪ್ರಗತಿ ಆಗಿದೆ. ಹುಣಸೂರು ತಾಲ್ಲೂಕಿನಲ್ಲಿ ಈವರೆಗೆ ₹206.45 ಕೋಟಿ ವ್ಯಯಿಸಿದ್ದು, ಶೇ 73.19ರಷ್ಟು ಪ್ರಗತಿ ಆಗಿದೆ.
ಬಹುಗ್ರಾಮ ನೀರಿನ ಯೋಜನೆಗಳು: ಜೆಜೆಎಂ ಯೋಜನೆ ಅಡಿ ಜಿಲ್ಲೆಯಲ್ಲಿ ಹಲವು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಸದ್ಯ ಇಂತಹ 13 ಯೋಜನೆಗಳನ್ನು ನಿರ್ವಹಿಸಲಾಗುತ್ತಿದೆ. ಒಟ್ಟು 618 ಹಳ್ಳಿಗಳಿಗೆ ಇದರಿಂದ ಪ್ರಯೋಜನವಾಗಲಿದೆ. ಸರ್ಕಾರವು ಈ ಯೋಜನೆಗಳಿಗಾಗಿ ಒಟ್ಟು ₹1106.56 ಕೋಟಿ ವ್ಯಯಿಸಲು ಯೋಜಿಸಿದ್ದು, ಈಗಾಗಲೇ ₹398 ಕೋಟಿ ಖರ್ಚಾಗಿದೆ. ಇದರಿಂದ ಒಟ್ಟು 65.92 ಎಂಎಲ್‌ಡಿ ಪ್ರಮಾಣದ ನೀರಿನ ಬಳಕೆ ಸಾಧ್ಯವಾಗಲಿದೆ.
ದೂರು–ದುಮ್ಮಾನವೇ ಹೆಚ್ಚು!
ಜೆಜೆಎಂ ಕಾಮಗಾರಿ ಆರಂಭದಿಂದಲೂ ಸಾಕಷ್ಟು ದೂರುಗಳು ಕೇಳಿಬರುತ್ತಿವೆ. ಯೋಜನೆ ಅಡಿ ಅನೇಕ ಕಡೆ ಹಳೇ ಪೈಪ್‌ಲೈನ್‌ಗಳಿಗೆ ಸಂಪರ್ಕ ಕಲ್ಪಿಸಲಾಗುತ್ತಿದ್ದು, ಹೊಸತಾಗಿ ಬಳಸುತ್ತಿರುವ ಪರಿಕರಗಳ ಗುಣಮಟ್ಟ ಸಹ ಉತ್ತಮವಾಗಿಲ್ಲ. ರಸ್ತೆಗಳನ್ನು ಮನಸ್ಸೋ ಇಚ್ಚೆ ಅಗೆಯಲಾಗಿದೆ. ಸಾಕಷ್ಟು ಕಡೆ ನಳವಿದ್ದರೂ ನೀರಿನ ಸರಬರಾಜು ಸರಿಯಿಲ್ಲ. ಅಗತ್ಯಕ್ಕೆ ತಕ್ಕ ಪ್ರಮಾಣದಲ್ಲಿ ನೀರಿನ ಟ್ಯಾಂಕ್‌ಗಳ ನಿರ್ಮಾಣ ಮಾಡಿಲ್ಲ ಎಂಬಿತ್ಯಾದಿ ದೂರುಗಳಿವೆ.
ಗ್ರಾಮೀಣ ಜನರಿಂದ ವ್ಯಾಪಕ ದೂರು ಕೇಳಿಬಂದ ಕಾರಣಕ್ಕೆ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಜಿ.ಪಂ. ಸಿಇಒ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ರಚಿಸಿದ್ದರು. ಯುಕೇಶ್‌ಕುಮಾರ್ ನೇತೃತ್ವದ ತಂಡವು ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ಹಲವು ಸುಧಾರಣಾ ಕ್ರಮಗಳಿಗೆ ಸೂಚಿಸಿದೆ.
ಜೆಜೆಎಂ ಯೋಜನೆಗಾಗಿ ಅಗೆದ ರಸ್ತೆಗಳ ಪೈಕಿ ಶೇ 70–80 ರಷ್ಟನ್ನು ಈವರೆಗೆ ದುರಸ್ತಿ ಮಾಡಿಲ್ಲ. ಗ್ರಾಮೀಣ ಜನರಿಂದ ದೂರು ಹೆಚ್ಚಿದ್ದು, ಅವರಿಗೆ ಉತ್ತರಿಸುವುದೇ ಕಷ್ಟವಾಗಿದೆಜಿ.ಡಿ. ಹರೀಶ್ ಗೌಡ,ಹುಣಸೂರು ಶಾಸಕ
ಜಲಜೀವನ್ ಮಿಷನ್ ಯೋಜನೆ ಅಡಿ ಈವರೆಗೆ 4.45 ಲಕ್ಷ ಮನೆಗಳಿಗೆ ನಳ ಸಂಪರ್ಕ ಸಾಧ್ಯವಾಗಿದ್ದು, ಯೋಜನೆ ಪ್ರಗತಿಯಲ್ಲಿದೆ. ಇದರಿಂದ ಪ್ರತಿ ಹಳ್ಳಿ ಜನರಿಗೂ ಶುದ್ಧ ನೀರು ಸಿಗಲಿದೆರಂಜಿತ್ ಕುಮಾರ್, ಕಾರ್ಯಪಾಲಕ ಎಂಜಿನಿಯರ್, ಮೈಸೂರು ಜಿ.ಪಂ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.