ADVERTISEMENT

Mysuru Dasara: ನಾಡಹಬ್ಬಕ್ಕೆ ‘ಕಲಾ ಜಾತ್ರೆ’ ಮೆರುಗು

ಸಿದ್ಧಾರ್ಥನಗರದ ಕಾವಾದಲ್ಲಿ ಆಯೋಜನೆ, ಕಲಾಕೃತಿಗಳ ಪ್ರದರ್ಶನ–ಮಾರಾಟ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 5:03 IST
Last Updated 29 ಸೆಪ್ಟೆಂಬರ್ 2025, 5:03 IST
ಮೈಸೂರು ದಸರಾ ಅಂಗವಾಗಿ ಲಲಿತಕಲೆ ಮತ್ತು ಕರಕುಶಲ ಕಲೆ ಉಪ ಸಮಿತಿ ಆಯೋಜಿಸಿದ್ದ ಕಲಾ ಜಾತ್ರೆಯಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಭಾನುವಾರ ಬಹುಮಾನ ವಿತರಿಸಲಾಯಿತು– ಪ್ರಜಾವಾಣಿ ಚಿತ್ರ
ಮೈಸೂರು ದಸರಾ ಅಂಗವಾಗಿ ಲಲಿತಕಲೆ ಮತ್ತು ಕರಕುಶಲ ಕಲೆ ಉಪ ಸಮಿತಿ ಆಯೋಜಿಸಿದ್ದ ಕಲಾ ಜಾತ್ರೆಯಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಭಾನುವಾರ ಬಹುಮಾನ ವಿತರಿಸಲಾಯಿತು– ಪ್ರಜಾವಾಣಿ ಚಿತ್ರ   

ಮೈಸೂರು: ಇಲ್ಲಿನ ಸಿದ್ಧಾರ್ಥನಗರದಲ್ಲಿರುವ ಚಾಮರಾಜೇಂದ್ರ ದೃಶ್ಯಕಲಾ ಕಾಲೇಜು (ಕಾವಾ) ಆವರಣ ಭಾನುವಾರ ವಿವಿಧ ಪ್ರಕಾರದ ಕಲೆಗಳಿಂದ ‘ಸಿಂಗಾರ’ಗೊಂಡಿತ್ತು. ಅಲ್ಲಿ ನಡೆದ ಕಲಾಜಾತ್ರೆಯು ನಾಡಹಬ್ಬ ದಸರೆಗೆ ಮೆರುಗು ನೀಡಿತು.

ಲಲಿತಕಲೆ ಮತ್ತು ಕರಕುಶಲ ಕಲೆ ಉಪ ಸಮಿತಿಯಿಂದ, ಕಲಾವಿದರು ಹಾಗೂ ಕಲಾಸಕ್ತರ ನಡುವೆ ವೇದಿಕೆ ಕಲ್ಪಿಸುವ, ಜನಸಾಮಾನ್ಯರು, ವಿದ್ಯಾರ್ಥಿಗಳು ಮತ್ತು ಉದಯೋನ್ಮುಖ ಕಲಾವಿದರಿಗೆ ಅವಕಾಶ ಒದಗಿಸಲು ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಉಚಿತವಾಗಿ ಮಳಿಗೆಗಳನ್ನು ಒದಗಿಸಲಾಯಿತು. ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಕಲಾವಿದರು, ಕಲಾಸಂಸ್ಥೆಗಳು ತಮ್ಮ ಕಲಾಕೃತಿಗಳನ್ನು, ಉತ್ಪನ್ನಗಳನ್ನು ಪ್ರದರ್ಶಿಸಿದರು. ಇದರೊಂದಿಗೆ ಅವರ ಸೃಜನಶೀಲತೆಯನ್ನೂ ವ್ಯಕ್ತಪಡಿಸಿದರು.

