ಎಚ್.ಡಿ.ಕೋಟೆ (ಮೈಸೂರು ಜಿಲ್ಲೆ): ತಾಲ್ಲೂಕಿನ ಬೀಚನಹಳ್ಳಿಯ ಕಬಿನಿ ಜಲಾಶಯಕ್ಕೆ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಾಗಿನ ಅರ್ಪಿಸಿದರು. ಬೃಂದಾವನ ಮಾದರಿಯಲ್ಲಿ ಜಲಾಶಯ ಅಭಿವೃದ್ಧಿ ಪಡಿಸುವ ಭರವಸೆ ನೀಡಿದರು.
ಮುಂಗಾರಿನಲ್ಲಿ ರಾಜ್ಯದಲ್ಲೇ ಮೊದಲು ತುಂಬುವ ಜಲಾಶಯ ಎಂಬ ಹೆಗ್ಗಳಿಕೆಗೆ ಪಾತ್ರವಾದ ಅಣೆಕಟ್ಟೆ ಕಳೆದ ಜೂನ್ ಮೊದಲ ವಾರದಲ್ಲೇ ತುಂಬಿತ್ತು. ಇಲ್ಲಿನ ಕ್ರಸ್ಟ್‌ಗೇಟ್‌ನ ಕಾವಲು ಗೋಪುರದ ಬಳಿ ಬೆಳಿಗ್ಗೆ 11.15ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಗಿನ ಅರ್ಪಿಸಿ, ₹ 32.25 ಕೋಟಿ ವೆಚ್ಚದ ಅಣೆಕಟ್ಟೆಯ ಪುನಶ್ಚೇತನ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದರು.
ನಂತರ ಮಾತನಾಡಿದ ಅವರು, ‘ಕಪಿಲಾ ನದಿಯು ಕಾವೇರಿಯ ಪ್ರಮುಖ ಉಪನದಿಯಾಗಿದ್ದು, 1.13 ಲಕ್ಷ ಎಕರೆ ಭೂಮಿಗೆ ನೀರಾವರಿ ಒದಗಿಸುತ್ತದೆ. ಪ್ರತಿ ವರ್ಷದಂತೆ ಜಲಾಶಯ ತುಂಬಿದಾಗ ಬಾಗಿನ ಅರ್ಪಿಸಲಾಗಿದ್ದು, ರೈತರಿಗೆ ಒಳ್ಳೆಯದಾಗಲೆಂದು ಕಪಿಲಾ ಮಾತೆಗೆ ಪ್ರಾರ್ಥಿಸಲಾಗಿದೆ’ ಎಂದರು.
‘ಕೇರಳದ ವಯನಾಡ್‌ನಲ್ಲಿ ಹುಟ್ಟುವ ಕಪಿಲಾ ನದಿ, ತಿ.ನರಸೀಪುರದಲ್ಲಿ ಕಾವೇರಿ ನದಿ ಸೇರುತ್ತದೆ. 1959ರಲ್ಲಿ ಅಣೆಕಟ್ಟೆ ನಿರ್ಮಾಣ ಆರಂಭವಾಗಿ, 1974ರಲ್ಲಿ ಪೂರ್ಣಗೊಂಡಿತು. 51 ವರ್ಷವಾದ್ದರಿಂದ ಸುರಕ್ಷತೆ ದೃಷ್ಟಿಯಿಂದ ಏ.24ರಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಸಂಪುಟ ಸಭೆಯಲ್ಲಿ ಅಣೆಕಟ್ಟೆಯ ಪುನಶ್ಚೇತನಕ್ಕೆ ₹ 32.25 ಕೋಟಿ ಬಿಡುಗಡೆ ಮಾಡಲಾಗಿದೆ’ ಎಂದು ತಿಳಿಸಿದರು.
‘ತಾರಕಾ ಜಲಾಶಯದ ಕಾಲುವೆಗಳ ಆಧುನೀಕರಣ ಮಾಡಲಾಗುವುದು. ಜಲಾಶಯದ ಎದುರು ಬೃಂದಾವನ ಮಾದರಿಯಲ್ಲಿ ಅಭಿವೃದ್ಧಿ ಮಾಡಲಾಗುವುದು’ ಎಂದೂ ಹೇಳಿದರು.
