ADVERTISEMENT

‘500ನೇ ದಿನದ ಹೋರಾಟಕ್ಕೆ ಜನತಾ ನ್ಯಾಯಾಲಯ’

​ಪ್ರಜಾವಾಣಿ ವಾರ್ತೆ
Published 4 ಜುಲೈ 2022, 16:18 IST
Last Updated 4 ಜುಲೈ 2022, 16:18 IST

ಮೈಸೂರು: ‘ಜಿಲ್ಲೆಯ ನಂಜನಗೂಡಿನ ಕೈಗಾರಿಕಾ ಪ್ರದೇಶದಲ್ಲಿರುವ ಎಟಿ ಅಂಡ್ ಎಸ್ ಕಾರ್ಖಾನೆ ಎದುರು, ಕಾನೂನುಬಾಹಿರವಾಗಿ ವಜಾಗೊಂಡಿರುವ ಕಾರ್ಮಿಕರೆಲ್ಲರು ಸೇರಿ ಜುಲೈ 14ರಂದು ಜನತಾ ನ್ಯಾಯಾಲಯ ನಡೆಸುವ ಮೂಲಕ ವಿನೂತನವಾಗಿ ಪ್ರತಿಭಟಿಸಲಿದ್ದಾರೆ’ ಎಂದುಎಟಿ ಅಂಡ್ ಎಸ್ ಇಂಡಿಯಾ ಪ್ರೈ ಲಿಮಿಟೆಡ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಮಹೇಶ್ ತಿಳಿಸಿದರು.

‘ಕಾರ್ಮಿಕರು ನಡೆಸುತ್ತಿರುವ ಸತ್ಯಾಗ್ರಹವು 500ನೇ ದಿನಕ್ಕೆ ಕಾಲಿಡಲಿದ್ದು, ಅಂದು ಜನತಾ ನ್ಯಾಯಾಲಯದ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು’ ಎಂದು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಹೇಳಿದರು.

‘ವಜಾಗೊಂಡಿರುವ ಕಾರ್ಮಿಕರು ಕಾರ್ಖಾನೆಯ ಮುಂದೆ ಧರಣಿ ಆರಂಭಿಸಿ 490 ದಿನಗಳು ಕಳೆದಿವೆ. ಈವರೆಗೂ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಸಮಸ್ಯೆ ಪರಿಹರಿಸಿಲ್ಲ. ಇದನ್ನು ಖಂಡಿಸಿ ಹೋರಾಟ ತೀವ್ರಗೊಳಿಸಲು ನಿರ್ಧರಿಸಲಾಗಿದೆ. ವಿವಿಧ ಸಂಘಟನೆಗಳು, ಕಾರ್ಮಿಕರ ಕುಟುಂಬದ ಸದಸ್ಯರು ಸೇರಿ ಜನತಾ ನ್ಯಾಯಾಲಯ ನಡೆಸಲಿದ್ದಾರೆ. ಅಲ್ಲಿ ಹೋರಾಟದ ಮುಂದಿನ ಹಾದಿಯ ಬಗ್ಗೆ ತೀರ್ಮಾನಿಸಲಾಗುತ್ತದೆ’ ಎಂದರು.

ADVERTISEMENT

ಕಾರ್ಮಿಕರ ಹೋರಾಟಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ಕಾರ್ಮಿಕ ಸಂಘಟನೆಯ ಮುಖಂಡ ಚಂದ್ರಶೇಖರ ಮೇಟಿ, ‘12 ವರ್ಷಗಳಿಂದಲೂ ಕಾರ್ಖಾನೆಯಲ್ಲಿ ಕನಿಷ್ಠ ವೇತನ ಅಥವಾ ಇತರ ಸೌಲಭ್ಯಗಳಿಲ್ಲದೆ ಕಾರ್ಮಿಕರು ದುಡಿಯುತ್ತಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ, 72 ಕಾರ್ಮಿಕರನ್ನು ಕೋವಿಡ್ ಲಾಕ್‌ಡೌನ್ ದುರ್ಬಳಕೆ ಮಾಡಿಕೊಂಡು ವಜಾಗೊಳಿಸಲಾಗಿದೆ’ ಎಂದು ಆರೋಪಿಸಿದರು.

‘ಎರಡು ತಿಂಗಳ ಹಿಂದೆ ಸಂಸದ ವಿ.ಶ್ರೀನಿವಾಸ ಪ್ರಸಾದ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರತಿ ಕಾರ್ಮಿಕರಿಗೂ ₹ 12 ಲಕ್ಷ ಪರಿಹಾರ ನೀಡಿ ಪ್ರಕರಣ ಬಗೆಹರಿಸಿಕೊಳ್ಳುವುದಾಗಿ ಮತ್ತು ಇದಕ್ಕೆ ಒಂದು ತಿಂಗಳು ಕಾಲಾವಕಾಶ ನೀಡಬೇಕು ಎಂದು ಕೇಳಿಕೊಂಡಿದ್ದರು. ಆದರೆ, 2 ತಿಂಗಳು ಕಳೆದರೂ ಕಾರ್ಖಾನೆ ಆಡಳಿತ ಮಂಡಳಿಯವರು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಇದನ್ನು ಖಂಡಿಸಿ ಹೋರಾಟ ತೀವ್ರಗೊಳಿಸುವುದು ಅನಿವಾರ್ಯವಾಗಿದೆ’ ಎಂದು ಸ್ವರಾಜ್ ಇಂಡಿಯಾ ಪಕ್ಷದ ಮುಖಂಡ ಉಗ್ರನರಸಿಂಹೇಗೌಡ ತಿಳಿಸಿದರು.

ರೈತ ಸಂಘದ ಮುಖಂಡ ಹೊಸಕೋಟೆ ಬಸವರಾಜು, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್, ಮುಖಂಡ ಉಮೇಶ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.