ಕಲಾಕೃತಿಗಳು:

ಕರ್ನಾಟಕ ಕಲಾ ರತ್ನ ರೂಪಾ ವಸುಂಧರ ಅವರ ಒಣ ಎಲೆ, ಹೂವಿನಿಂದ ರಚಿಸಿರುವ ಚಿತ್ರಕಲೆ, ಮನುಷ್ಯ ತನ್ನ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕಾದ ಮಹತ್ವವನ್ನು ಬಿಂಬಿಸುವ ಕಲಾವಿದ ಎ.ಆರ್.ಮಂಜುನಾಥ್ ಅವರ ಕಲಾಕೃತಿಗಳು ಗಮನಸೆಳೆದವು. ಪ್ರಸಿದ್ಧ ಸಾಹಿತಿಗಳು, ಮೈಸೂರು ಅರಮನೆ, ನಂದಿ, ಚಾಮುಂಡಿಬೆಟ್ಟದ ಗೋಪುರ, ದೊಡ್ಡ ಗಡಿಯಾರ ಹಾಗೂ ಚಿತ್ರನಟರ ಸ್ಕೆಚ್‌ ಆರ್ಟ್, ಹಲವು ವಿದ್ಯಾರ್ಥಿಗಳಿಂದ ಸಿದ್ಧವಾದ ಮಂಡಲ ಕಲೆ ಮೊದಲಾದವು ಗಮನಸೆಳೆದವು. 

ADVERTISEMENT

ಇಲ್ಲಿ ನಡೆದ ಶಿಬಿರದಲ್ಲಿ ಶಿಲ್ಪಕಲಾ ಕಲಾವಿದರು ಸಿದ್ಧಪಡಿಸಿರುವ ಭಿತ್ತಿಶಿಲ್ಪಗಳು ಕಾವಾದ ಗೋಡೆಗಳನ್ನು ಅಲಂಕರಿಸಿ, ಕಲಾತ್ಮಕ ಮೆರುಗು ನೀಡುತ್ತಿದೆ. ಮೈಸೂರು ಸಾಂಪ್ರದಾಯಿಕ ಕಲೆ ಆಕರ್ಷಿಸಿತು.

ಚಿತ್ರಕಲೆ, ಅನ್ವಯಿಕ ಕಲೆ, ಛಾಯಾಚಿತ್ರ, ಶಿಲ್ಪಕಲೆ, ಸಾಂಪ್ರದಾಯಿಕ ಚಿತ್ರಕಲೆ, ಕರಕುಶಲ ಕಲೆ, ಗ್ರಾಫಿಕ್ ಕಲೆ, ಸ್ಥಳದಲ್ಲೇ ಚಿತ್ರಬಿಡಿಸುವುದು, ಜೇಡಿ ಮಣ್ಣಿನ ಕಲಾಕೃತಿಗಳ ತಯಾರಿ ಸೇರಿದಂತೆ 13 ವಿಭಾಗಗಳಲ್ಲಿ ವಿಜೇತರಾದ 39 ಮಂದಿಗೆ ಬಹುಮಾನ ವಿತರಿಸಲಾಯಿತು.

ಕಲಿಕೆ ದೊಡ್ಡ ಸವಾಲು:

ಕಲಾಜಾತ್ರೆಗೆ ಚಾಲನೆ ನೀಡಿದ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್‌ ಸೇಠ್, ‘ಪ್ರಸ್ತುತ ಸಾಂಪ್ರದಾಯಿಕ ಕಲೆಗಳ ಕಲಿಕೆ ದೊಡ್ಡ ಸವಾಲಾಗಿದೆ. ಪೋಷಕರು ಇಂಗ್ಲಿಷ್‌ ವ್ಯಾಮೋಹದಲ್ಲಿ ಮುಳುಗಿರುವುದರಿಂದಲೋ ಅಥವಾ ಮಕ್ಕಳನ್ನು ವೈದ್ಯ, ಎಂಜಿನಿಯರ್ ವೃತ್ತಿಯಲ್ಲಿ ನೋಡುವ ಹೆಬ್ಬಯಕೆಯೋ ಇದಕ್ಕೆ ಕಾರಣವಾಗಿದೆ. ಸಾಂಪ್ರದಾಯಿಕ ಕಲೆಗಳ ಕಲಿಕೆಯ ಮೂಲಕ ಅದನ್ನೇ ವೃತ್ತಿ ಮಾಡಿಕೊಳ್ಳಲು ಅನೇಕ ಸವಾಲುಗಳನ್ನು ಎದುರಿಸಬೇಕಾಗಿದೆ’ ಎಂದು ಹೇಳಿದರು.

