ಪಿರಿಯಾಪಟ್ಟಣದಲ್ಲಿ ಶನಿವಾರ ನಡೆದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು
ಪಿರಿಯಾಪಟ್ಟಣ: ‘ಮಡಿವಾಳ ಮಾಚಿದೇವರ ಕಾಯಕ ನಿಷ್ಠೆ ಅಪಾರವಾದದ್ದು’ ಎಂದು ಶಿಕ್ಷಕ ಪುಟ್ಟಮಾದ್ದಯ್ಯ ತಿಳಿಸಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಜಾತಿ, ಮತ, ಲಿಂಗ ಭೇದವನ್ನು ತಿರಸ್ಕರಿಸಿದ ಬಸವಣ್ಣನವರ ಸಾಮಾಜಿಕ ಕ್ರಾಂತಿಗೆ ತಮ್ಮನ್ನು ತೊಡಗಿಸಿಕೊಂಡರು. ವಚನ ಸಾಹಿತ್ಯದ ಹಸ್ತ ಪ್ರತಿಗಳನ್ನು ರಕ್ಷಣೆ ಮಾಡುವ ಜವಾಬ್ದಾರಿಯನ್ನು ಹೊಂದಿದ್ದ ಇವರು, ಬಸವಣ್ಣನವರು ನಿರ್ಮಿಸಿದ್ದ ಅನುಭವ ಮಂಟಪದಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು. ಈ ಮೂಲಕ ಸಾಮಾಜಿಕ ಪರಿವರ್ತನೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ’ ಎಂದರು.
‘ಪ್ರತಿಯೊಬ್ಬರೂ ಮಡಿವಾಳ ಮಾಚಿದೇವರ ತತ್ವ, ಆದರ್ಶಗಳನ್ನು ಪಾಲಿಸಬೇಕು’ ಎಂದು ತಿಳಿಸಿದರು.
ಬಿಇಒ ರವಿ ಪ್ರಸನ್ನ ಮಾತನಾಡಿ, ‘ಸಮಾಜದ ಸುಧಾರಣೆಗೆ ಶ್ರಮಿಸಿದ ಪ್ರತಿಯೊಬ್ಬ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪ್ರತಿಯೊಬ್ಬರಿಗೂ ಶಿಕ್ಷಣದ ಅನಿವಾರ್ಯ ಇದ್ದು, ಉನ್ನತ ಮಟ್ಟದ ಶೈಕ್ಷಣಿಕ ತರಬೇತಿಗೆ ಮಕ್ಕಳನ್ನು ಸೇರಿಸಬೇಕು, ಇದಕ್ಕಾಗಿ ಸರ್ಕಾರ ಸಾಕಷ್ಟು ಸಹಕಾರ ಮತ್ತು ಸವಲತ್ತುಗಳನ್ನು ನೀಡುತ್ತಿದೆ, ಇದನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿರಸ್ತೇದಾರ್ ಶಕೀಲಾ ಭಾನು, ಮಡಿವಾಳ ಸಮುದಾಯದ ಗೌರವಾಧ್ಯಕ್ಷ ಕೃಷ್ಣ ಶೆಟ್ಟಿ, ಅಧ್ಯಕ್ಷ ಮಾದೇಶ್ ಕುಮಾರ್, ಉಪಾಧ್ಯಕ್ಷ ನಾಗರಾಜು, ಕಾರ್ಯದರ್ಶಿ ವೆಂಕಟೇಶ್, ಸಹ ಕಾರ್ಯದರ್ಶಿ ಕೆ.ಎಸ್. ಗಣೇಶ್, ಮುಖಂಡರಾದ ರಾಜ ಶೆಟ್ಟಿ, ಪ್ರದೀಪ್, ವಸಂತ, ಸುರೇಶ, ರಾಜೇಶ್, ಸ್ವಾಮಿ, ಶಿವಣ್ಣ ಶೆಟ್ಟಿ, ಪ್ರಸನ್ನ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.