ADVERTISEMENT

ಮೈಸೂರು: ‘ಮತ್ತೆ ಕಲ್ಯಾಣ’ಕ್ಕೆ ನಾಂದಿ

500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಬೃಹತ್ ಮಾನವ ಸರಪಳಿ

​ಪ್ರಜಾವಾಣಿ ವಾರ್ತೆ
Published 30 ಜುಲೈ 2019, 19:45 IST
Last Updated 30 ಜುಲೈ 2019, 19:45 IST
‘ಮತ್ತೆ ಕಲ್ಯಾಣ’ದ ಸಂಚಾರ ರಥಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮಂಗಳವಾರ ಮೈಸೂರಿನಲ್ಲಿ ಚಾಲನೆ ನೀಡಲಾಯಿತು. ಸಾಹಿತಿ ಓ.ಎಲ್.ನಾಗಭೂಷಣಸ್ವಾಮಿ, ರಂಗಕರ್ಮಿ ಜನಾರ್ದನ್ ಹಾಗೂ ಇತರರು ಇದ್ದಾರೆ
‘ಮತ್ತೆ ಕಲ್ಯಾಣ’ದ ಸಂಚಾರ ರಥಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮಂಗಳವಾರ ಮೈಸೂರಿನಲ್ಲಿ ಚಾಲನೆ ನೀಡಲಾಯಿತು. ಸಾಹಿತಿ ಓ.ಎಲ್.ನಾಗಭೂಷಣಸ್ವಾಮಿ, ರಂಗಕರ್ಮಿ ಜನಾರ್ದನ್ ಹಾಗೂ ಇತರರು ಇದ್ದಾರೆ   

ಮೈಸೂರು: ಸಹಮತ ವೇದಿಕೆ ಸೇರಿದಂತೆ ಹಲವು ಸಂಘ ಸಂಸ್ಥೆಗಳ ವತಿಯಿಂದ ಆಗಸ್ಟ್‌ನಲ್ಲಿ ರಾಜ್ಯದಾದ್ಯಂತ ನಡೆಯಲಿರುವ ‘ಮತ್ತೆ ಕಲ್ಯಾಣ’ ಕುರಿತು ಅರಿವು ಮೂಡಿಸಲು ಮಂಗಳವಾರ ಇಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬೃಹತ್ ಮಾನವ ಸರಪಳಿ ರಚಿಸಿದರು.

ಇಲ್ಲಿನ ಕೋಟೆ ಆಂಜನೇಯಸ್ವಾಮಿ ದೇಗುಲದ ಮುಂದಿನ ಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಪರಸ್ಪರ ಕೈ ಹಿಡಿದು ಸಮಬಾಳಿನ ಸಂದೇಶ ಸಾರಿದರು. ಜಾತಿ ಬೇಧ ಮರೆದು ಎಲ್ಲರೂ ಒಂದಾಗಬೇಕು ಎಂಬ ಕರೆಯನ್ನಿತ್ತರು.

ಇದಕ್ಕೂ ಮುನ್ನ ಇವರು ಪುರಭವನದ ಆವರಣದಿಂದ ದೊಡ್ಡ ಗಡಿಯಾರದ ಮೂಲಕ ಚಾಮರಾಜೇಂದ್ರ ವೃತ್ತಕ್ಕೆ ಮೆರವಣಿಗೆ ಮೂಲಕ ಬಂದರು. ಮೆರವಣಿಗೆಯುದ್ದಕ್ಕೂ ವಚನ ಕ್ರಾಂತಿಯ ಸಂದೇಶಗಳನ್ನು ಸಾರುವ ಭಿತ್ತಿಪತ್ರಗಳನ್ನಿಡಿದು ಗಮನ ಸೆಳೆದರು.