‘ಪ್ರಸ್ತುತ ಪ್ರತಿ ವಸ್ತುಗಳ ತಯಾರಿಯಲ್ಲಿ ಯಂತ್ರೋಪಕರಣಗಳ ಬಳಕೆ ಅತಿಯಾಗಿದೆ. ಆದರೆ, ಕಲಾಕೃತಿಗಳನ್ನು ಸಿದ್ಧಪಡಿಸಲು ಮನುಷ್ಯನ ಕೈಚಳಕದ ಮುಂದೆ ಬೇರಾವ ಯಂತ್ರೋಪಕರಣಗಳೂ ಸಾಟಿ ಆಗಲಾರವು. ಕುಸುರಿ ಕಲೆ ಸುಲಭದ್ದಲ್ಲ’ ಎಂದರು.

‘ಇಂದಿನ ಮಕ್ಕಳು ಆಟೋಟ, ವ್ಯಾಯಾಮದಂತಹ ದೈಹಿಕ ಚಟುವಟಿಕೆಗಳನ್ನು ಬಿಟ್ಟು ಮೊಬೈಲ್ ಫೋನ್‌ನಲ್ಲಿ ಮುಳುಗುತ್ತಿರುವುದು ಕಂಡುಬರುತ್ತಿದೆ. ಶಾಲಾ– ಕಾಲೇಜುಗಳು ಪಾಠಕ್ಕೆ ಸೀಮಿತಗೊಂಡಿದ್ದು, ಕಲೆ ಮತ್ತು ಸಂಸ್ಕೃತಿ ಮೂಲಕ ಕಲಿಸುವಂತಾಗಬೇಕು. ಆ ಮೂಲಕ ನಮ್ಮ ಕಲೆ– ಸಂಸ್ಕೃತಿಯನ್ನು ಬೆಳೆಸುವಂತಾಗಬೇಕು’ ಎಂದು ಆಶಿಸಿದರು.

ಶಿಲ್ಪಕಲಾ‌ ಅಕಾಡೆಮಿ ಮಾಜಿ ಅಧ್ಯಕ್ಷ ವೆಂಕಟಾಚಲಪತಿ, ಲಲಿತಕಲೆ ಉಪ ಸಮಿತಿ ಅಧ್ಯಕ್ಷ ರಘುರಾಮರಾಜೇ ಅರಸ್, ಉಪಾಧ್ಯಕ್ಷರಾದ ಭಾಸ್ಕರ್, ಬಸವರಾಜ್, ರಾಜೇಶ್, ಕಾವಾ ಡೀನ್ ಎ.ದೇವರಾಜು, ಆಡಳಿತಾಧಿಕಾರಿ ನಿರ್ಮಲಾ ಎಸ್. ಮಠಪತಿ, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಮಂಜು ಪ್ರಸಾದ್, ಕಾರ್ಯದರ್ಶಿ‌ ಸೂರ್ಯ‌ ಭಾಗವಹಿಸಿದ್ದರು.

