
ಪ್ರಜಾವಾಣಿ ವಾರ್ತೆ
ಮೈಸೂರು: ನಗರದ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಶುಕ್ರವಾರ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ವಿವಿಧ ಬ್ಯಾಂಕ್‌ಗಳಲ್ಲಿ ಉದ್ಯೋಗ ಪಡೆದ 86 ಮಂದಿಗೆ ನೇಮಕಾತಿ ಪತ್ರವನ್ನು ವಿತರಿಸಲಾಯಿತು. ನೌಕರಿ ಪಡೆದವರು ಸಂಭ್ರಮಿಸಿದರು.
ದೇಶದ 40 ಸ್ಥಳಗಳಲ್ಲಿ ಆಯೋಜಿಸಿದ್ದ 17ನೇ ‘ರಾಷ್ಟ್ರೀಯ ಉದ್ಯೋಗ ಮೇಳ’ಕ್ಕೆ ಪ್ರಧಾನಿ ನರೇಂದ್ರ ಮೋದಿ ವರ್ಚ್ಯುವಲ್ ಮೂಲಕ ಚಾಲನೆ ನೀಡಿದ ನಂತರ, ಮೈಸೂರು ವಿಭಾಗದಲ್ಲಿ ನೇಮಕಗೊಂಡ ಅಭ್ಯರ್ಥಿಗಳಿಗೆ ಶಾಸಕ ಟಿ.ಎಸ್.ಶ್ರೀವತ್ಸ ಪತ್ರವನ್ನು ವಿತರಿಸಿ ಅಭಿನಂದಿಸಿದರು.
ದೇವರ ಕೆಲಸ: ‘ಸರ್ಕಾರಿ ಕೆಲಸವೆಂದರೆ ಅದು ದೇವರ ಕೆಲಸ ಎಂಬ ಉಕ್ತಿಯನ್ನು ಉದ್ಯೋಗ ಪಡೆದವರು ಕಾರ್ಯರೂಪಕ್ಕೆ ತರಬೇಕು. ಸಾರ್ವಜನಿಕರು ಸೇವೆಯನ್ನೇ ಬಯಸುತ್ತಾರೆ. ಅವರ ಕೆಲಸವನ್ನು ಮಾಡುವುದು ದೇವರ ಕೆಲಸವೇ. ಅದರಿಂದ ಹುದ್ದೆಗೂ ಘನತೆ, ಗೌರವಗಳು ಸಿಗುತ್ತವೆ’ ಎಂದು ಅಂಚೆ ಇಲಾಖೆಯ ರಾಜ್ಯ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಕೆ.ಪ್ರಕಾಶ್ ಹೇಳಿದರು.
‘ಯಾವುದೇ ಹುದ್ದೆಯಾದರೂ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಉನ್ನತ ಹುದ್ದೆಗಳಿಗೆ ಏರಲು ಅಗತ್ಯ ಕೌಶಲಗಳನ್ನು ಸಿದ್ಧಿಸಿಕೊಳ್ಳಬೇಕು. ಇಲಾಖಾ ತರಬೇತಿಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ತಂಡವಾಗಿ ಕರ್ತವ್ಯ ನಿರ್ವಹಿಸಬೇಕು’ ಎಂದು ಸಲಹೆ ನೀಡಿದರು.
ಸಮಸ್ಯೆ ಪೆಟ್ಟಿಗೆ ಆಗಬೇಡಿ: ‘ಸರ್ಕಾರಿ ಕೆಲಸ ಪಡೆದವರು ಸಮಸ್ಯಾ ಪೆಟ್ಟಿಗೆ ಆಗದೇ, ಸಲಹಾ ಪೆಟ್ಟಿಗೆ ಆಗಬೇಕು. ಯಾವಾಗಲೂ ದೂರುತ್ತಾ ಕೂರದೇ ಜನರ ಕೆಲಸಗಳನ್ನು ಸುಗಮಗೊಳಿಸಲು ಅಗತ್ಯ ಜ್ಞಾನ, ಬುದ್ಧಿವಂತಿಕೆಯನ್ನು ಉಪಯೋಗಿಸಬೇಕು’ ಎಂದು ಆಯಿಷ್ ನಿರ್ದೇಶಕಿ ಪ್ರೊ.ಎಂ.ಪುಷ್ಪಾವತಿ ಹೇಳಿದರು.
