ಎಚ್.ಡಿ.ಕೋಟೆ ಪಟ್ಟಣದಲ್ಲಿರುವ ವರಾಹಿ ಮತ್ತು ಮಾರಮ್ಮನವರ ದೇವಸ್ಥಾನ
ಎಚ್.ಡಿ.ಕೋಟೆ: ವಾರಾಹೀ ಮತ್ತು ಮಾರಮ್ಮನವರ ಜಾತ್ರಾ ಮಹೋತ್ಸವ ಹಾಗೂ ಕೊಂಡೋತ್ಸವವನ್ನು 9 ವರ್ಷಗಳ ನಂತರ ಅದ್ದೂರಿಯಾಗಿ ಆಚರಿಸಲು ಪಟ್ಟಣದ ಜನತೆ ಸಜ್ಜಾಗಿದ್ದಾರೆ.
ಈ ತಿಂಗಳ ಕೊನೆಯಲ್ಲಿ, ಆಷಾಢ ಮಾಸದಲ್ಲಿ ಭಕ್ತಿಭಾವದಿಂದ ಆಚರಿಸಲಿರುವ ಜಾತ್ರಾ ಮಹೋತ್ಸವಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ. ಪಟ್ಟಣ ಸೇರಿ ತಾಲ್ಲೂಕಿನ 28 ಹಳ್ಳಿಗಳು ಕೂಡಿ ಈ ಜಾತ್ರೆಯನ್ನು ನಡೆಸಲಿವೆ.
ಜೂನ್ 30ರಿಂದ ಜುಲೈ 2ರವರೆಗೆ ಜಾತ್ರಾ ನಿಮಿತ್ತ ವಿವಿಧ ಪೂಜೆಗಳು ನಡೆಯಲಿವೆ. ಪಟ್ಟಣದ ಮನೆ ಮನೆಗಳು, ದೇಗುಲಗಳು ವಿದ್ಯುತ್ ದೀಪಾಲಂಕಾರ, ಸುಣ್ಣ ಬಣ್ಣಗಳಿಂದ ಸಿಂಗಾರಗೊಳ್ಳುತ್ತಿವೆ. ಕೊಂಡೋತ್ಸವಕ್ಕೆ ಕೊಂಡ ಸಜ್ಜುಗೊಳಿಸಲು ಕಗ್ಗಲಿ ಸೌದೆಯನ್ನು ಈಗಾಗಲೆ ಸಂಗ್ರಹಿಸಲಾಗಿದೆ.
ಹಾಲುಮತ ಜನಾಂಗದವರು ಹೆಬ್ಬಾಳದಲ್ಲಿರುವ ಬೀರಪ್ಪ ದೇವಸ್ಥಾನದಿಂದ ಉತ್ಸವ ಮೂರ್ತಿಯನ್ನು ತಂದು ಪಟ್ಟಣದ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾ, ಜಾತ್ರೆಯಲ್ಲಿ ವೀರಮಕ್ಕಳ ಕುಣಿತ ನಡೆಸಿಕೊಡುತ್ತಾರೆ.
ಪ್ರತಿ ಜಾತ್ರೆಯ ಸಂದರ್ಭದಲ್ಲೂ ಅವಳಿ ಗ್ರಾಮಗಳಾದ ಕಟ್ಟೆಮನುಗನಹಳ್ಳಿ ಮತ್ತು ಅಲತ್ತಾಳಹುಂಡಿ ಗ್ರಾಮಸ್ಥರು, ಮೂರು ದಿನಗಳು ನಡೆಯಲಿರುವ ಜಾತ್ರೆಯಲ್ಲಿ ನೈವೇದ್ಯ ಮತ್ತು ಪ್ರಸಾದವನ್ನು ತಯಾರಿಸುವ ಸೇವೆ ಮಾಡಲಿದ್ದಾರೆ.
ಜೂನ್ 30ರಂದು ಆಷಾಢ ಶುದ್ಧ ಪಂಚಮಿಯಂದು ಎಡೆ, ಧೂಳು ಪೂಜೆ ಮತ್ತು ಸಂಜೆ ಅರಮನೆ ತಂಪು ಪೂಜೆ ಮಾಡಲಾಗುತ್ತದೆ. ಜುಲೈ1ರ ಮಂಗಳವಾರ ಆಷಾಢ ಶುದ್ಧ ಪೋಷ್ಠಿಯನ್ನು ತಹಶೀಲ್ದಾರ್ ನೆರವೇರಿಸಲಿದ್ದಾರೆ.