ಕಲಾಜಾತ್ರೆಯಲ್ಲಿ ಆಸಕ್ತರು ಕಲಾಕೃತಿಗಳನ್ನು ವೀಕ್ಷಿಸಿದರು
ಮೊಬೈಲ್‌ ನಂಬಿದರೆ ಗುಂಡಿ!
ಸಾಮಾಜಿಕ ಜಾಲತಾಣದ ವ್ಯಸನದ ದುಷ್ಪರಿಣಾಮ ಬಿಂಬಿಸುವ ‘ಕಲೆ’ ಗಮನಸೆಳೆಯಿತು. ಮೊಬೈಲ್‌ ಫೋನ್‌ನಲ್ಲಿ ವಾಟ್ಸ್‌ಆ್ಯಪ್‌ ಫೇಸ್‌ಬುಕ್‌ ಯೂಟ್ಯೂಬ್‌ ಇನ್‌ಸ್ಟಗ್ರಾಂ ಎಕ್ಸ್‌ ಮೊದಲಾದವುಗಳನ್ನು ನೋಡುತ್ತಾ ಮುಳುಗಿದರೆ ಕೊನೆಗೆ ಗುಂಡಿಗೆ ಬೀಳಬೇಕಾಗುತ್ತದೆ ಎಂಬ ಸಂದೇಶವನ್ನು ಅದು ಕಟ್ಟಿಕೊಟ್ಟಿತು. ಇಂದಿನ ಮಕ್ಕಳಿಂದ ಹಿಡಿದು ಎಲ್ಲ ವಯೋಮಾನದರು ಎಷ್ಟರ ಮಟ್ಟಿಗೆ ಮೊಬೈಲ್‌ ಫೋನ್‌ಗೆ ದಾಸರಾಗಿದ್ದಾರೆ ಎಂಬುದನ್ನು ಅದು ಬಿಂಬಿಸಿತು. ಭ್ರೂಣವೂ ಮೊಬೈಲ್‌ ಫೋನ್‌ ಹಿಡಿದುಕೊಂಡಿರುವ ಕಲಾಕೃತಿ ಗಮನಸೆಳೆಯಿತು. ‘ಸಾಮಾಜಿಕ ಜಾಲತಾಣದ ಬಲೆ’ಯಲ್ಲಿ ಸಿಲುಕಿದ ಮನುಷ್ಯರ ಪಾಡನ್ನು ಅದು ಚಿತ್ರಿಸಿತು.
ಪರಂಪರೆ ಮುಂದುವರಿಸಲು...
ಬೆಂಗಳೂರಿನ ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಪ್ರಾದೇಶಿಕ ನಿರ್ದೇಶಕ ಡಿ. ಮಹೇಂದ್ರ ‘ಮೈಸೂರಿನಲ್ಲಿ ಕಲೆ ಸಂಸ್ಕೃತಿಗೆ ಬಹಳ ಪ್ರೋತ್ಸಾಹ ಇದೆ. ಅದು ಯಾವ ರಾಜರ ಆಸ್ಥಾನದಲ್ಲೂ ನಡೆದಿಲ್ಲ. ಇದು ಮೈಸೂರಿನ ಹಿರಿಮೆ. ಆ ಪರಂಪರೆಯನ್ನು ‌ಸರ್ಕಾರ ಮುಂದುವರಿಸಿಕೊಂಡು ಬರುತ್ತಿರುವುದು ಒಳ್ಳೆಯ ಬೆಳವಣಿಗೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ಎಂ.ಸಿ.ರಮೇಶ್ ‘ಡಿಜಿಟಲ್ ಆರ್ಟ್ ಎಐ ಮಾಧ್ಯಮ ಶಿಲ್ಪಕಲೆಯಲ್ಲಿ ಬಹಳಷ್ಟು ಬದಲಾವಣೆಗಳನ್ನು ತಂದಿದೆ. 3ಡಿ ಡಿಜಿಟಲ್ ಪ್ರಿಂಟ್ ಕೂಡ (360 ಡಿಗ್ರಿ ಡಿಜಿಟಲ್ ಆರ್ಟ್) ತೆಗೆದುಕೊಳ್ಳಬಹುದಾಗಿದೆ. ಅಷ್ಟರ ಮಟ್ಟಿಗೆ ತಂತ್ರಜ್ಞಾನ ಮುಂದುವರಿದಿದೆ’ ಎಂದರು. ಮುಂಬೈನ ಅನಿಮೇಷನ್‌ ಕಲಾವಿದ ಕಾವಾದ ಹಳೆಯ ವಿದ್ಯಾರ್ಥಿ ವೈಭವ್ ಕುಮರೇಶ್ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.