ADVERTISEMENT

ದ್ವೇಷ ರಾಜಕಾರಣಕ್ಕೆ ಪ್ರಯೋಗ ಶಾಲೆಯಾದ ಕರ್ನಾಟಕ: ನಿವೃತ್ತ ನ್ಯಾ. ಕೆ.ಚಂದ್ರು

​ಪ್ರಜಾವಾಣಿ ವಾರ್ತೆ
Published 6 ಮೇ 2022, 20:13 IST
Last Updated 6 ಮೇ 2022, 20:13 IST
ನ್ಯಾ. ಕೆ. ಚಂದ್ರು
ನ್ಯಾ. ಕೆ. ಚಂದ್ರು   

ಮೈಸೂರು: ‘ದ್ವೇಷ ರಾಜಕಾರಣಕ್ಕೆ ಕರ್ನಾಟಕ ಪ್ರಯೋಗಶಾಲೆಯಾಗುತ್ತಿದೆ’ ಎಂದು ಮದ್ರಾಸ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ.ಚಂದ್ರು ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಜೆಎಸ್‌ಎಸ್‌ ಕಾನೂನುಕಾಲೇಜಿನಲ್ಲಿಶುಕ್ರವಾರ ವಿಶೇಷ ಉಪನ್ಯಾಸ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಹಿಜಾಬ್, ಹಲಾಲ್, ಆಜಾನ್‌ನಂತಹ ವಿಷಯಗಳು ಹೊಸದಲ್ಲ. ಮೊದಲಿ
ನಿಂದಲೂ ಅವು ನಮ್ಮ ಜತೆಯಲ್ಲೇ ಇವೆ. ದಕ್ಷಿಣ ಭಾರತದ ಬೇರೆ ಯಾವುದೇ ರಾಜ್ಯಗಳಲ್ಲಿ ಕಾಣದ ವಿವಾದಗಳು ಕರ್ನಾಟಕದಲ್ಲಿ ನಡೆದಿವೆ. ಕರ್ನಾಟಕದ ನೆಲ ಪ್ರಯೋಗಶಾಲೆಯಾಗುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ. ಅವುಗಳನ್ನು ನಿಭಾಯಿಸುವಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಎರಡೂ ವಿಫಲಗೊಂಡಿವೆ’ ಎಂದರು.

‘ದಿನೇ ದಿನೇ ಸಮಾಜದಲ್ಲಿ ಸಹಿಷ್ಣುತಾ ಭಾವನೆ ಕಡಿಮೆಯಾಗುತ್ತಿದೆ. ಪಾಕಿಸ್ತಾನ ಇಸ್ಲಾಂ ರಾಷ್ಟ್ರವಾದರೆ ಭಾರತ ಹಿಂದೂ ರಾಷ್ಟ್ರವಲ್ಲ. ಇದೊಂದು ಜಾತ್ಯತೀತ ದೇಶ. ಇಲ್ಲಿ ಒಂದು ಧರ್ಮ, ಒಂದು ಆಹಾರ ಪದ್ಧತಿ, ಒಂದು ಸಿದ್ಧಾಂತಗಳನ್ನು ಹೇರುವುದು ತಪ್ಪು. ಇಲ್ಲಿರುವ ಅತಿ ಕಡಿಮೆ ಸಂಖ್ಯೆಯ ಪಾರ್ಸಿ ಧರ್ಮದವರೂ ತಮ್ಮ ಧಾರ್ಮಿಕ ಆಚರಣೆಗಳನ್ನು ಮಾಡಲು ಸಂವಿಧಾನ ಮುಕ್ತ ಅವಕಾಶ ನೀಡಿದೆ’ ಎಂದು ಪ್ರತಿಪಾದಿಸಿದರು.

ADVERTISEMENT

'ತಮಿಳುನಾಡಿನ ಕಂಚಿಯ ಶಂಕರಮಠದ ಪಕ್ಕದಲ್ಲೇ ಇರುವ ಮಸೀದಿಯಿಂದ ನಿತ್ಯ ಆಜಾನ್‌ ಕೇಳಿ ಬರುತ್ತಿದೆ. ಅಲ್ಲಿ ಯಾವುದೇ ಸಮಸ್ಯೆಯೂ ಇಲ್ಲ, ವಿವಾದವೂ ಇಲ್ಲ. ಕರ್ನಾಟಕದಲ್ಲಿ ಮಾತ್ರ ಬೇಕಿರದ ಇಂತಹ ವಿಷಯಗಳೇ ಮುನ್ನೆಲೆಗೆ ಬರುತ್ತಿವೆ. ಸಮಸ್ಯೆಗಳಿಂದ ಗಮನ ಬೇರೆಡೆ ಸೆಳೆಯಲಾಗುತ್ತಿದೆ' ಎಂದರು.

‘ಜೈ ಭೀಮ್’ ಸಿನಿಮಾ ನಿರ್ಮಾ
ಪಕರು ಹಾಗೂ ನಟರ ವಿರುದ್ಧ ಪ್ರಕ
ರಣ ದಾಖಲಾಗಿದೆ. ಬಹುಶಃ ಇದು ಹಣ ಕೀಳಲೆಂದೋ, ಪ್ರಸಿದ್ಧಿ ಪಡೆಯಲೆಂದೋ ಯಾವುದೋ ಸಂಘಟನೆ ದೂರು ನೀಡಿರುವಂತಿದೆ. ಪ್ರತಿ ಸಿನಿಮಾದಲ್ಲೂ ಏನಾದರೂ ಒಂದು ವಿವಾದ ಇರುತ್ತದೆ. ತನಿಖೆಯಲ್ಲಿ ಸತ್ಯಾಂಶ ಗೊತ್ತಾಗಲಿದೆ’ ಎಂದರು.

‘ಜೈ ಭೀಮ್’ ಸಿನಿಮಾ ಯಶಸ್ವಿಯಾದ ನಂತರ ಹಲವು ನಿರ್ಮಾಪಕರು ನನ್ನ ಪುಸ್ತಕಗಳನ್ನು ಸಿನಿಮಾ ಮಾಡಲು ಸಂಪರ್ಕಿಸಿದ್ದಾರೆ. ಆದರೆ, ಯಾರಿಗೂ ಅನುಮತಿ ನೀಡಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.