ADVERTISEMENT

ಪುರಭವನದ ಆವರಣದಲ್ಲಿ ‘ಮತ್ತೆ ಕಲ್ಯಾಣ’ದ ಪ್ರಚಾರ ರಥಕ್ಕೆ ಗಣ್ಯರು ಚಾಲನೆ ನೀಡಿದರು. ಈ ರಥವು ಆಗಸ್ಟ್ 1ರಂದು ತಿ.ನರಸೀಪುರ, 2ರಂದು ಎಚ್.ಡಿ.ಕೋಟೆ ಮತ್ತು ಹುಣಸೂರು, 3ರಂದು ಪಿರಿಯಾಪಟ್ಟಣ ಹಾಗೂ ಕೆ.ಆರ್.ನಗರಕ್ಕೆ ಸಂಚರಿಸಲಿದೆ.

ಶಾಲಾ ಕಾಲೇಜುಗಳಿಗೆ ಹೋಗಿ ವಿದ್ಯಾರ್ಥಿಗಳಿಗೆ ‘ಮತ್ತೆ ಕಲ್ಯಾಣ’ ಕಾರ್ಯಕ್ರಮದ ಸ್ವರೂಪ, ಅದರ ಜರೂರು, ಅದರಲ್ಲಿನ ಅಂಶಗಳನ್ನು ಕುರಿತು ಮಾಹಿತಿ ನೀಡಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಸಾಹಿತಿ ಓ.ಎಲ್.ನಾಗಭೂಷಣರಾವ್, ‘12ನೇ ಶತಮಾನದಲ್ಲಿ ನಡೆದ ವಚನ ಕ್ರಾಂತಿಯ ಮೌಲ್ಯಗಳನ್ನು ಪುನರ್‌ ಮನನ ಮಾಡಿಕೊಳ್ಳುವುದೇ ‘ಮತ್ತೆ ಕಲ್ಯಾಣ’ದ ಉದ್ದೇಶ’ ಎಂದು ಹೇಳಿದರು.

‘ಕಲ್ಯಾಣದ ತತ್ವಗಳು ನಿತ್ಯ ನೆನಪಾಗಬೇಕು. ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಿತ್ಯ ಕಲ್ಯಾಣವಾಗಬೇಕು’ ಎಂದು ಅಭಿಪ್ರಾಯಪಟ್ಟರು.

ರಂಗಕರ್ಮಿ ಎಚ್.ಜನಾರ್ದನ್ ಮಾತನಾಡಿ, ‘ವಚನ ಚಳವಳಿಯ ಎಲ್ಲ ತತ್ವಗಳೂ ಇಂದು ದೂಳಿಪಟವಾಗಿದೆ. ಮುಂದಿನ ಪೀಳಿಗೆಗೆ ಇದನ್ನು ಕೊಂಡೊಯ್ಯಬೇಕಿದೆ. ಇದಕ್ಕಾಗಿ ‘ಮತ್ತೆ ಕಲ್ಯಾಣ’ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.‌

ನಟರಾಜ, ಜೆಎಸ್ಎಸ್, ಸಿದ್ಧಾರ್ಥನಗರ, ವಿಶ್ವಕವಿ ಕುವೆಂಪು, ಮಹಾರಾಜ ಹಾಗೂ ಇತರೆ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸಂಚಾಲಕರಾದ ಶರಣ ಮಹದೇವಪ್ಪ, ಗೋಪಾಲಕೃಷ್ಣ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಶರಣ ಸಾಹಿತ್ಯ ಪರಿಷತ್ತಿನ ಗೊ.ರು.ಪರಮೇಶ್ವರಪ್ಪ, ಶಿವಶಂಕರ್, ಲಿಂಗಾಯತ ಮಹಾಸಭೆಯ ನಂಜುಂಡಸ್ವಾಮಿ, ಲೋಕೇಶ್, ಗಂಗಾಧರಸ್ವಾಮಿ, ಕರ್ನಾಟಕ ಕಲಾಕೂಟದ ಎಂ.ಚಂದ್ರಶೇಖರ್ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.