ಇದೇ ದಿನ ರಾತ್ರಿ 9 ಗಂಟೆಗೆ ಮಡೆ ಹಾಗೂ ಕೊಂಡದ ಕಗ್ಗಲಿ ಸೌದೆಗೆ ಅಗ್ನಿ ಸ್ಪರ್ಶ ಮಾಡಲಾಗುತ್ತದೆ. ಜು. 2ರ ಬುಧವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಕೊಂಡ ಹಾಯುವ ಕಾರ್ಯಕ್ರಮ ನಡೆಯಲಿದೆ.
ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು, ದೇವಸ್ಥಾನದ ಮುಖ್ಯಸ್ಥ ಪಟೇಲ್ ನಾಗರಾಜ ಶೆಟ್ಟಿ ನೇತೃತ್ವದಲ್ಲಿ ಜಾತ್ರಾ ಕಾರ್ಯಕ್ರಮದ ಸಿದ್ಧತೆಗಳು ಆಗುತ್ತಿವೆ. ಹಬ್ಬ ಮತ್ತು ಜಾತ್ರೋತ್ಸವ ಸಾಂಗವಾಗಿ ನಡೆಯಲು ಎಲ್ಲಾ ಸಮುದಾಯಗಳ ಮುಖಂಡರನ್ನೂ ಒಳ ಗೊಂಡ ಸಮಿತಿಗಳನ್ನು ರಚಿಸಿ ಜವಾಬ್ದಾರಿಗಳನ್ನು ಹಂಚಲಾಗುತ್ತಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಪಟ್ಟಣಕ್ಕೆ ಬರುವ ಭಕ್ತರಿಗಾಗಿ ವಿಶೇಷ ಸೌಲಭ್ಯ ಕಲ್ಪಿಸಲು ಮತ್ತು ಸ್ವಚ್ಛತೆಯನ್ನು ಕಾಪಾಡುವ ಸಲುವಾಗಿ ಪುರಸಭೆಯಿಂದ ಎಲ್ಲ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ಪಿ.ಸುರೇಶ್ ತಿಳಿಸಿದರು.
ಜಾತ್ರೆಯು 9 ವರ್ಷಗಳ ನಂತರ ನಡೆಯುತ್ತಿರುವುದು ವಿಶೇಷ. ಪರಸ್ಥಳದಲ್ಲಿ ನೆಲಸಿರುವವರು ಈ ಜಾತ್ರೆಗೆ ಆಗಮಿಸಿ ತಾಯಿ ಮಾರಮ್ಮನಿಗೆ ಪೂಜೆ ಸಲ್ಲಿಸಲಿದ್ದಾರೆಬಿ.ಎಸ್. ರಂಗಾಯ್ಯಂಗಾರ್ ಮುಖಂಡ
ವಾರಾಹೀ ಮತ್ತು ಮಾರಮ್ಮ ಜಾತ್ರೆಯು ಆರೋಗ್ಯ ಮತ್ತು ಅಭಿವೃದ್ಧಿಗಾಗಿ ತಾಯಿಯಲ್ಲಿ ಭಕ್ತಿಯಿಂದ ಬೇಡುವ ಜಾತ್ರೆಯಾಗಿದೆ. ಕೊಂಡೋತ್ಸವದಲ್ಲಿ ಸಂಭ್ರಮದಿಂದ ಭಾಗವಹಿಸುತ್ತೇವೆಶಿವಮ್ಮ ಚಾಕಹಳ್ಳಿಕೃಷ್ಣನಾಯಕ ಎಚ್.ಡಿ.ಕೋಟೆ ಪಟ್ಟಣದ ಪುರಸಭಾಧ್ಯಕ್ಷೆ
ಪಟ್ಟಣದ ವರದರಾಜಸ್ವಾಮಿ ದೇವಸ್ಥಾನದಿಂದ ವಾರಾಹೀ ಮತ್ತು ಮಾರಮ್ಮನಿಗೆ ಜಾತ್ರಾಮಹೋತ್ಸವದ ಅಂಗವಾಗಿ ಹಿಂದಿನ ಪದ್ಧತಿಯಂತೆ ಸೋಗಲು ನೀಡಲಾಗುತ್ತದೆ. ವರದರಾಜಸ್ವಾಮಿಗೆ ವರಾಹಿ ಸಹೋದರಿ ಎಂದು ನಮ್ಮ ಹಿರಿಯರು ಹೇಳುತ್ತಿದ್ದರುತಿರುಮಲಾಚಾರ್ ಕಡಂಬಿ ವರದರಾಜಸ್ವಾಮಿ ದೇವಸ್ಥಾನ ಅರ್ಚಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.