ಎಚ್.ಡಿ.ಕೋಟೆ: ‘ಎಸ್‌ಟಿ ಸಮುದಾಯದ ಪ್ರಭಾವಿ ನಾಯಕರ ರಾಜಕೀಯ ಭವಿಷ್ಯವನ್ನು ರಾಜ್ಯ ಕಾಂಗ್ರೆಸ್ ಕೊನೆಗಾಣಿಸುತ್ತಿದೆ’ ಎಂದು ಜೆಡಿಎಸ್ ಮುಖಂಡ ಕೆ.ಎಂ.ಕೃಷ್ಣನಾಯಕ ಆರೋಪಿಸಿದರು.
ತಾಲ್ಲೂಕಿನ ಮಾದಾಪುರದಲ್ಲಿ ಭಾನುವಾರ ನಡೆದ ನಾಯಕ ಸಮುದಾಯದ ಸಭೆಯಲ್ಲಿ ಮಾತನಾಡಿದ ಅವರು, ‘ರಮೇಶ್ ಜಾರಕಿಹೊಳಿ ವಿರುದ್ಧ ಷಡ್ಯಂತ್ರ ಮಾಡಿದ್ದಲ್ಲದೇ, ವಾಲ್ಮೀಕಿ ಹಗರಣದ ಕೋಟ್ಯಂತರ ಹಗರಣದ ಮೂಲಕ ಬಿ.ನಾಗೇಂದ್ರ ಅವರನ್ನು ಜೈಲು ಸೇರುವಂತೆ ಮಾಡಿದ್ದಾರೆ. ಪ್ರಸ್ತುತ ಸಹಕಾರ ಸಚಿವ ರಾಜಣ್ಣ ಅವರ ರಾಜಕೀಯವನ್ನು ಕೊನೆಗಾಣಿಸಲು ಸಂಚು ರೂಪಿಸಲಾಗಿದೆ’ ಎಂದು ದೂರಿದರು.
ತಾಲ್ಲೂಕಿನ ಸ್ಥಳೀಯ ನಾಯಕ ದೊಡ್ಡನಾಯಕ ಮತ್ತು ಚಿಕ್ಕವೀರನಾಯಕ ಅವರನ್ನು ಕಡೆಗಣಿಸಿದ್ದಾರೆ. ಆದ್ದರಿಂದ ನಾಯಕ ಸಮುದಾಯದವರು ಜಾಗೃತರಾಗಬೇಕು ಎಂದರು.
ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ, ವಾಲ್ಮೀಕಿ ಭವನ ನಿರ್ಮಾಣಕ್ಕೆ ಜಾಗ ನೀಡಿದ್ದಾರೆ. ಭವನ ನಿರ್ಮಾಣದ ಕಾಮಗಾರಿ ಕಳೆದ ಹದಿನೈದು ವರ್ಷಗಳಿಂದಲೂ ಕುಂಟುತ್ತಾ ಸಾಗುತ್ತಿದೆ. ಸಿಎಂ ಸೇರಿದಂತೆ ಕೆಲವು ಸಚಿವರು ಜಿಲ್ಲೆಯವರೇ ಆಗಿದ್ದರೂ ಹೆಚ್ಚಿನ ಅನುದಾನ ತಂದು ಭವನ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿಲ್ಲ ಎಂದು ಕಿಡಿಕಾರಿದರು.
‘ಪ್ರತಿ ಚುನಾವಣೆ ಸಂದರ್ಭದಲ್ಲಿ ವಾಲ್ಮೀಕಿ ಭವನ ತೋರಿಸಿ ಪ್ರಚಾರ ಪಡೆಯುತ್ತಿದ್ದಾರೆ. ತಾಲ್ಲೂಕಿನ ಜನರು ಕಳೆದ 15 ವರ್ಷಗಳಿಂದ ಒಂದೇ ಕುಟುಂಬದವರಿಗೆ ಅಧಿಕಾರ ನೀಡಿದ್ದಾರೆ. ಮೀಸಲಾತಿಯ ನೆರಳಿನಲ್ಲಿ ಜನಾಂಗದವರಿಂದ ಮತ ಪಡೆದು, ವಾಲ್ಮೀಕಿ ಸಮುದಾಯದ ಜನರ ಅಭಿವೃದ್ಧಿ ಕಡೆಗಾಣಿಸಿದ್ದಾರೆ’ ಎಂದರು.
‘ಅನಿಲ್ ಚಿಕ್ಕಮಾದುಗೆ ಜಂಗಲ್ ಲಾಡ್ಜ್ ಅಂಡ್ ರೆಸಾರ್ಟ್‌ನ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡಿದ್ದರೂ, ತಾಲ್ಲೂಕಿನ ಯುವಕರಿಗೆ ಉದ್ಯೋಗ ನೀಡುವ ಬದಲು ಪ್ರತಿ ವರ್ಷ ಐದಾರು ರೆಸಾರ್ಟ್ ಅಕ್ರಮ ನಿರ್ಮಾಣಕ್ಕೆ ಬೆಂಬಲ ನೀಡುತ್ತಿದ್ತಾರೆ. ರಸ್ತೆಗಳು ಸರಿಯಿಲ್ಲ ಹೀಗೆ ಹಲವು ಸಮಸ್ಯೆಗಳು ಕಾಡುತ್ತಿವೆ’ ಎಂದು ಆರೋಪಿಸಿದರು.
‘ಶಾಸಕ ಅನಿಲ್ ಚಿಕ್ಕಮಾದು ಅಧಿಕಾರ ದುರುಪಯೋಗ ಪಡಿಸಿಕೊಂಡು ಸಹಕಾರ ಸಂಘಗಳ ಮತದಾನದ ಹಕ್ಕು ಕಸಿದಿದ್ದಾರೆ. ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಲಕ್ಷ್ಮೀಪ್ರಸಾದ್ ಸಮಬಲ ಸಾಧಿಸಿದ್ದಾರೆ. ಕ್ಷೇತ್ರದಲ್ಲಿ ಶಾಸಕರ ವಿರೋಧಿ ಅಲೆ ಸೃಷ್ಟಿಯಾಗಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ’ ಎಂದರು.
ಜೆಡಿಎಸ್ ತಾಲ್ಲೂಕು ಅಧ್ಯಕ್ಷ ರಾಜೇಂದ್ರ, ಸರಗೂರು ಅಧ್ಯಕ್ಷ ಗೋಪಾಲಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.