
ಮೈಸೂರು: ‘ಸಮಾಜ ಸುಧಾರಕ ಕೈವಾರ ತಾತಯ್ಯನವರು ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ’ ಎಂದು ಚಾಮರಾಜ ಕ್ಷೇತ್ರದ ಶಾಸಕ ಕೆ.ಹರೀಶ್ ಗೌಡ ಹೇಳಿದರು.
ಇಲ್ಲಿನ ಡಿ. ದೇವರಾಜ ಅರಸು ರಸ್ತೆಯಲ್ಲಿ ಬಣಜಿಗ (ಬಲಿಜ) ಸಮಾಜದಿಂದ ಸೋಮವಾರ ಆಯೋಜಿಸಿದ್ದ ಯೋಗಿನಾರಾಯಣ (ಕೈವಾರ ತಾತಯ್ಯ) ಅವರ 298ನೇ ಜಯಂತ್ಯುತ್ಸವದಲ್ಲಿ ಭಾವಚಿತ್ರಕ್ಕೆ ಗೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
‘ಮಹನೀಯರ ಜಯಂತಿಗಳನ್ನು ಆಚರಣೆಗಷ್ಟೆ ಸೀಮಿತವಾಗಿ ಮಾಡಿಕೊಳ್ಳದೇ ಅವರ ಆದರ್ಶ– ತತ್ವಗಳನ್ನು ಜೀವನದಲ್ಲಿ ಮೈಗೂಡಿಸಿಕೊಂಡು ಅರ್ಥಪೂರ್ಣಗೊಳಿಸಬೇಕು’ ಎಂದರು.
‘ತ್ರಿಕಾಲ ಜ್ಞಾನಿಯಾಗಿದ್ದ ಕೈವಾರ ತಾತಯ್ಯ ಅವರು ಪ್ರಾಪಂಚಿಕ ಆಗು-ಹೋಗುಗಳನ್ನು ಅರಿತು ಮನುಕುಲದ ಒಳಿತಿಗಾಗಿ ಅಪಾರ ಕೊಡುಗೆ ನೀಡಿದ್ದಾರೆ. ಅವರು ಪವಾಡ ಪುರುಷರಾಗಿದ್ದರು. ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಿ ತಾರತಮ್ಯ ಹಾಗೂ ಅಸಮಾನತೆ ಹೋಗಲಾಡಿಸಲು ಶ್ರಮಿಸಿದರು’ ಎಂದು ಸ್ಮರಿಸಿದ ಶಾಸಕರು, ‘ಅವರನ್ನು ಎಲ್ಲ ಸಮುದಾಯದವರೂ ಸ್ಮರಿಸಬೇಕು’ ಎಂದು ತಿಳಿಸಿದರು.
ಬಣಜಿಗ (ಬಲಿಜ) ಸಂಘದ ಗೌರವಾಧ್ಯಕ್ಷ ಆನಂದ್ ಶೆಟ್ಟಿ ಮಾತನಾಡಿದರು.
ಸಾರ್ವಜನಿಕರಿಗೆ ಸಿಹಿ ಮತ್ತು ಮಜ್ಜಿಗೆ ವಿತರಿಸಲಾಯಿತು. ಕಾರ್ಯದರ್ಶಿ ಉಮೇಶ್ ಕೆ., ಮುಖಂಡರಾದ ನರೇಶ್ ಬಾಬು, ಪ್ರಕಾಶ್, ಉಮೇಶ್, ಯತಿರಾಜ್, ಪ್ರಶಾಂತ್ ಗೌಡ, ಮೈ.ಕಾ. ಪ್ರೇಮ್‌ಕುಮಾರ್, ನವೀನ್ ಕುಮಾರ್, ವಿನಯ್ ಕುಮಾರ್, ರಮೇಶ್, ರಾಜೀವ್, ಗುರುರಾಜ್ ಶೆಟ್ಟಿ, ಎಸ್.ಎನ್. ರಾಜೇಶ್, ಪ್ರಮೋದ್ ಗೌಡ, ರವಿಚಂದ್ರ, ಜಿ. ರಾಘವೇಂದ್ರ, ಕೃಷ್ಣಮೂರ್ತಿ, ಸಂತೋಷ್ ನಾಯ್ಡು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.