
ಮೈಸೂರು: ‘ಜಾತ್ಯತೀತ ಜನತಾದಳ (ಜೆಡಿಎಸ್) ಸ್ಥಾಪನೆಯಾಗಿ 25 ವರ್ಷ ತುಂಬಿದ ಅಂಗವಾಗಿ ನ. 21 ಹಾಗೂ 22ರಂದು ಜಿಲ್ಲೆಯಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಪಕ್ಷದ ಕಾರ್ಯಾಧ್ಯಕ್ಷ ಸಾ.ರಾ. ಮಹೇಶ್ ತಿಳಿಸಿದರು.
‘ 25 ವರ್ಷ ಕಾಲ ಪಕ್ಷ ನಡೆದು ಬಂದ ದಾರಿ, ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಸರ್ಕಾರದ ಅವಧಿಯಲ್ಲಿ ಮಾಡಿರುವ ಸಾಧನೆಗಳನ್ನು ಮನವರಿಕೆ ಮಾಡಿಕೊಡಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಮೈಸೂರು ನಗರ ಮತ್ತು ಗ್ರಾಮಾಂತರ ಪ್ರದೇಶದ ಆಯಾಯ ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯಕ್ರಮ ನಡೆಯಲಿದೆ. ಹಿರಿಯ ಮುಖಂಡರು, ಕಾರ್ಯಕರ್ತರನ್ನು ಭೇಟಿ ಮಾಡಿ ಸನ್ಮಾನಿಸುವುದು, ಸ್ಥಳೀಯ ಆಸ್ಪತ್ರೆಗಳಿಗೆ ತೆರಳಿ ಹಣ್ಣು ಹಂಪಲು ವಿತರಣೆ, ದೇವಸ್ಥಾನದಲ್ಲಿ ಪೂಜೆ ಮೊದಲಾದ ಕಾರ್ಯಗಳು ನಡೆಯಲಿವೆ’ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
‘ಕರ್ನಾಟಕದಲ್ಲಿ ಎಚ್.ಡಿ.ದೇವೇಗೌಡರು ಪ್ರಾದೇಶಿಕ ಪಕ್ಷವನ್ನು ಕಟ್ಟಿ ಸಂಘಟಿಸಿದರು. ಜಿಲ್ಲೆಯವರೇ ಆಗಿರುವ ನಾಯಕರೊಬ್ಬರು ಕಟ್ಟಿದ ಪಕ್ಷ ಎಷ್ಟು ಸ್ಥಾನಗಳನ್ನು ಗೆದ್ದಿತು? ಯಾವ ಜಿಲ್ಲೆಯಲ್ಲಿ ಗೆದ್ದು ಬಂದರು ಎಂಬುದು ಗೊತ್ತಿದೆ. ಕರ್ನಾಟಕದಲ್ಲಿ ಜೆಡಿಎಸ್ ಕಥೆ ಮುಗಿದೇ ಹೋಯಿತೆಂದು ಹೇಳುತ್ತಿದ್ದ ನಾಯಕರು ಎರಡಂಕಿ ದಾಟಲ್ಲ ಎನ್ನುತ್ತಿದ್ದರು. ಈಗ ಬಿಹಾರ ರಾಜ್ಯದಲ್ಲಿ ಒಂದಂಕಿ ದಾಟಲು ಸಾಧ್ಯವಾಗಿಲ್ಲ. ಕಾಂಗ್ರೆಸ್ ಮುಳುಗಿ ಹೋಗಿದೆ’ ಎಂದು ಟೀಕಿಸಿದರು.
‘ಜೆಡಿಎಸ್ ರಾಷ್ಟ್ರೀಯ, ರಾಜ್ಯ, ಯುವ ಘಟಕದ ಅಧ್ಯಕ್ಷರನ್ನು ಹೊರತುಪಡಿಸಿ ಎಲ್ಲ ಪದಾಧಿಕಾರಿಗಳನ್ನು ಬದಲಾವಣೆ ಮಾಡಿ ಹೊಸದಾಗಿ ನೇಮಕ ಮಾಡಲಾಗುತ್ತದೆ. ಜಿಲ್ಲೆ, ಮೈಸೂರು ನಗರದ ಅಧ್ಯಕ್ಷರು, ಪದಾಧಿಕಾರಿಗಳನ್ನು ಬದಲಾಯಿಸಿ ಪಕ್ಷದ ಸಂಘಟನೆಗೆ ಸಮಯ ನೀಡುವಂತಹ ಮುಖಂಡರಿಗೆ ಜವಾಬ್ದಾರಿ ಕೊಡಲಾಗುತ್ತದೆ’ ಎಂದರು.
‘ಶಾಸಕ ಜಿ.ಟಿ.ದೇವೇಗೌಡರು ಹಿರಿಯರು. ಈಗ ಸಹಕಾರ ಸಪ್ತಾಹದ ಕಾರ್ಯಕ್ರಮದಲ್ಲಿ ಬ್ಯುಸಿ ಇದ್ದಾರೆ. ಪಕ್ಷದ ಸಭೆ, ಸಮಾವೇಶಗಳಿಗೆ ಯಾವಾಗಲೂ ಆಹ್ವಾನ ನೀಡಲಾಗುತ್ತದೆ. ಅವರ ಪುತ್ರ, ಶಾಸಕ ಜಿ.ಡಿ.ಹರೀಶ್‌ಗೌಡ ಪಕ್ಷದ ಸಂಘಟನೆಯಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿಲ್ಲವೇ’ ಎಂದು ಪ್ರಶ್ನಿಸಿದರು.
