ADVERTISEMENT

ಜೆಎಸ್‌ಎಸ್‌–ಎಎಚ್‌ಇಆರ್‌ ಘಟಿಕೋತ್ಸವ ನಾಳೆ

ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಭಾಗಿ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 4:43 IST
Last Updated 8 ನವೆಂಬರ್ 2025, 4:43 IST
ಸಿ.ಪಿ. ರಾಧಾಕೃಷ್ಣನ್‌
ಸಿ.ಪಿ. ರಾಧಾಕೃಷ್ಣನ್‌   

ಮೈಸೂರು: ಇಲ್ಲಿನ ಶಿವರಾತ್ರೀಶ್ವರ ನಗರದಲ್ಲಿರುವ ಜೆಎಸ್‌ಎಸ್‌ ಉನ್ನತ ಶಿಕ್ಷಣ ಅಕಾಡೆಮಿ (ಜೆಎಸ್‌ಎಸ್‌–ಎಎಚ್‌ಇಆರ್‌)ಯ 16ನೇ ಘಟಿಕೋತ್ಸವ ನ.9ರಂದು ಮಧ್ಯಾಹ್ನ 1.25ಕ್ಕೆ ನಡೆಯಲಿದ್ದು, ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

‘ಕುಲಾಧಿಪತಿಯೂ ಆಗಿರುವ ಸುತ್ತೂರು ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸುವರು. ರಾಜ್ಯಪಾಲ ಥಾವರಚಂದ್ ಗೆಹಲೋತ್ ಗೌರವ ಅತಿಥಿಯಾಗಿ ಭಾಗವಹಿಸುವರು’ ಎಂದು ಉಪಕುಲ‍ಪತಿ ಡಾ.ಎಚ್‌.ಬಸವನಗೌಡಪ್ಪ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ವಿವಿಧ ಏಳು ನಿಕಾಯಗಳ ಪದವಿ ಹಾಗೂ ಡಿಪ್ಲೊಮಾ ವಿಭಾಗಗಳಿಂದ ಒಟ್ಟು 2,925 ಮಂದಿಗೆ ಪದವಿ ಪ್ರಮಾಣಪತ್ರಗಳನ್ನು ವಿತರಿಸಲಾಗುವುದು. 80 ಮಂದಿ ಪಿಎಚ್‌.ಡಿ ಪದವಿ ಸ್ವೀಕರಿಸುವರು. 7 ಅಭ್ಯರ್ಥಿಗಳಿಗೆ ವೈದ್ಯಕೀಯ ಡಾಕ್ಟರೇಟ್‌ ನೀಡಲಾಗುವುದು. ಅತ್ಯುತ್ತಮ ಶೈಕ್ಷಣಿಕ ಸಾಧನೆ ಮಾಡಿರುವ 68 ಪ್ರತಿಭಾವಂತ ವಿದ್ಯಾರ್ಥಿಗಳಿಗೆ 100 ಪದಕ ಹಾಗೂ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಎನ್‌ಇಪಿ–2020 ಅಡಿಯಲ್ಲಿ 4 ವರ್ಷಗಳ ಪದವಿ ಕಾರ್ಯಕ್ರಮದ ಮೊದಲ ಬ್ಯಾಚ್‌ನ ಬಿಎಸ್ಸಿ ಆನರ್ಸ್‌ನ 132 ಮಂದಿ ಪದವಿ ಪಡೆಯುತ್ತಿರುವುದು ವಿಶೇಷ’ ಎಂದು ಮಾಹಿತಿ ನೀಡಿದರು.

ADVERTISEMENT

‘ಉಪರಾಷ್ಟ್ರಪತಿಯವರು ನಮ್ಮ ಕಾರ್ಯಕ್ರಮಕ್ಕೆ ಒಂದು ತಾಸು ಸಮಯ ಕೊಟ್ಟಿದ್ದಾರೆ. ಸಾಂಕೇತಿಕವಾಗಿ ಕೆಲವರಿಗೆ ಪದವಿ, ಪದಕ ಪ್ರದಾನ ಮಾಡಲಿದ್ದಾರೆ’ ಎಂದರು.

ಹೊಸ ಕಾರ್ಯಕ್ರಮ: 

‘ಹೊಸದಾಗಿ 2 ‍ಪದವಿ, 14 ಸ್ನಾತಕೋತ್ತದ ಪದವಿ, 4 ಫೆಲೋಶಿಪ್‌ ಕಾರ್ಯಕ್ರಮಗಳನ್ನು ಪರಿಚಯಿಸಲಾಗಿದೆ. ಇದರಲ್ಲಿ ಕೃತಕ ಬುದ್ಧಿಮತ್ತೆ (ಎಐ), ದತ್ತಾಂಶ ವಿಜ್ಞಾನ, ಆರೋಗ್ಯ ಅರ್ಥವಿಜ್ಞಾನ, ಏರೋ–ವೈದ್ಯಕೀಯ ವಿಜ್ಞಾನಗಳು, ಹೃದ್ರೋಗ ವಿಜ್ಞಾನದಂತಹ ಅತ್ಯಾಧುನಿಕ ಕ್ಷೇತ್ರಗಳನ್ನು ಒಳಗೊಂಡ 3 ರೆಸಿಡೆನ್ಸಿ ಕಾರ್ಯಕ್ರಮಗಳು ಸೇರಿವೆ’ ಎಂದು ವಿವರಿಸಿದರು.