‘ಕರ್ತವ್ಯ ನಿಷ್ಠೆಯಿಂದ ದುಡಿದರೆ ಪ್ರಶಂಸೆಯ ಸುರಿಮಳೆಯಾಗುತ್ತದೆ. ಸಹನೆ ಹಾಗೂ ತಾಳ್ಮೆಯಿಂದ ನಡೆದುಕೊಳ್ಳಬೇಕು. ದ್ವೇಷದ ವಾತಾವರಣ ನಿರ್ಮಿಸಲು ಬುದ್ಧಿವಂತಿಕೆ ಉಪಯೋಗಿಸದೇ ಹಿರಿಯರ ಅನುಭವ ಬಳಸಿಕೊಳ್ಳುವ, ಕಿರಿಯರನ್ನು ಉತ್ತೇಜಿಸುವ ಕೆಲಸವನ್ನು ಮಾಡಬೇಕು. ಆಗ ಮಾತ್ರವೇ ಇಲಾಖೆಯಷ್ಟೇ ಅಲ್ಲ, ದೇಶದ ಅಭಿವೃದ್ಧಿಗೂ ವೇಗ ಬರುತ್ತದೆ’ ಎಂದು
ಅಭಿಪ್ರಾಯಪಟ್ಟರು.
‘ಜನರ ತೆರಿಗೆ ಹಣದಿಂದ ಸರ್ಕಾರಿ ಸಂಸ್ಥೆಗಳು ನಡೆಯುತ್ತಿವೆ ಎಂಬುದನ್ನು ಸದಾ ನೆನಪಿನಲ್ಲಿಡಬೇಕು. ಕಾನೂನು ನಿಯಮಗಳಿಗೆ ಅನುಗುಣವಾಗಿಯೇ ನಡೆದುಕೊಳ್ಳಬೇಕು. ಪ್ರಾಮಾಣಿಕತೆಯ ಸೇವಾ ಮನೋಭಾವ ಇದ್ದರೆ ಮಾನವೀಯ ಸಮಾಜವನ್ನು ಕಟ್ಟಲು ಸಾಧ್ಯವಾಗುತ್ತದೆ’ ಎಂದರು.
ರೈಲ್ವೆ, ಆಯಿಷ್, ಎಸ್‌ಬಿಐ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಗಿಟ್ಟಿಸಿದ ರಾಜೀವ್ ಕುಮಾರ್, ಅನುಜ್ ಕುಮಾರ್, ಮಹಾವೀರ್ ಸಿಂಗ್, ವಿಪಿನ್ ಕುಮಾರ್, ಮನೀಷ್ ಸೇರಿದಂತೆ ಹಲವು ಮಂದಿಗೆ ಸಾಂಕೇತಿಕವಾಗಿ ನೌಕರಿ ಪತ್ರ ನೀಡಲಾಯಿತು.
ದಕ್ಷಿಣ ಕರ್ನಾಟಕ ವಿಭಾಗದ ಪೋಸ್ಟ್ ಮಾಸ್ಟರ್ ಜನರಲ್ ಚಂದ್ರಶೇಖರ್ ಕಾಕುಮನು, ನೈರುತ್ಯ ರೈಲ್ವೆ ಮೈಸೂರು ವಿಭಾಗೀಯ ಹೆಚ್ಚುವರಿ ಡಿಆರ್‌ಎಂ ಶಮ್ಮಾಸ್ ಹಮೀದ್ ಪಾಲ್ಗೊಂಡಿದ್ದರು.
Highlights - ಸರ್ಕಾರ ಕೆಲಸ ದೇವರ ಕೆಲಸ ನಾಗರಿಕರ ಸಮಸ್ಯೆಗೆ ಸ್ಪಂದಿಸಬೇಕು ಹಿರಿಯರಿಗೆ ಅನುಭವ ಬಳಸಿಕೊಳ್ಳಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.