ADVERTISEMENT

ಚಟುವಟಿಕೆ ಆಧರಿಸಿದ ಕಲಿಕೆಗೆ ಒತ್ತು: ರಾಮಚಂದ್ರರಾಜೇ ಅರಸ್

ಶಿಕ್ಷಕರಿಗೆ ಡಿಡಿಪಿಐ

​ಪ್ರಜಾವಾಣಿ ವಾರ್ತೆ
Published 31 ಜನವರಿ 2023, 12:37 IST
Last Updated 31 ಜನವರಿ 2023, 12:37 IST
ಮೈಸೂರು ತಾಲ್ಲೂಕಿನ ಕೀಳನಪುರ ಗ್ರಾಮದಲ್ಲಿ ಸೋಮವಾರ ನಡೆದ ಕಲಿಕಾ ಹಬ್ಬದ ಮೆರವಣಿಗೆಗೆ ಡಿಡಿಪಿಐ ರಾಮಚಂದ್ರರಾಜೇ ಅರಸ್ ಚಾಲನೆ ನೀಡಿದರು
ಮೈಸೂರು ತಾಲ್ಲೂಕಿನ ಕೀಳನಪುರ ಗ್ರಾಮದಲ್ಲಿ ಸೋಮವಾರ ನಡೆದ ಕಲಿಕಾ ಹಬ್ಬದ ಮೆರವಣಿಗೆಗೆ ಡಿಡಿಪಿಐ ರಾಮಚಂದ್ರರಾಜೇ ಅರಸ್ ಚಾಲನೆ ನೀಡಿದರು   

ಮೈಸೂರು: ‘ಚಟುವಟಿಕೆ ಆಧರಿಸಿದ ಹಾಗೂ ಸಂತಸದಾಯಕ ಕಲಿಕೆಗೆ ‌ಶಿಕ್ಷಕರು ಹೆಚ್ಚಿನ ಒತ್ತು ನೀಡಬೇಕು’ ಎಂದು ಡಿಡಿಪಿಐ ರಾಮಚಂದ್ರರಾಜೇ ಅರಸ್ ಹೇಳಿದರು.

ತಾಲ್ಲೂಕಿನ ಕೀಳನಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಶಿಕ್ಷಣ ಇಲಾಖೆಯಿಂದ ಸೋಮವಾರ ಆಯೋಜಿಸಿದ್ದ ಕೀಳನಪುರ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕೋವಿಡ್ ಸಾಂಕ್ರಾಮಿಕವು ಮಕ್ಕಳ ಕಲಿಕಾ ಸಾಮರ್ಥ್ಯದ ಮೇಲೆ ದುಷ್ಪರಿಣಾಮ ಬೀರಿದೆ. ಹಾಗಾಗಿ ಅವರ ಕಲಿಕಾ ಮಟ್ಟ ಉತ್ತಮಗೊಳಿಸಲು 2023ನೇ ಶೈಕ್ಷಣಿಕ ವರ್ಷವನ್ನು ಕಲಿಕಾ ಚೇತರಿಕೆ ವರ್ಷ ಎಂದು ಘೋಷಿಸಿದ್ದು, ಈಗಾಗಲೇ ಶಾಲೆಗಳಲ್ಲಿ ಅನುಷ್ಠಾನಗೊಂಡಿದೆ. ಇದರ ಭಾಗವಾಗಿ ಎಲ್ಲೆಡೆಯೂ ಕಲಿಕಾ ಹಬ್ಬ ಕಾರ್ಯಕ್ರಮ ನಡೆಸಲಾಗುತ್ತಿದೆ. ಮಕ್ಕಳನ್ನು ಓದಿನತ್ತ ಸೆಳೆಯುವುದು ಈ ಚಟುವಟಿಕೆಯ ಉದ್ದೇಶವಾಗಿದೆ’ ಎಂದರು.

ADVERTISEMENT

‘ನೋಡಿ ತಿಳಿ, ಮಾಡಿ ಕಲಿ ಅಂಶದಡಿ ಚಟುವಟಿಕೆ ಮೂಲಕ ಮಕ್ಕಳ ಕಲಿಕಾ ಮಟ್ಟ ಹೆಚ್ಚಿಸಲು ಈ ಕಾರ್ಯಕ್ರಮ ಸಹಕಾರಿಯಾಗಿದೆ. ಪ್ರಾಯೋಗಿಕ, ವೈಜ್ಞಾನಿಕ ಹಾಗೂ ಕ್ರಿಯಾತ್ಮಕ ಕಲಿಕೆಯನ್ನು ಅಭಿವೃದ್ಧಿಪಡಿಸುತ್ತದೆ. ಮಕ್ಕಳು ತಮ್ಮ ಕೌಶಲ ಪ್ರದರ್ಶಿಸಲು ಮತ್ತು ಹೊಸ ವಿಷಯ ಅರಿತುಕೊಳ್ಳಲು ಸಹಕಾರಿ’ ಎಂದು ಹೇಳಿದರು.

ಮುಖ್ಯ ಶಿಕ್ಷಕ ಮಾಲಂಗಿ ಸುರೇಶ್ ಮಾತನಾಡಿ, ‘ಚಟುವಟಿಕೆ ಅಧಾರಿತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ’ ಎಂದರು.

ಎತ್ತಿನ ಗಾಡಿಯಲ್ಲಿ ಮೆರವಣಿಗೆ: ಇದಕ್ಕೂ ಮುನ್ನ ನಡೆದ ಎತ್ತಿನ ಗಾಡಿ ಮೆರವಣಿಗೆಗೆ ಡಿಡಿಪಿಐ ಚಾಲನೆ ನೀಡಿದರು. ಬಾಲಕಿಯರು ಕುಂಭ ಹೊತ್ತು ಹೆಜ್ಜೆ ಹಾಕಿದರು. ಗ್ರಾಮದ ಬಸ್ ನಿಲ್ದಾಣದಿಂದ ಮುಖ್ಯ ರಸ್ತೆ ಮೂಲಕ ಶಾಲೆವರೆಗೆ ಮೆರವಣಿಗೆ ನಡೆಯಿತು. ವಿವಿಧ ಕಲಾ ತಂಡಗಳು ಮೆರವಣಿಗೆಗೆ ಮೆರಗು ನೀಡಿದವು.

ಮುಖಂಡ ಮಹದೇವಪ್ಪ, ಎಪಿಸಿ ಸುರೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮೈಸೂರು ಜಿಲ್ಲಾ ಘಟಕದ ಖಜಾಂಚಿ ಮಹದೇವ, ಸಿಆರ್‌ಪಿ ಶಿಲ್ಪಾ, ಎಸ್‌ಡಿಎಂಸಿ ಅಧ್ಯಕ್ಷ ಮಲ್ಲು, ನಾಗರಾಜು, ಸಿದ್ದಲಿಂಗಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.