‘ಸಂಶೋಧನಾ ಶ್ರೇಷ್ಠತೆ ಸಾಧಿಸುತ್ತಿರುವ ವಿಶ್ವವಿದ್ಯಾಲಯವು 2024–25ರಲ್ಲಿ ವಿವಿಧ ಸರ್ಕಾರಿ ಹಣಕಾಸು ಸಂಸ್ಥೆಗಳಿಂದ ₹ 53.65 ಕೋಟಿ ಅನುದಾನದೊಂದಿಗೆ, 133 ಸಂಶೋಧನೆ/ ಸಮಾಲೋಚನಾ ಯೋಜನೆಗಳನ್ನು ಪಡೆದಿದೆ’ ಎಂದು ತಿಳಿಸಿದರು.

ಅಕಾಡೆಮಿಯ ಡಿ.ಮಂಜುನಾಥ್‌, ಸುಧೀಂದ್ರ ಭಟ್, ಡಾ.ನಾರಾಯಣಪ್ಪ, ವಿಶಾಲ್‌ ಗುಪ್ತ, ದಾಕ್ಷಾಯಿಣಿ, ಮಮತಾ ಪಾಲ್ಗೊಂಡಿದ್ದರು. 

ದೇಶದ ಅತ್ಯುನ್ನತ ಸ್ಥಾನದಲ್ಲಿರುವವರನ್ನು ಜೆಎಸ್‌ಎಸ್‌ಎಎಚ್‌ಇಆರ್‌ ಘಟಿಕೋತ್ಸವಕ್ಕೆ ಆಹ್ವಾನಿಸುವ ಪರಂಪರೆಯನ್ನು ಈ ಬಾರಿಯೂ ಮುಂದುವರಿಸಲಾಗಿದೆ
ಡಾ.ಎಚ್‌. ಬಸವನಗೌಡಪ್ಪ ಉಪಕುಲಪತಿ ಜೆಎಸ್‌ಎಸ್‌ಎಚ್‌ಇಆರ್‌

ವರುಣದಲ್ಲಿ ‘ಜಾಗತಿಕ ಕ್ಯಾಂಪಸ್’

‘ಜೆಎಸ್‌ಎಸ್‌ಎಎಚ್‌ಇಆರ್‌ ಭಾರತೀಯ ಜ್ಞಾನ ವ್ಯವಸ್ಥೆ ವಿಭಾಗ ಜಾಗತಿಕ ಕಾನೂನು ವಿದ್ಯಾಲಯ ಮತ್ತು ನರ್ಸಿಂಗ್ ಕಾಲೇಜು ಸೇರಿದಂತೆ ಹೊಸ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ವರುಣದಲ್ಲಿ ತನ್ನ ಜಾಗತಿಕ ಕ್ಯಾಂಪಸ್‌ ವಿಸ್ತರಿಸುತ್ತಿದೆ. ಅಲ್ಲಿ ಎಲ್ಲ ಪಠ್ಯಕ್ರಮದಲ್ಲೂ ಕೃತಕ ಬುದ್ಧಿಮತ್ತೆ ಸಂಯೋಜನೆಯೊಂದಿಗೆ ಕೌಶಲ ಆಧಾರಿತವಾದ 96 ಹೊಸ ಶೈಕ್ಷಣಿಕ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗುವುದು’ ಎಂದು ಕುಲಪತಿ ಬಿ.ಸುರೇಶ್‌ ಮಾಹಿತಿ ನೀಡಿದರು. ‘101 ಎಕರೆ ಜಾಗದಲ್ಲಿ ಕ್ಯಾಂಪಸ್‌ ಮೈದಳೆಯುತ್ತಿದೆ. ₹ 1500 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

Cut-off box - ಹೆಚ್ಚು ಪದಕ ಪಡೆದವರು... ‘ವಿದ್ಯಾರ್ಥಿನಿಯರೇ ಶೈಕ್ಷಣಿಕವಾಗಿ ಹೆಚ್ಚಿನ ಸಾಧನೆ ತೋರಿದ್ದಾರೆ. ಸುಹಾನಿ ಜೈನ್‌ (ಬಿಡಿಎಸ್) ಉಮಾ ಮಹೇಶ್ವರಿ ಎಸ್. (ಬಿ. ಫಾರ್ಮ) ತಲಾ 4 ಡಾ. ಪ್ರೀತಿ ಪ್ರಕಾಶ್ ಪ್ರಭು ಡಾ.ಯನಮಲ ಕೀರ್ತಿ (ಎಂಡಿ–ಜನರಲ್ ಮೆಡಿಸಿನ್) ಇಶಾ ಕುಮತೇಕರ (ಎಂಬಿಬಿಎಸ್) ಜೆ.ವಿಘ್ನೇಶ್ (ಎಂ.ಫಾರ್ಮ) ಡಾ.ಎಸ್‌.ಎ. ಪಳನಿಸ್ವಾಮಿ (ಫಾರ್ಮ ಡಿ) ತಲಾ 3 ಪದಕಗಳನ್ನು ಪಡೆದು ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ’ ಎಂದು ಬಸವನಗೌಡಪ್ಪ ತಿಳಿಸಿದರು. ‘ದೇಶದ ಅತ್ಯುತ್ತಮ ಉನ್ನತ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ಜೆಎಸ್‌ಎಸ್‌ಎಎಚ್‌ಇಆರ್‌ ನ್ಯಾಕ್‌ನಿಂದ ಎ++ ಗ್ರೇಡ್‌ ಪಡೆದಿದೆ. ಎನ್‌ಐಆರ್‌ಎಫ್‌–2025ರ ಶ್ರೇಯಾಂಕದಲ್ಲಿ ಈಗ ದೇಶದ ವಿವಿಗಳ ಪೈಕಿ 21ನೇ ಸ್ಥಾನದಲ್ಲಿದೆ. 9ಸಾವಿರಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳಿದ್ದು 800 ಬೋಧಕ ಹಾಗೂ 600 ಬೋಧಕೇತರ ಸಿಬ್ಬಂದಿ ಇದ್ದಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.