
ಮೈಸೂರು: ಮಾರುಕಟ್ಟೆಯಲ್ಲಿ ಹೂವುಗಳ ಧಾರಣೆಯು ಏಕಾಏಕಿ ಕುಸಿದಿದ್ದು, ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.
ಮದುವೆ ಮೊದಲಾದ ಶುಭ ಸಮಾರಂಭಗಳ ನಡುವೆಯೂ ಬೆಲೆಯು ಕುಸಿಯುತ್ತಿದೆ. ಮಂಗಳವಾರ ಬೆಳಿಗ್ಗೆ ಕನಕಾಂಬರ ಪ್ರತಿ ಕೆ.ಜಿ.ಗೆ ₹200–250 ಇದ್ದದ್ದು, ಮಧ್ಯಾಹ್ನದ ಹೊತ್ತಿಗೆ ಕೇವಲ ₹160ಕ್ಕೆ ಮಾರಾಟವಾಯಿತು. ಬೇಡಿಕೆ ಇಲ್ಲದ ಕಾರಣಕ್ಕೆ ವರ್ತಕರು ಹೂವು ಖರೀದಿಸಲು ನಿರಾಕರಿಸಿದರು.
ಇದು ಈಚಿನ ವರ್ಷಗಳಲ್ಲೇ ಕನಕಾಂಬರಕ್ಕೆ ದೊರೆತ ಅತ್ಯಂತ ಕನಿಷ್ಠ ಬೆಲೆ. ಕಳೆದ ವಾರವಷ್ಟೇ ಈ ಹೂವಿಗೆ ಪ್ರತಿ ಕೆ.ಜಿ.ಗೆ ₹600ರವರೆಗೂ ದರವಿದ್ದು, ವಾರದ ಅವಧಿಯಲ್ಲಿಯೇ ಕೆ.ಜಿ.ಗೆ ₹450ರಷ್ಟು ಕಡಿಮೆಯಾಗಿದೆ.
‘ಹಬ್ಬದ ಸಂದರ್ಭಗಳಲ್ಲಿ ಕನಕಾಂಬರ ಕೆ.ಜಿ.ಗೆ ₹2,500–3,000ದವರೆಗೂ ಮಾರಾಟವಾಗಿದ್ದು ಉಂಟು. ಸಾಮಾನ್ಯ ದಿನಗಳಲ್ಲಿ ಸರಾಸರಿ ₹500–600 ಬೆಲೆ ಇರುತ್ತದೆ. ಈಗ ಹೂವು ಕೊಯ್ದ ಕಾರ್ಮಿಕರಿಗೆ ಕೂಲಿ ನೀಡುವಷ್ಟು ಬೆಲೆಯೂ ಸಿಕ್ಕಿಲ್ಲ’ ಎಂದು ಹುಣಸೂರು ತಾಲ್ಲೂಕಿನ ಕೊಮ್ಮೇಗೌಡನಕೊಪ್ಪಲಿನಿಂದ ಮಾರುಕಟ್ಟೆಗೆ ಹೂವು ತಂದಿದ್ದ ಶರಾವತಿ ಬೇಸರ ವ್ಯಕ್ತಪಡಿಸಿದರು.
ಉಳಿದ ಹೂವುಗಳ ಬೆಲೆಯಲ್ಲೂ ಭಾರಿ ಇಳಿಕೆಯಾಗಿದೆ. ಶುಭ ಸಮಾರಂಭಗಳಲ್ಲಿ ಹೆಚ್ಚು ಬಳಕೆಯಾಗುವ ಮಲ್ಲಿಗೆ, ಕಾಕಡ ಹಾಗೂ ಬಿಡಿ ಗುಲಾಬಿ ಧಾರಣೆಯೂ ತಗ್ಗಿದೆ. ಚೆಂಡು ಹೂವನ್ನು ಕೇಳುವವರೇ ಇಲ್ಲದಂತಾಗಿದ್ದು, ಪ್ರತಿ ಕೆ.ಜಿ.ಗೆ ₹10ರ ದರವಿದೆ.
‘ತೀವ್ರ ಚಳಿಯ ಕಾರಣಕ್ಕೆ ಕಳೆದೆರಡು ತಿಂಗಳಿಂದ ಹೆಚ್ಚು ಹೂವು ಮಾರುಕಟ್ಟೆಗೆ ಬರುತ್ತಿರಲಿಲ್ಲ. ಹೀಗಾಗಿ ಬೇಡಿಕೆ ಇರದಿದ್ದರೂ ಸರಾಸರಿ ಬೆಲೆ ಸಿಗುತ್ತಿತ್ತು. ಆದರೆ ಕಳೆದೆರಡು ವಾರಗಳಿಂದ ಹೂವಿನ ಆವಕ ಹೆಚ್ಚಿದ್ದು, ಬೆಲೆ ಕುಸಿಯುತ್ತಿದೆ’ ಎಂದು ಮಾರುಕಟ್ಟೆಯ ವರ್ತಕ ಗಣೇಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.