ADVERTISEMENT

ಮೈಸೂರು:ವಿಜಯನಗರ 4ನೇ ಹಂತಕ್ಕೆ ಕಬಿನಿ ನೀರು

ಶಾಸಕ ಜಿ.ಟಿ. ದೇವೇಗೌಡ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2025, 6:41 IST
Last Updated 14 ಜುಲೈ 2025, 6:41 IST
ಮೈಸೂರಿನ ವಿಜಯನಗರ 4ನೇ ಹಂತದ 2ನೇ ಘಟ್ಟದಲ್ಲಿರುವ ವಿಜಯ ವಿನಾಯಕ ಸೇವಾ ಸಮಿತಿಯಿಂದ ಪೌರಕಾರ್ಮಿಕರು ಹಾಗ ನೀರುಗಂಟಿಗಳನ್ನು ಶಾಸಕ ಜಿ.ಟಿ. ದೇವೇಗೌಡ ಸನ್ಮಾನಿಸಿದರು
ಮೈಸೂರಿನ ವಿಜಯನಗರ 4ನೇ ಹಂತದ 2ನೇ ಘಟ್ಟದಲ್ಲಿರುವ ವಿಜಯ ವಿನಾಯಕ ಸೇವಾ ಸಮಿತಿಯಿಂದ ಪೌರಕಾರ್ಮಿಕರು ಹಾಗ ನೀರುಗಂಟಿಗಳನ್ನು ಶಾಸಕ ಜಿ.ಟಿ. ದೇವೇಗೌಡ ಸನ್ಮಾನಿಸಿದರು    

ಮೈಸೂರು: ‘ವಿಜಯನಗರ 4ನೇ ಹಂತದ 2ಎ ಘಟಕಕ್ಕೆ ಕಬಿನಿ ಜಲಾಶಯದಿಂದ 6 ಎಂಎಲ್‌ಡಿ ನೀರನ್ನು ಪೂರೈಸಲಾಗುವುದು. ಇದನ್ನು ಗೌರಿ–ಗಣೇಶ ಹಬ್ಬದೊಳಗೆ ಅನುಷ್ಠಾನಕ್ಕೆ ತರುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಹೇಳಿದರು.

ಇಲ್ಲಿನ ವಿಜಯನಗರ 4ನೇ ಹಂತದ 2ನೇ ಘಟ್ಟದಲ್ಲಿರುವ ವಿಜಯ ವಿನಾಯಕ ಸೇವಾ ಸಮಿತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭ ಹಾಗೂ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘4ನೇ ಹಂತದಲ್ಲಿ ಮನೆಗಳು ಹೆಚ್ಚಾದಂತೆ ಸಮಸ್ಯೆಗಳು ಹೆಚ್ಚಾಗುತ್ತಿವೆ. ಬಡಾವಣೆಯನ್ನು ಬೇಕಾಬಿಟ್ಟಿ ಮಾಡಿದ್ದಾರೆ. 4ನೇ ಹಂತವನ್ನು ಮಹಾನಗರಪಾಲಿಕೆ ವ್ಯಾಪ್ತಿಗೆ ಸೇರಿಸಲು ಪ್ರಯತ್ನಿಸಿದೆ. ಆದರೆ, ಆಗಲಿಲ್ಲ. ಹಗಲು–ರಾತ್ರಿ ಹೋರಾಟ ಮಾಡಿ 4 ಪಟ್ಟಣ ಪಂಚಾಯಿತಿ, 1 ನಗರಸಭೆಯನ್ನು ಬಿ.ಎಸ್. ಯಡಿಯೂರಪ್ಪ ಅವರ ಸಹಕಾರದಿಂದ ಮಾಡಿಸಿದೆ. ಬಹಳಷ್ಟು ಆಸೆ–ಆಕಾಂಕ್ಷೆ ಇಟ್ಟುಕೊಂಡು ಜನರು ಮನೆ ಕಟ್ಟಿಕೊಂಡಿದ್ದಾರೆ. ಆದರೆ, ಸೌಲಭ್ಯಗಳಿಲ್ಲ. ಖಾಸಗಿ ಡೆವಲಪರ್‌ಗಳು ನಿವೇಶನ ಮಾರಿ ಮನೆಗೆ ಹೋದರು. ಈಗ ನಮಗೆ ಸಮಸ್ಯೆ ಎದುರಾಗಿದೆ’ ಎಂದರು.

ADVERTISEMENT

‘ಹೂಟಗಳ್ಳಿ ನಗರಸಭೆಗೆ ಕೈಗಾರಿಕೆಗಳಿಂದ ಬರುತ್ತಿದ್ದ ₹ 25 ಕೋಟಿ ತೆರಿಗೆ ನಿಂತುಹೋಗಿದೆ. ಗ್ರೇಟರ್ ಮೈಸೂರು ಮಾಡಲು ಮುಖ್ಯಮಂತ್ರಿ ಅವರಲ್ಲಿ ಒತ್ತಾಯಿಸಿದ್ದೆ. ಆದರೆ, ಆಗಲಿಲ್ಲ’ ಎಂದು ಬೇಸರ ವ್ಯಕ್ತ‍ಪಡಿಸಿದರು.

‘ವಿಜಯನಗರ, ಬೋಗಾದಿ ಸೇರಿದಂತೆ ಹೊಸ ಪೊಲೀಸ್‌ ಠಾಣೆ ಆರಂಭಿಸಲು ಪೊಲೀಸ್ ಮಹಾನಿರ್ದೇಶಕರಿಗೆ ಹೇಳಿದ್ದೇನೆ. ಬಾಡಿಗೆ ಕಟ್ಟಡ ಕೊಟ್ಟರೆ ನಮ್ಮ ಕ್ಲಿನಿಕ್ ಹಾಗೂ ಗ್ರಂಥಾಲಯ ಮಾಡಿಸುತ್ತೆನೆ. ಆಷಾಢ ಕಳೆದ ಮೇಲೆ ಹೊಸ ಬಸ್ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮನೆಗೆ ಯಾರೇ ಬಂದರೂ ಕೆಲಸ ಮಾಡಿಕೊಡುತ್ತೇನೆ. ಆದರೆ, ಚುನಾವಣೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನನಗೆ ಓಟು ಬಂದಿಲ್ಲ’ ಎಂದು ಹೇಳಿದರು.

ಹೂಟಗಳ್ಳಿ ನಗರಸಭೆ ಆಯುಕ್ತ ಬಿ.ಎನ್. ಚಂದ್ರಶೇಖರ್ ಮಾತನಾಡಿದರು. ಎಇಇ ಮಧುಸೂಧನ್, ಸಮಿತಿಯ ಅಧ್ಯಕ್ಷ ಎಸ್.ಜಿ. ಜಗದೀಶ್, ಸಂಚಾಲಕರಾದ ಬಿ.ಜೆ.ರಂಗೇಗೌಡ, ಟಿ.ಎಂ. ನಾರಾಯಣ್, ಎಚ್.ಎನ್. ರಾಮಚಂದ್ರ, ಟಿ.ಪಿ.ಪುರುಷೋತ್ತಮ, ನಿವೃತ್ತ ಎಂಜಿನಿಯರ್ ಧರಣೀಂದ್ರಪ್ಪ, ಸಾರಿಗೆ ಅಧಿಕಾರಿ ಮಹೇಶ್, ಮಂಜುನಾಥ್, ಶಾಲಿನಿ, ಶ್ರೀನಿವಾಸ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.