ADVERTISEMENT

ಕಬಡ್ಡಿ: ‘ವಿದ್ಯಾವಿಕಾಸ’ ಚಾಂಪಿಯನ್

ಚಾಮುಂಡಿ ವಲಯ ಅಂತರಕಾಲೇಜು ಟೂರ್ನಿ: ‘ಯುವರಾಜ’ ರನ್ನರ್ಸ್‌ಅಪ್‌

​ಪ್ರಜಾವಾಣಿ ವಾರ್ತೆ
Published 11 ಜನವರಿ 2023, 7:04 IST
Last Updated 11 ಜನವರಿ 2023, 7:04 IST
ಮೈಸೂರಿನಲ್ಲಿ ಶಾರದಾವಿಲಾಸ ಕಾಲೇಜಿನಲ್ಲಿ ಮಂಗಳವಾರ ನಡೆದ ಅಂತರಕಾಲೇಜು ಚಾಮುಂಡಿ ವಲಯ ಕಬಡ್ಡಿ ಟೂರ್ನಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ ವಿದ್ಯಾವಿಕಾಸ ಕಾಲೇಜು ತಂಡದವರಿಗೆ ಕಾಲೇಜಿನ ಪ್ರಾಂಶಪಾಲರಾದ ಡಾ.ಎಂ.ದೇವಿಕಾ, ದೈಹಿಕ ಶಿಕ್ಷಣ ನಿರ್ದೇಶಕ ಜಿ. ಶಿವಕುಮಾರ್ ಟ್ರೋಫಿ ನೀಡಿದರು –ಪ್ರಜಾವಾಣಿ ಚಿತ್ರ
ಮೈಸೂರಿನಲ್ಲಿ ಶಾರದಾವಿಲಾಸ ಕಾಲೇಜಿನಲ್ಲಿ ಮಂಗಳವಾರ ನಡೆದ ಅಂತರಕಾಲೇಜು ಚಾಮುಂಡಿ ವಲಯ ಕಬಡ್ಡಿ ಟೂರ್ನಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ ವಿದ್ಯಾವಿಕಾಸ ಕಾಲೇಜು ತಂಡದವರಿಗೆ ಕಾಲೇಜಿನ ಪ್ರಾಂಶಪಾಲರಾದ ಡಾ.ಎಂ.ದೇವಿಕಾ, ದೈಹಿಕ ಶಿಕ್ಷಣ ನಿರ್ದೇಶಕ ಜಿ. ಶಿವಕುಮಾರ್ ಟ್ರೋಫಿ ನೀಡಿದರು –ಪ್ರಜಾವಾಣಿ ಚಿತ್ರ   

ಮೈಸೂರು: ಶಶಾಂಕ್‌ ಗಳಿಸಿದ ಅಮೋಘ 15 ಪಾಯಿಂಟ್ಸ್ ಬಲದಿಂದ ವಿದ್ಯಾವಿಕಾಸ ಪ್ರಥಮ ದರ್ಜೆ ಕಾಲೇಜು ತಂಡವು ಯುವರಾಜ ಕಾಲೇಜು ತಂಡವನ್ನು ಮಣಿಸುವ ಮೂಲಕ ಚಾಮುಂಡಿ ವಲಯ ಅಂತರಕಾಲೇಜು ಕಬಡ್ಡಿ ಟೂರ್ನಿಯ ಚಾಂಪಿಯನ್‌ ಆಗಿ ಹೊರಹೊಮ್ಮಿತು.

ಕೃಷ್ಣಮೂರ್ತಿಪುರಂನ ಶಾರದಾವಿಲಾಸ ಕಾಲೇಜು ಮೈದಾನದಲ್ಲಿ ಮಂಗಳವಾರ ನಡೆದ ಫೈನಲ್‌ ಪಂದ್ಯದಲ್ಲಿ ‘ವಿದ್ಯಾವಿಕಾಸ’ದವರು 29–4ರಿಂದ ‘ಯುವರಾಜ’ ತಂಡದವರನ್ನು ಮಣಿಸಿದರು.

ರೇಡರ್‌ ಶಶಾಂಕ್‌ ಹೆಚ್ಚು ಮಂದಿ ಔಟ್‌ ಮಾಡಿದರೆ, ಡಿಫೆಂಡರ್‌ಗಳಾದ ಎಸ್‌.ಬಿ.ಭರತ್‌, ಕೆ.ವಿ.ವರುಣ್‌, ಬಿ.ಆರ್.ರಾಕೇಶ್‌ ಹೆಚ್ಚು ಅಂಕಗಳನ್ನು ತಂಡಕ್ಕೆ ಸೇರಿಸಿದರು. ಯುವರಾಜ ತಂಡ 4 ಅಂಕ ಗಳಿಸಲಷ್ಟೇ ಸಾಧ್ಯವಾಯಿತು.

ADVERTISEMENT

ಅದಕ್ಕೂ ಮೊದಲು ನಡೆದ ಸೆಮಿಫೈನಲ್‌ ಪಂದ್ಯಗಳಲ್ಲಿ ಯುವರಾಜ ಕಾಲೇಜು ತಂಡವು ವಿದ್ಯಾವರ್ಧಕ ಕಾಲೇಜು ತಂಡವನ್ನು 23–21ರಿಂದ ಮಣಿಸಿ ರೋಚಕ ಜಯದೊಂದಿಗೆ ಫೈನಲ್‌ ಪ್ರವೇಶಿಸಿದರೆ, ವಿದ್ಯಾವಿಕಾಸ ತಂಡವು 36–17 ಅಂತರದಲ್ಲಿ ಶಾರದಾವಿಲಾಸ ಕಾಲೇಜು ತಂಡದ ವಿರುದ್ಧ ಜಯಗಳಿಸಿತು.

ಮೂರನೇ ಸ್ಥಾನಕ್ಕಾಗಿ ನಡೆದ ಪೈಪೋಟಿಯಲ್ಲಿ ವಿದ್ಯಾವರ್ಧಕ ಕಾಲೇಜು ತಂಡವು 28–13ರಿಂದ ಶಾರದವಿಲಾಸ ತಂಡವನ್ನು ಮಣಿಸಿತು.

ದಾವಣಗೆರೆ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯೆ ಜಿ.ಗೀತಾ, ಮೈಸೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಪಿ.ಕೃಷ್ಣಯ್ಯ ಟೂರ್ನಿಗೆ ಚಾಲನೆ ನೀಡಿದರು. ಶಾರದವಿಲಾಸ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಬಿ.ಎಂ.ಸುಬ್ರಾಯ, ಕಾರ್ಯದರ್ಶಿ ಎನ್‌.ಚಂದ್ರಶೇಖರ್‌, ಪ್ರಾಂಶುಪಾಲರಾದ ಡಾ.ಎಂ.ದೇವಿಕಾ, ದೈಹಿಕ ಶಿಕ್ಷಣ ನಿರ್ದೇಶಕ ಜಿ.ಶಿವಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.