‘ಜಲಾಶಯದಿಂದ ಹೆಚ್ಚುವರಿ ನೀರು ಹರಿದು ಹೋಗುತ್ತಿದೆ. ಮೇಕೆದಾಟಿನಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಪಾದಯಾತ್ರೆಯನ್ನು ಮಾಡಿದ್ದೆವು. ಕೇಂದ್ರ ಸರ್ಕಾರ ಅನುಮತಿ ನೀಡಿದರೆ ಸಮನಾಂತರ ಜಲಾಶಯ ನಿರ್ಮಿಸಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ರಾಜ್ಯದಲ್ಲಿ ಕೈಗಾರಿಕೆಗಳಿಗೆ ಭೂಮಿ ಕೊಡುವುದಿಲ್ಲವೆಂದು ಹೇಳಿಲ್ಲ. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಅವರ ಪುತ್ರ ನಾರಾ ಲೋಕೇಶ್ ಏನೇ ರಾಜಕೀಯ ಮಾಡಿದರೂ ಯಾವ ಕೈಗಾರಿಕೆಗಳೂ ರಾಜ್ಯ ಬಿಟ್ಟು ಹೋಗುವುದಿಲ್ಲ’ ಎಂದು ಹೇಳಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ‘ರಾಜ್ಯ ಹಾಗೂ ತಮಿಳುನಾಡಿಗೆ ತೊಂದರೆ ಆಗದಂತೆ ಸದಾ ನೀರು ನೀಡುವ ಜೀವನದಿ ಕಪಿಲೆಯ ಆಶೀರ್ವಾದವಿದೆ. ಜಲಾಶಯದ ಪುನಶ್ಚೇತನಕ್ಕೆ ಹನಿ ನೀರಾವರಿ ಯೋಜನೆಯಡಿ ₹ 88 ಕೋಟಿ ಬಿಡುಗಡೆಗೆ ಸಿದ್ಧತೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅಚ್ಚುಕಟ್ಟು ಪ್ರದೇಶ ವಿಸ್ತರಿಸುವ ಬಗ್ಗೆಯೂ ಕ್ರಮ ವಹಿಸಲಾಗುವುದು’ ಎಂದರು.
ಕಳಶ ತಂದ ಮಹಿಳೆಯರು –
‘ಪ್ರವಾಸಿಗರನ್ನು ಆಕರ್ಷಿಸುವುದು ಮತ್ತು ಉದ್ಯೋಗ ಹೆಚ್ಚಿಸುವುದು ಸರ್ಕಾರದ ಸಂಕಲ್ಪವಾಗಿದೆ. ಜಲಾಶಯದ ಸುವರ್ಣ ಮಹೋತ್ಸವ ಆಚರಿಸುವ ಬಗ್ಗೆ ಚರ್ಚಿಸಿ ನಿರ್ಧರಿಸಲಾಗುವುದು. ಪಿಪಿಪಿ ಮಾದರಿಯಲ್ಲಿ ಬೃಂದಾವನ ಅಭಿವೃದ್ಧಿ ಪಡಿಸಲಾಗುವುದು’ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕರಾದ ಅನಿಲ್ ಚಿಕ್ಕಮಾದು, ಕೆ.ಹರೀಶ್ ಗೌಡ, ದರ್ಶನ್ ಧ್ರುವನಾರಾಯಣ, ಎ.ಆರ್.ಕೃಷ್ಣಮೂರ್ತಿ, ಮಾಜಿ ಸಚಿವ ಕೋಟೆ ಎಂ.ಶಿವಣ್ಣ, ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಪಾಲ್ಗೊಂಡಿದ್ದರು.
ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಜಾನಪದ ಕಲಾತಂಡಗಳು ಆಕರ್ಷಿಸಿದವು. ಯಕ್ಷಗಾನ ವೇಷದಲ್ಲಿದ್ದ ಯುವತಿಯರು ಮಂಗಳವಾದ್ಯ ಚಂಡೆಮೇಳ ಕಲಾವಿದರು ಹಾಗೂ ಕಳಶಹೊತ್ತ ಮಹಿಳೆಯರು ಸ್ವಾಗತಿಸಿದರು. ಕಬಿನಿ ಜಲಾಶಯದ ಅಣೆಕಟ್ಟೆಯ ಎರಡೂ ಬದಿ ಭುವನೇಶ್ವರಿ ಚಿತ್ರವಿದ್ದ ಕನ್ನಡ ಬಾವುಟಗಳು ಹಾರಾಡಿದವು. ಚೆಂಡು ಹೂ ಮಲ್ಲಿಗೆ ಗುಲಾಬಿಗಳಿಂದ ಅಲಂಕರಿಸಲಾಗಿತ್ತು. ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇಗುಲದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ಹಾಗೂ ಎಚ್.ಡಿ.ಕೋಟೆ ತಾಲ್ಲೂಕಿನ ಕಿತ್ತೂರಿನ ರವಿರಾಮೇಶ್ವರ ದೇಗುಲದ ಅರ್ಚಕ ಭಾಸ್ಕರ್ ನೇತೃತ್ವದಲ್ಲಿ ಸಿ.ಎಂ ಡಿಸಿಎಂ ಕಪಿಲಾ ಮಾತೆಗೆ ಪೂಜೆ ಸಲ್ಲಿಸಿದರು. ಚಿಕ್ಕದೇವಮ್ಮ ಕಾವೇರಿ ಮಾತೆ ನೆನೆದು ನವಧಾನ್ಯಗಳು ಅರಿಶಿನ– ಕುಂಕುಮ ಸೇರಿದಂತೆ ಪೂಜಾ ಸಾಮಗ್ರಿಗಳಿದ್ದ ಬಿದಿರಿನ ಮೊರದ ಬಾಗಿನವನ್ನು ಕಪಿಲೆಗೆ ಅರ್ಪಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.