ADVERTISEMENT

ಪತ್ರಕರ್ತ ಕೆ.ವಿ.ಶ್ರೀನಿವಾಸನ್‌ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 16:03 IST
Last Updated 6 ಫೆಬ್ರುವರಿ 2026, 16:03 IST
<div class="paragraphs"><p>ಕೆ.ವಿ.ಶ್ರೀನಿವಾಸನ್‌</p></div>

ಕೆ.ವಿ.ಶ್ರೀನಿವಾಸನ್‌

   

ಮೈಸೂರು: ಗಾಂಧಿವಾದಿ, ಪತ್ರಕರ್ತ ಕೆ.ವಿ.ಶ್ರೀನಿವಾಸನ್‌ (81) ಅವರು ಹುಣಸೂರಿನ ಕಲ್ಕುಣಿಕೆ ಗ್ರಾಮದಲ್ಲಿ ವಯೋಸಹಜ ಅನಾರೋಗ್ಯದಿಂದ ಶುಕ್ರವಾರ ನಿಧನರಾದರು.

ಅವಿವಾಹಿತರಾಗಿದ್ದ ಅವರು, 4 ದಶಕಗಳ ಕಾಲ ನಗರದ ನಾರಾಯಣಶಾಸ್ತ್ರಿ ರಸ್ತೆಯ ‘ಅನಾಥಾಲಯ’ದ ಕೊಠಡಿ ಬಾಡಿಗೆಗೆ ಪಡೆದು ಅಲ್ಲಿ ವಾಸವಿದ್ದರು. ಕೋವಿಡ್‌ ವೇಳೆ ಸ್ವಗ್ರಾಮಕ್ಕೆ ಮರಳಿದ್ದರು. ವೃತ್ತಿ ಬದ್ಧತೆ, ಸಾಮಾಜಿಕ ಕಳಕಳಿ ಮತ್ತು ಕಿರಿಯರಿಗೆ ನೀಡುತ್ತಿದ್ದ ಪ್ರೋತ್ಸಾಹದ ಕಾರಣದಿಂದಾಗಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ ‘ಬ್ರದರ್‌’ ಎಂದೇ ಹೆಸರಾಗಿದ್ದರು. 

ADVERTISEMENT

ತಿಂಗಳ ಹಿಂದೆಯಷ್ಟೇ ಅನಾರೋಗ್ಯ ಕಾರಣ ನಗರದ ಗೋಪಾಲಗೌಡ ಆಸ್ಪ‍ತ್ರೆಗೆ ದಾಖಲಾಗಿದ್ದರು.

ಅಂತ್ಯಕ್ರಿಯೆ ಶನಿವಾರ (ಫೆ.7) ಸ್ವಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. 

1944ರ ಮಾರ್ಚ್ 6ರಂದು ಜನಿಸಿದ ಅವರು ಎಂ.ಎ ಪತ್ರಿಕೋದ್ಯಮ ಹಾಗೂ ಎಲ್‌ಎಲ್‌ಬಿ ಪದವಿ ಪಡೆದಿದ್ದರು. ಭಾರತೀಯ ಹಾಗೂ ಪಾಶ್ಚಾತ್ಯ ತತ್ವಶಾಸ್ತ್ರದ ಸರ್ಟಿಫಿಕೇಟ್‌ ಕೋರ್ಸ್‌ ಮಾಡಿದ್ದರು. ಗಾಂಧಿ ತತ್ವದಲ್ಲಿ ಅಪಾರ ಒಲವಿದ್ದ ಅವರು, ಗಾಂಧಿ ಅಧ್ಯಯನದಲ್ಲಿ ಡಿಪ್ಲೊಮಾ ಮಾಡಿದ್ದರು. ‘ಪತ್ರಿಕೋದ್ಯಮಿಯಾಗಿ ಗಾಂಧೀಜಿ’ ಮತ್ತು ‘ಸಹ ಬರಹಗಾರರ ಜಾಹೀರಾತು’ ಕೃತಿಗಳನ್ನು ಬರೆದಿದ್ದಾರೆ. 

ಪ್ರಸಿದ್ಧ ಪತ್ರಕರ್ತರನ್ನು ಸೃಷ್ಟಿಸಿದ ‘ಮಹಾನಂದಿ’ ಪತ್ರಿಕೆಯನ್ನು ಸ್ಥಾಪಿಸಿದ್ದ ಅವರು, ‘ನವಧ್ವನಿ’ ಸೇರಿದಂತೆ ಮೈಸೂರಿನ ಅನೇಕ ಪತ್ರಿಕೆಗಳನ್ನು ನಡೆಸಿದರು. ‘ಸಂಕ್ರಾಂತಿ’, ‘ಅಶೋಕ’, ‘ವಿಜಯ’, ‘ವರ್ತಮಾನ’ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದರು. ಆಕಾಶವಾಣಿ ವರದಿಗಾರರಾಗಿಯೂ ಕಾರ್ಯನಿರ್ವಹಿಸಿದ್ದರು. ಜನ ಚಳವಳಿಯಲ್ಲೂ ಸಕ್ರಿಯವಾಗಿ ಪಾಲ್ಗೊಂಡಿದ್ದರು. 70ರ ದಶಕದಲ್ಲಿ ಜಯಪ್ರಕಾಶ್‌ ನಾರಾಯಣ್‌ ಮುನ್ನಡೆಸಿದ ಚಳವಳಿಗಳಲ್ಲಿ ಪಾಲ್ಗೊಂಡಿದ್ದರಲ್ಲದೇ ಹಿಂದಿ ವಿರೋಧಿ ಚಳವಳಿಯಲ್ಲಿ ಜೈಲುವಾಸ ಅನುಭವಿಸಿದ್ದರು. 

ಪತ್ರಕರ್ತರ ಅಭ್ಯುದಯಕ್ಕಾಗಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಜಯಪ್ರಕಾಶ ನಾರಾಯಣ, ಗಾಂಧೀಜಿ, ಪೋಷಕರಾದ ಜಾನಕಮ್ಮ– ವೆಂಕಟಪ್ಪ ಗೌಡ, ಎಪಿಜೆ ಅಬ್ದುಲ್‌ ಕಲಾಂ, ಪ್ರೊ.ಕೃಷ್ಣಮೂರ್ತಿ ನಾಡಿಗ, ಕೆ.ವಿ.ಶ್ರೀನಿವಾಸನ್‌, ಎಚ್‌.ಡಿ.ದೇವೇಗೌಡ ಹೆಸರಿನಲ್ಲಿ ಪ‍್ರಶಸ್ತಿಗಳನ್ನು ಸ್ಥಾಪಿಸಿದ್ದರು. ಅವರು ಸ್ಥಾಪಿಸಿದ್ದ ದತ್ತಿ ನಿಧಿಯಲ್ಲಿ ಯುವ ಹಾಗೂ ಅನುಭವಿ ಪತ್ರಕರ್ತರಿಗೆ ಸಂಘದಿಂದ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಗಿತ್ತು. ಸಂಘಕ್ಕೆ ಪತ್ರಿಕೋದ್ಯಮ ಕುರಿತ ಪುಸ್ತಕಗಳು, ಪರಿಕರಗಳನ್ನು ಕೊಡುಗೆಯಾಗಿ ನೀಡಿದ್ದರು. ನಿವೃತ್ತರಾದ ನಂತರವೂ ಕನ್ನಡ ಹಾಗೂ ಇಂಗ್ಲಿಷ್‌ನ ಹಲವು ದಿನಪತ್ರಿಕೆಗಳನ್ನು ಓದುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.