ಎಚ್.ಡಿ.ಕೋಟೆ: ತಾಲ್ಲೂಕಿನ ಕಬಿನಿ ಜಲಾಶಯದ ನಾಲ್ಕು ಕ್ರಸ್ಟ್ ಗೇಟ್‌ಗಳಿಂದ 40 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಭಾನುವಾರ ಬಿಡಲಾಯಿತು.
ಕೇರಳದ ವಯನಾಡು ಹಾಗೂ ನಾಗರಹೊಳೆ ಅರಣ್ಯ ಭಾಗದಲ್ಲಿ ಅತಿ ಹೆಚ್ಚು ಮಳೆ ಆಗುತ್ತಿದ್ದು ಜಲಾಶಯಕ್ಕೆ ಒಳಹರಿವು 30 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿರುವುದರಿಂದ ಜಲಾಶಯದ ಭದ್ರತಾ ದೃಷ್ಟಿಯಿಂದ ಜಲಾಶಯದ ನಾಲ್ಕು ಕ್ರಸ್ಟ್ ಗೇಟ್‌ಗಳಿಂದ 35 ಸಾವಿರ ಕ್ಯೂಸೆಕ್ ಹಾಗೂ ಸುಭಾಷ್ ಕಬಿನಿ ಸುಭಾಶ್ ಪವರ್ ಪ್ರಾಜೆಕ್ಟ್‌ನಿಂದ 5ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.
ಕಬಿನಿ ಜಲಾಶಯದ ಗರಿಷ್ಠ ಮಟ್ಟ 2284 ಅಡಿಗಳಾಗಿದ್ದು, ಭಾನುವಾರದ ಮಟ್ಟ 2284 ಅಡಿ ಇತ್ತು. ಒಳಹರಿವು 30 ಸಾವಿರ ಕ್ಯೂಸೆಕ್.
9 ಸಾವಿರ ಕ್ಯೂಸೆಕ್ ನೀರು ಬಿಡುಗಡೆ
ಎಚ್.ಡಿ.ಕೋಟೆ: ತಾಲ್ಲೂಕಿನ ತಾರಕ ಜಲಾಶಯಕ್ಕೆ ಒಳ ಹರಿವು 7 ಸಾವಿರ ಕ್ಯೂಸೆಕ್ ಇದ್ದು, ಜಲಾಶಯದ ಮೂರು ಕ್ರಸ್ಟ್‌ಗೇಟ್‌ಗಳಿಂದ 9 ಸಾವಿರ ಕ್ಯೂಸೆಕ್ ನೀರನ್ನು ಭಾನುವಾರ ನದಿಗೆ ಬಿಡಲಾಗಿದೆ.
ತಾರಕ ಜಲಾಶಯದ ಗರಿಷ್ಠ ಮಟ್ಟ 2425 ಅಡಿಗಳಾಗಿದೆ, ಇಂದಿನ ಮಟ್ಟ 2423 ಅಡಿ ಇದೆ. ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಒಂದು ವಾರದಿಂದ ಸಾಕಷ್ಟು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ ದಿಢೀರ್ ಒಳ ಹರಿವು ಹೆಚ್ಚಾಗಿದೆ.
ಕಬಿನಿ ಮತ್ತು ತಾರಕ ಜಲಾಶಯ ಮೈದುಂಬಿ ಹರಿಯುತ್ತಿವೆ. 9 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಸಿದ್ದರಿಂದ ಕಟ್ಟೆಮನಗನಹಳ್ಳಿ ಗ್ರಾಮದ ಬಳಿ ಇರುವ ಸೇತುವೆ ಮುಳುಗಡೆಯಾಗಿದೆ. ಕಟ್ಟೆಮನಗನಹಳ್ಳಿ, ಮೊತ್ತ ಗ್ರಾಮ, ಆಲತ್ತಾಳಹುಂಡಿ, ಮೊತ್ತ ಹಾಡಿ ಇನ್ನು ಹಲವು ಗ್ರಾಮಗಳಿಗೆ ಸಂಪರ್ಕ ಕಡಿತವಾಗಿದೆ. ಎಚ್.ಡಿ.ಕೋಟೆ ಪಟ್ಟಣದಲ್ಲಿರುವ ಅಶ್ವತಕಟ್ಟೆಯ ಶಿವನ ದೇವಾಲಯ ಅರ್ಧಭಾಗ ಮುಳುಗಡೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.