‘ರಾಜ್ಯದಲ್ಲಿ ಆದಾಯ, ಖರ್ಚುವೆಚ್ಚದ ಬಗ್ಗೆ ಮುಖ್ಯಮಂತ್ರಿಗಳು ಶ್ವೇತಪತ್ರ ಹೊರಡಿಸಬೇಕು. ಆದಾಯವಿಲ್ಲದೆ ಹಣ ಬಿಡುಗಡೆಯಾಗುತ್ತಿಲ್ಲ. ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ಭ್ರಷ್ಟಾಚಾರದಲ್ಲಿ ಪರ್ಸೆಂಟೇಜ್ ಎಷ್ಟಿದೆ ಎಂಬ ಮಾತನ್ನು ಕೇಳಲಾಗುತ್ತಿತ್ತು. ಈಗ ಎಷ್ಟು ಪ್ರಾಮಾಣಿಕತೆ ಇದೆ ಎಂಬುದನ್ನು ಹುಡುಕಬೇಕಿದೆ’ ಎಂದರು.
ಪಕ್ಷ ಬಲಪಡಿಸಲು ಸಂಘಟನೆ: ಶಾಸಕ ಜಿ.ಡಿ.ಹರೀಶ್‌ಗೌಡ ಮಾತನಾಡಿ ‘ಮುಂಬರುವ ದಿನಗಳಲ್ಲಿ ಎದುರಾಗುವ ಚುನಾವಣೆ, ಪಕ್ಷದ ಸಂಘಟನೆಗಾಗಿ ಹಲವಾರು ಕಾರ್ಯಕ್ರಮಗಳ ಮೂಲಕ ಪಕ್ಷವನ್ನು ಸಂಘಟಿಸಲಾಗುವುದು. ಪಕ್ಷದ ಜನಪರ ಯೋಜನೆಗಳನ್ನು ತಿಳಿಸಲಾಗುವುದು. ಜಿಲ್ಲೆಯ ಪದಾಧಿಕಾರಿಗಳ ಬದಲಾವಣೆ, ಸಂಘಟನೆಗೆ ಅನುಸರಿಸಬೇಕಾದ ಕ್ರಮಗಳಬಗ್ಗೆ ನಿರ್ಧರಿಸಲಾಗಿದೆ’ ಎಂದರು.
ವಿಧಾನ ಪರಿಷತ್ ಸದಸ್ಯರಾದ ಸಿ.ಎನ್.ಮಂಜೇಗೌಡ, ಕೆ.ವಿವೇಕಾನಂದ, ಮಾಜಿ ಶಾಸಕ ಎಂ.ಅಶ್ವಿನ್ ಕುಮಾರ್, ಮಾಜಿ ಮೇಯರ್‌ಗಳಾದ ಆರ್.ಲಿಂಗಪ್ಪ, ಎಂ.ಜೆ.ರವಿಕುಮಾರ್, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಸ್‌ಬಿಎಂ ಮಂಜು, ಕಾರ್ಯಾಧ್ಯಕ್ಷ ಪ್ರಕಾಶ್ ಪ್ರಿಯದರ್ಶನ್, ಎನ್.ಆರ್.ಕ್ಷೇತ್ರದ ಅಧ್ಯಕ್ಷ ರಾಮು, ಚಾಮರಾಜ ಕ್ಷೇತ್ರದ ಅಧ್ಯಕ್ಷ ಮಂಜುನಾಥ್, ಮುಖಂಡರಾದ ಎನ್.ಆರ್.ರವಿಚಂದ್ರೇಗೌಡ, ಸೋಮು, ರಾಮ, ಗಂಗಾಧರಗೌಡ, ಸುನಿಲ್, ಪ್ರಶಾಂತ್, ಫಾಲ್ಕಾನ್ ಬೋರೇಗೌಡ ಇದ್ದರು.
‘ಸಫಾರಿ ಬಂದ್ ಆದೇಶ ಹಿಂಪಡೆಯಿರಿ’
‘ಬಂಡೀಪುರ–ನಾಗರಹೊಳೆಯಲ್ಲಿ ಪ್ರವಾಸಿಗರ ಸಫಾರಿ ಬಂದ್ ಆದೇಶವನ್ನು ಸರ್ಕಾರ ಹಿಂಪಡೆಯಬೇಕು’ ಎಂದು ಸಾ.ರಾ. ಮಹೇಶ್ ಒತ್ತಾಯಿಸಿದರು.
‘ಮಾನವ-ವನ್ಯಪ್ರಾಣಿಗಳ ನಡುವಿನ ಸಂಘರ್ಷ ತಡೆಯಲು ವೈಜ್ಞಾನಿಕ ಪರಿಹಾರ ಕ್ರಮಗಳನ್ನು ಕೈಗೊಳ್ಳುವ ಬದಲಿಗೆ ಸಫಾರಿ ಬಂದ್ ಮಾಡಿರುವುದು ಸರಿಯಲ್ಲ. ಪ್ರಾಣಿಗಳ ರಕ್ಷಣೆ ಮುಖ್ಯ. ಮಾನವನ ಜೀವವೂ ಮುಖ್ಯ. ಪ್ರವಾಸೋದ್ಯಮವನ್ನೇ ನಂಬಿ ಸಾವಿರಾರು ಜನ ಜೀವನ ಮಾಡುತ್ತಾರೆ. ಸಫಾರಿ ಬಂದ್ ಮಾಡಿರುವುದರಿಂದ ದೊಡ್ಡ ಹೊಡೆತ ಬಿದ್ದಿದೆ. ಅಕ್ರಮ ರೆಸಾರ್ಟ್‌ಗಳನ್ನು ಬಂದ್ ಮಾಡಿದರೆ ಯಾರ ಅಭ್ಯಂತರವಿಲ್ಲ. ಸಿ.ಎಂ. ಹೇಳಿದಂತೆ ಮಾಡಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.